ADVERTISEMENT

ರಸ್ತೆ ಅಪಘಾತ: ವ್ಯಕ್ತಿ ಸಾವು

ಮೈಸೂರಿನಲ್ಲಿ ಬಾಗಿಲು ಹಾಕಿದ ಮನೆಗಳಲ್ಲಿ ಕಳವು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 9:58 IST
Last Updated 19 ಫೆಬ್ರುವರಿ 2020, 9:58 IST
   

ಮೈಸೂರು: ನಗರದ ಆಕಾಶವಾಣಿ ಬಳಿ ಬುಧವಾರ ಬೈಕ್‌ ಸವಾರರೊಬ್ಬರು ಸಿಗ್ನಲ್‌ ಜಂಪ್ ಮಾಡುವಾಗ, ಮಿನಿ ಬಸ್‌ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರ ಗ್ರಾಮದ ನಾರಾಯಣಗೌಡ (50) ಮೃತರು.

ಕೆಲಸದ ನಿಮಿತ್ತ ನಾರಾಯಣಗೌಡ ಮೈಸೂರಿಗೆ ಬಂದಿದ್ದರು. ಸಿಗ್ನಲ್‌ ಬೀಳುವ ಮುನ್ನವೇ ದಾಟಲು ಮುಂದಾಗುತ್ತಿದ್ದಂತೆ, ಕೆಆರ್‌ಎಸ್‌ ಕಡೆಯಿಂದ ವೇಗವಾಗಿ ಬರುತ್ತಿದ್ದ ಎಸ್‌.ಎಸ್‌.ಟೆಕ್ನಾಲಜೀಸ್‌ನ ಮಿನಿ ಬಸ್‌ ಡಿಕ್ಕಿ ಹೊಡೆದಿದೆ. ಬೈಕ್‌ ಸವಾರ ಕೆಳಗೆ ಬಿದ್ದಿದ್ದಾರೆ. ಇವರ ತಲೆಯ ಮೇಲ್ಭಾಗ ಬಸ್‌ನ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹೆಲ್ಮೆಟ್ ಧರಿಸದ ನಾರಾಯಣಗೌಡ ಸಂಚಾರ ನಿಯಮ ಉಲ್ಲಂಘಿಸಿ ಸಿಗ್ನಲ್‌ ಜಂಪ್‌ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತರ ಕುಟುಂಬದವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿ.ವಿ.ಪುರಂ ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಮಾಹಿತಿ ನೀಡಿದರು.

ಟಾಟಾ ಸುಮೊಗೆ ಬೆಂಕಿ

ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಚನಹಳ್ಳಿಯಲ್ಲಿ ಮನೆ ಬಳಿ ನಿಲ್ಲಿಸಿದ್ದ ಟಾಟಾ ಸುಮೊಗೆ ಬೆಂಕಿ ತಗುಲಿದ್ದು, ಶೇ 20ರಷ್ಟು ಸುಟ್ಟು ಹೋಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಘಟನೆ ನಡೆದ ಪ್ರದೇಶದಲ್ಲಿ ಕಾವಲುಗಾರನಿದ್ದಾರೆ. ಬೆಂಕಿ ಯಾವ ರೀತಿ ತಗುಲಿದೆ ಎಂಬುದು ಗೊತ್ತಾಗಿಲ್ಲ. ವಾಹನದ ಮಾಲೀಕ ಯಾರೊಬ್ಬರ ವಿರುದ್ಧವೂ ಸಂಶಯ ವ್ಯಕ್ತಪಡಿಸಿ ದೂರು ನೀಡಲು ಮುಂದಾಗುತ್ತಿಲ್ಲ ಎಂಬುದು ತಿಳಿದು ಬಂದಿದೆ.

ಬೋಗಾದಿ: ಮನೆಯಲ್ಲಿ ಕಳವು

ಬೋಗಾದಿಯ ಎಸ್‌ಬಿಎಂ ಬಡಾವಣೆಯ ಎ ಬ್ಲಾಕ್‌ನ ಶಂಕರನಾರಾಯಣ ಎಂಬುವರ ಮನೆಯಲ್ಲಿ ಚಿನ್ನಾಭರಣ–ನಗದು ಕಳವಾಗಿವೆ.

ಶಂಕರನಾರಾಯಣ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಮರಳಿ ಬರುತ್ತಿದ್ದಂತೆ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.

ಮನೆಯ ಮುಂಬಾಗಿಲನ್ನು ಮೀಟಿ ತೆಗೆದಿರುವ ಕಳ್ಳರು, ಬೆಡ್‌ ರೂಮೊಂದರಲ್ಲಿದ್ದ ಮೂರು ಬೀರುಗಳಲ್ಲಿ, ಎರಡು ಬೀರ್‌ಗಳ ಬಾಗಿಲು ಮೀಟಿ ಲಾಕರ್ ತೆರೆದಿದ್ದಾರೆ. ಈ ಲಾಕರ್‌ಗಳಲ್ಲಿದ್ದ ಚಿನ್ನ–ಬೆಳ್ಳಿ ಆಭರಣ ಹಾಗೂ ನಗದನ್ನು ಕದ್ದೊಯ್ದಿದ್ದಾರೆ.

ಮನೆಯ ಇನ್ನೆರಡು ರೂಮುಗಳಲ್ಲಿನ ಬೀರುವಿನ ಬಾಗಿಲನ್ನು ಮೀಟಿ ತೆರೆದಿದ್ದು, ಚಿನ್ನಾಭರಣ–ನಗದು ಕಳವು ಮಾಡಿದ್ದಾರೆ. ಈ ಕೊಠಡಿಗಳನ್ನು ಹಾಗೂ ಅಲ್ಲಿರುವ ಬೀರನ್ನು ತಮ್ಮ ಮಕ್ಕಳು ಬಳಸುತ್ತಿದ್ದು, ಏನೇನು ಕಳವಾಗಿದೆ ಎಂಬುದನ್ನು ಕೇಳಿಕೊಂಡು ತಿಳಿಸುತ್ತೇವೆ ಎಂದು ಶಂಕರನಾರಾಯಣ ದೂರು ನೀಡಿದ್ದಾರೆ ಎಂದು ಸರಸ್ವತಿಪುರಂ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.