ADVERTISEMENT

ಉತ್ತನಹಳ್ಳಿ ಕೆರೆಗೆ ಮರುಜೀವ: ನಡಿಗೆ ಪಥ, ಬದುಗಳ ನಿರ್ಮಾಣ

ನಡಿಗೆ ಪಥ, ಬದುಗಳ ನಿರ್ಮಾಣ l ದಶಕಗಳ ಹಿಂದೆ ಇಟ್ಟಿಗೆಗೆ ಕೆರೆ ಮಣ್ಣು ಬಳಕೆ

ಮೋಹನ್ ಕುಮಾರ ಸಿ.
Published 19 ಜೂನ್ 2025, 6:07 IST
Last Updated 19 ಜೂನ್ 2025, 6:07 IST
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಕೆರೆಯ ನೋಟ –ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಕೆರೆಯ ನೋಟ –ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.   

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನ ಕೆರೆಗಳಲ್ಲಿ ಈಗಲೂ ಜೀವ ಉಳಿಸಿಕೊಂಡಿರುವ ಜಲಮೂಲವೆಂದರೆ ಉತ್ತನಹಳ್ಳಿ ಕೆರೆ. 

ಉಳಿದೆಲ್ಲ ಕೆರೆಗಳು ತ್ಯಾಜ್ಯ ತುಂಬುವ ತಾಣಗಳಾಗಿ ಬದಲಾಗಿವೆ. ರಿಂಗ್ ರಸ್ತೆಯ ಸಮೀಪದಲ್ಲೇ ಇದ್ದರೂ ಜೀವಕಳೆ ತುಂಬಲು ಗ್ರಾಮಸ್ಥರು ಹಾಗೂ ಜ್ವಾಲಾಮುಖಿ ತ್ರಿಪುರಸುಂದರಿ ದೇವಿಯ ದೇಗುಲಕ್ಕೆ ಬರುವ ಜನರ ಶ್ರದ್ಧಾಭಕ್ತಿಯೂ ಕಾರಣವಾಗಿದೆ. 

ಧಾರ್ಮಿಕ ಪ್ರಾಧಾನ್ಯತೆ ತಳುಕು ಹಾಕಿಕೊಂಡಿರುವುದರಿಂದ ಕೆರೆಯ ಒಡಲಿನಲ್ಲಿ ಈಗ ತ್ಯಾಜ್ಯ ಕಾಣದು. ಪಂಚಾಯಿತಿಯವರು ಕೆರೆಯಲ್ಲಿ ಸೋಪಾನಕಟ್ಟೆ, ಕಲ್ಲಿನಿಂದ ಬದು ನಿರ್ಮಿಸಿದ್ದಾರೆ. ಏರಿ ಹಾಗೂ ಕೆರೆಯ ಸುತ್ತಲು ನಡೆಯುವ ಪಥ ನಿರ್ಮಿಸಿದ್ದಾರೆ.

ADVERTISEMENT

ನಡಿಗೆ ಪಥಕ್ಕೆ ‘ಸಿಮೆಂಟ್‌ ಇಂಟರ್‌ಲಾಕ್‌’ ಬಳಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಪರಿಸರ ಸ್ನೇಹಿಯಾಗಿ ಯೋಜನೆಯನ್ನು ರೂಪಿಸಬಹುದಿತ್ತು ಎಂಬ ಅಭಿಪ್ರಾಯವೂ ಪರಿಸರ ತಜ್ಞರಲ್ಲಿದೆ. 

ಈ ಹಿಂದೆಯೂ ವಾಟರ್‌ಟ್ಯಾಂಕ್‌ ಅನ್ನು ನಿರ್ಮಿಸಲಾಗಿತ್ತು. ಅದು ಕೆರೆಯ ಪರಿಸರಕ್ಕೆ ಧಕ್ಕೆ ತಂದಿತ್ತು. ಈಗಲೂ ಕಾಂಕ್ರೀಟ್‌ಮಯಗೊಳಿಸಲಾಗಿದೆ. ಕೆರೆಯ ಏರಿಯಲ್ಲದೇ ಕೋಡಿ ಜಾಗವನ್ನು ‘ಹೆಬ್ಬಾಳ ಕೆರೆ’ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬದುಗಳನ್ನು ಬಿಗಿಗೊಳಿಸಿದ್ದರೂ ಕಾಂಕ್ರೀಟ್‌ ಬಳಸಲಾಗಿದೆ. ಅಲ್ಲದೇ ನಡಿಗೆ ಪಥದಲ್ಲಿ ಕಂಬಿಗಳ ತಡೆಬೇಲಿ ಹಾಕಲಾಗಿದೆ. 

