
ಹುಣಸೂರು (ಮೈಸೂರು ಜಿಲ್ಲೆ): ಇಲ್ಲಿನ ಬೈಪಾಸ್ ರಸ್ತೆಯಲ್ಲಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್’ ಚಿನ್ನಾಭರಣ ಮಳಿಗೆಗೆ ಭಾನುವಾರ ಮಧ್ಯಾಹ್ನ ನುಗ್ಗಿದ ಐವರು ಬಂದೂಕು ಧಾರಿಗಳು, ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿ ಚಿನ್ನಾಭರಣ ದೋಚಿದ್ದಾರೆ. ಹೋಗುವಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಸ್ಥಳದಲ್ಲಿ ಆತಂಕ ಉಂಟಾಗಿತ್ತು.
ದ್ವಿಚಕ್ರವಾಹನಗಳಲ್ಲಿ ಬಂದ ಐವರು, ಮಧ್ಯಾಹ್ನ 2.02ರ ಸುಮಾರಿಗೆ ಮಳಿಗೆಗೆ ನುಗ್ಗಿ 2.06ರೊಳಗೆ ಚಿನ್ನಾಭರಣ ತೆಗೆದುಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
‘ಇಬ್ಬರು ಮುಸುಕುಧಾರಿಗಳಾಗಿದ್ದರು. ಮೂವರ ಮುಖ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರ ಕೈಯಲ್ಲಿ ಎರಡೆರಡು ಗನ್ ಇದ್ದುದು, ಉಳಿದವರು ಒಂದು ಗನ್ ಹಿಡಿದಿದ್ದುದು ಸೆರೆಯಾಗಿದೆ. ಒಬ್ಬ ಹಿಂದಿಯಲ್ಲಿ ಮಾತನಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ.
‘ಬೆಳ್ಳಿ ಆಭರಣ ಹಾಗೂ ನಗದು ಮುಟ್ಟಿಲ್ಲ. ಕೆಲವೇ ನಿಮಿಷಗಳಲ್ಲಿ ಸಿಕ್ಕ ಬಂಗಾರದ ಸರಗಳನ್ನಷ್ಟೇ ದೋಚಿದ್ದಾರೆ. ಹೋಗುವಾಗ ಯಾರೂ ಹಿಂಬಾಲಿಸಬಾರದೆಂಬ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ’ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ಮಾಹಿತಿ ನೀಡಿದರು.
‘ತನಿಖೆಗೆ ಐದು ತಂಡ ರಚಿಸಲಾಗಿದೆ. ಎಷ್ಟು ಮೌಲ್ಯದ ಚಿನ್ನಾಭರಣ ದರೋಡೆಯಾಗಿದೆ ಎಂದು ತಿಳಿದುಬಂದಿಲ್ಲ. ಅಂಗಡಿಯಲ್ಲಿರುವ ಚಿನ್ನದ ದಾಸ್ತಾನು ಹಾಗೂ ಕಳೆದುಕೊಂಡಿರುವ ಚಿನ್ನಾಭರಣದ ಲೆಕ್ಕಾಚಾರದ ಬಳಿಕ ಅದರ ಬಗ್ಗೆ ತಿಳಿಯಲಿದೆ. ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಪರಿಶೀಲಿಸುತ್ತಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಸ್ಥಳಕ್ಕೆ ಬೆರಳಚ್ಚು ಮತ್ತು ಶ್ವಾನದಳ ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ರವಿ, ಸಿಪಿಐ ಸಂತೋಷ್ ಕಶ್ಯಪ್, ಅಪರಾಧ ವಿಭಾಗದ ಪಿಎಸ್‌ಐ ಜಮೀರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.