ಮೈಸೂರು: ಜಿಲ್ಲಾ ಪಂಚಾಯಿತಿಯಿಂದ ರೂಪಿಸಿದ ಯೋಜನೆ ಹಾಗೂ ಕೂಲಿಕಾರರ ಶ್ರಮದ ಫಲವಾಗಿ ಜಿಲ್ಲೆಯ ಕೆರೆ ಮತ್ತು ಕಲ್ಯಾಣಿಗಳಿಗೆ ಪುನಶ್ಚೇತನದ ಭಾಗ್ಯ ದೊರೆಯುತ್ತಿದೆ.
ಕಾಮಗಾರಿ ಪೂರ್ಣಗೊಂಡಿರುವ ಕೆರೆಗಳಲ್ಲಿ ಪೂರ್ವ ಮುಂಗಾರಿನ ಕಾರಣದಿಂದ ಜಲರಾಶಿ ಕಂಡುಬರುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ–ನರೇಗಾ) ಯೋಜನೆಯಡಿ ದೊರೆಯುವ ಅನುದಾನವನ್ನು ಜಲಮೂಲಗಳ ಸಂರಕ್ಷಣೆಗೆಂದು ಬಳಸಿಕೊಂಡು, ‘ಚೈತನ್ಯ’ ತುಂಬುವ ಕೆಲಸವನ್ನು ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ. ಇದಕ್ಕೆ ಜಿಲ್ಲಾ ಪಂಚಾಯಿತಿಯು ಮಾರ್ಗದರ್ಶನ ನೀಡಿ, ಮೇಲುಸ್ತುವಾರಿ ವಹಿಸುತ್ತಿದೆ.
ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಒಟ್ಟು 234 ಕೆರೆಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಈವರೆಗೆ 45 ಕೆರೆಗಳ ಅಭಿವೃದ್ಧಿ ಪೂರ್ಣಗೊಂಡಿದೆ. ಉಳಿದವುಗಳ ಪ್ರಗತಿಯು ವಿವಿಧ ಹಂತದಲ್ಲಿದೆ.
ನಳನಳಿಸುವಂತೆ ಮಾಡಲು: ಬಹುತೇಕ ಮುಚ್ಚಿ ಹೋಗಿದ್ದ, ಹೂಳು–ಜೊಂಡುಗಳಿಂದಲೇ ತುಂಬಿ ಹೋಗಿದ್ದ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಜನ–ಜಾನುವಾರುಗಳ ಜೀವನದೊಂದಿಗೆ ಹಾಸುಹೊಕ್ಕಾಗಿರುವ ಈ ಜಲಮೂಲಗಳು ಮತ್ತೊಮ್ಮೆ ನಳನಳಿಸುವಂತೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಆ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಗೆ ಸಹಕಾರಿಯಾಗುವ ಮತ್ತು ಜನ–ಜಾನುವಾರುಗಳ ಬಳಕೆಗೆ ನೀರು ದೊರೆಯುವ ಆಶಯವನ್ನು ಜಿಲ್ಲಾ ಪಂಚಾಯಿತಿ ಹೊಂದಿದೆ.
ಹಿಂದಿನ ಸಿಇಒ ಕೆ.ಎಂ. ಗಾಯಿತ್ರಿ ಅವರು ರೂಪಿಸಿದ್ದ ಯೋಜನೆಗೆ ಈಗಿನ ಸಿಇಒ ಎಸ್.ಯುಕೇಶ್‌ಕುಮಾರ್ ಅವರು ಚುರುಕು ನೀಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಿಡಿಒ ಮೊದಲಾದ ಅಧಿಕಾರಿಗಳು ಕಾಳಜಿ ವಹಿಸಿದ ಪರಿಣಾಮ, ಜಲಮೂಲಗಳು ಹೊಸ ಚೈತನ್ಯ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ.
ಹುಣಸೂರು ತಾಲ್ಲೂಕಿನ ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಹಳ್ಳಿಯ ಬೀರೇಶ್ವರ ದೇವಾಲಯದ ಆವರಣದಲ್ಲಿ ಬಹುತೇಕ ನಾಶದ ಅಂಚಿನಲ್ಲಿದ್ದ ಕಲ್ಯಾಣಿಗೆ ಮರುಜೀವ ನೀಡುವ ಕೆಲಸವನ್ನು ‘ಮ–ನರೇಗಾ’ ಯೋಜನೆಯಡಿ ಕೂಲಿಕಾರರು ನೀಡಿದ್ದಾರೆ. ತಂದ್ರೆ ಗ್ರಾಮ, ಮಾದಾಪುರ ಹಾಗೂ ನಾಗವಾಲದ ಕಲ್ಯಾಣಿಗಳೂ ಅಭಿವೃದ್ಧಿ ಕಂಡಿವೆ.
ಅವಕಾಶ ಬಳಸಿಕೊಂಡು: ‘ಖಾತ್ರಿ’ ಯೋಜನೆಯಡಿ ಇರುವ ಅವಕಾಶದಲ್ಲಿ ಕೆರೆಗಳು ಹಾಗೂ ಕಲ್ಯಾಣಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಆ ಭಾಗದ ಉದ್ಯೋಗ ಚೀಟಿ ಹೊಂದಿರುವ ಕೂಲಿಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು 1,15,351 ಮಾನವ ದಿನಗಳನ್ನು ಸೃಜಿಸಲಾಗಿದ್ದು, ₹4.14 ಕೋಟಿ ವಿನಿಯೋಗಿಸುವ ಯೋಜನೆ ರೂಪಿಸಲಾಗಿದೆ. ಯೋಜನೆಯಿಂದ ಸಾರ್ವಜನಿಕ ಆಸ್ತಿಯ ಸಂರಕ್ಷಣೆಯೂ ಸಾಧ್ಯವಾಗಿದ್ದು, ಸ್ಥಳೀಯವಾಗಿಯೇ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಂತಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.
‘ಕಲ್ಯಾಣಿಗಳ ಬಗ್ಗೆ ಜನರಲ್ಲಿ ಪೂಜ್ಯನೀಯ ಭಾವನೆ ಇದೆ. ಹೀಗಾಗಿ, ಅವುಗಳನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯರೇ ನಿರ್ವಹಣೆ ಮಾಡಿಕೊಂಡು ಹೋಗುತ್ತಾರೆ. ಈ ಕಾರಣದಿಂದ ಅವುಗಳಿಗೆ ಪುನರುಜ್ಜೀವನ ನೀಡುವ ಕೆಲಸವನ್ನೂ ಮಾಡಲಾಗುತ್ತಿದೆ’ ಎಂದು ಸಿಇಒ ಎಸ್.ಯುಕೇಶ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ದುಡಿಯುವ ಕೈಗಳಿಗೆ ಉದ್ಯೋಗ
ಜಲಮೂಲ ಸಂರಕ್ಷಣೆ ಬಹಳ ಮಹತ್ವದ್ದಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತದೆ. ಈ ಕಾರಣದಿಂದ ಆದ್ಯತೆ ನೀಡಲಾಗುತ್ತಿದೆಎಸ್.ಯುಕೇಶ್ ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.