ವಿಸ್ತಾರದ ಕೆರೆ: ಚಾಮುಂಡಿ ಬೆಟ್ಟದ ತಪ್ಪಲಿನ ಕೆರೆಗಳೆಲ್ಲ ‍15 ಎಕರೆಗಿಂದ ಕಡಿಮೆ ವಿಸ್ತೀರ್ಣದವು. ಕಬಿನಿ ನದಿ ಕಣಿವೆಯತ್ತ ಓಡುವ ನೀರನ್ನು ತಡೆದು, ನೀರಾವರಿ ಹಾಗೂ ಕುಡಿಯಲು ಬಳಸಲು ಈ ಕೆರೆಗಳನ್ನು ನಿರ್ಮಿಸಲಾಗಿತ್ತು. ಸರ್ಕಾರಿ ಉತ್ತನಹಳ್ಳಿ ಕೆರೆಯ ಪೂರ್ವ ಹಾಗೂ ಪಶ್ಚಿಮದಲ್ಲಿ ಏರಿ ನಿರ್ಮಿಸಲಾಗಿದ್ದು, ಇದರ ವಿಸ್ತೀರ್ಣ 10.33 ಎಕರೆ. 

ಸರ್ವೆ ಸಂಖ್ಯೆ 46ರಲ್ಲಿರುವ ಕೆರೆಗೆ ಹೊಂದಿಕೊಂಡಂತೆ ಗ್ರಾಮವಿದ್ದು, ಈ ಮೊದಲು ಪ್ಲಾಸ್ಟಿಕ್ ತ್ಯಾಜ್ಯ, ಮಣ್ಣು ತುಂಬಿಸಲಾಗುತ್ತಿತ್ತು. ಈಗ ಅದಕ್ಕೆ ತಡೆ ಬಿದ್ದಿದೆ. ಕೆರೆಗೆ ನೀರು ಬರುವ ಭಾಗದಲ್ಲಿದ್ದ ಜೌಗನ್ನು ಪ್ರತ್ಯೇಕಗೊಳಿಸಲಾಗಿದೆ.

ಚಾಮುಂಡಿ ಬೆಟ್ಟದಿಂದ ಬರುವ ಮಳೆ ನೀರು ಭಾಗದಲ್ಲಿ ಬಡಾವಣೆಗಳು ಏಳುತ್ತಿದ್ದು, ನೀರಿನ ಹರಿವಿಗೂ ತೊಂದರೆಯಾಗಿದೆ. ಸಣ್ಣ ಕೊಳ ಹಾಗೂ ತೊರೆಗಳನ್ನು ಉಳಿಸಿಕೊಳ್ಳಬೇಕಿದೆ. ಕೆರೆಯ ಕೆಳಭಾಗದಲ್ಲಿ ತೋಟಗಳು, ಭತ್ತದ ಗದ್ದೆಗಳಿವೆ.  

ಅಳಿದ ಸರ್ಕಾರಿ ಕುಂಟೆ: ಗ್ರಾಮದ ಉತ್ತರ ಭಾಗದಲ್ಲಿನ ಸರ್ವೆ ಸಂಖ್ಯೆ 130ರಲ್ಲಿದ್ದ 38 ಗುಂಟೆ ವಿಸ್ತೀರ್ಣದ ಕುಂಟೆಯು ಬಡಾವಣೆ ಅಭಿವೃದ್ಧಿಗೆ ಮುಚ್ಚಿ ಹಾಕಲಾಗಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದ್ದ ಒಂದು ಎಕರೆಗಿಂತ ಕಡಿಮೆ ವಿಸ್ತೀರ್ಣದ ಕುಂಟೆಗಳು ಅವಸಾನಗೊಂಡಿವೆ. 

ಯು.ಎನ್‌.ರವಿಕುಮಾರ್‌

‘ಇಟ್ಟಿಗೆಗೂಡಿಗೆ ಕೆರೆ ಮಣ್ಣು’ 

‘ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೊದಲೆಲ್ಲ ಇಟ್ಟಿಗೆಗೂಡು ನಿರ್ಮಿಸಲು ಕೆರೆಯ ಮಣ್ಣನ್ನು ಬಳಸಲಾಗುತ್ತಿತ್ತು. ಹೀಗಾಗಿ ಹಲವು ಕೆರೆ ಕುಂಟೆಗಳು ನಿರ್ಮಾಣವಾದವು’ ಎಂದು ಜಲತಜ್ಞ ಯು.ಎನ್‌.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಉತ್ತನಹಳ್ಳಿ ಬಂಡಿಪಾಳ್ಯ ಸೇರಿದಂತೆ ತಪ್ಪಲಿನ ಗ್ರಾಮಸ್ಥರು ಕೆಂಪುಮಣ್ಣಿನಿಂದ ಇಟ್ಟಿಗೆ ಕೊಯ್ದು ಗೂಡು ನಿರ್ಮಿಸಿ ಸುಡುತ್ತಿದ್ದರು. ಅದಕ್ಕೆ ಬೆಟ್ಟದ ಮರಗಳೇ ಬಳಕೆ ಆಗುತ್ತಿತ್ತು. ಕೆಲ ದಶಕದ ಹಿಂದೆ ಕಡಿವಾಣ ಹಾಕಲಾಯಿತು. ಅದರಿಂದ ಅರಣ್ಯ ನಾಶವೂ ತಪ್ಪಿತು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.