ADVERTISEMENT

ಭ್ರಷ್ಟಾಚಾರಕ್ಕೆ ಕಡಿವಾಣ ಬೀಳದಿದ್ದರೆ ಎಲ್ಲರಿಗೂ ಕಂಟಕ: ಎನ್‌.ಸಂತೋಷ್‌ ಹೆಗ್ಡೆ

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಡೆದ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 15:57 IST
Last Updated 17 ನವೆಂಬರ್ 2018, 15:57 IST
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‌‌ಕಾರ್ಯಾಗಾರದಲ್ಲಿ ‘ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಮಾಹಿತಿ ಪುಸ್ತಿಕೆಯನ್ನು ಎನ್‌.ಸಂತೋಷ್‌ ಹೆಗ್ಡೆ ಬಿಡುಗಡೆ ಮಾಡಿದರು. ಡಾ.ಭಾಮಿ ವಿ.ಶೆಣೈ, ಗುಂಡಪ್ಪ ಗೌಡ, ಖಜಾಂಚಿ ಎಸ್‌.ಎನ್‌.ಲಕ್ಷ್ಮಿನಾರಾಯಣ ಇದ್ದರು
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‌‌ಕಾರ್ಯಾಗಾರದಲ್ಲಿ ‘ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಮಾಹಿತಿ ಪುಸ್ತಿಕೆಯನ್ನು ಎನ್‌.ಸಂತೋಷ್‌ ಹೆಗ್ಡೆ ಬಿಡುಗಡೆ ಮಾಡಿದರು. ಡಾ.ಭಾಮಿ ವಿ.ಶೆಣೈ, ಗುಂಡಪ್ಪ ಗೌಡ, ಖಜಾಂಚಿ ಎಸ್‌.ಎನ್‌.ಲಕ್ಷ್ಮಿನಾರಾಯಣ ಇದ್ದರು   

ಮೈಸೂರು: ಸಮಾಜದಲ್ಲಿ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳ ಕುಸಿತದಿಂದ ಭ್ರಷ್ಟಾಚಾರ ಎಲ್ಲೆ ಮೀರಿ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ಎಲ್ಲರಿಗೂ ಕಂಟಕವಾಗಿ ಕಾಡಲಿದೆ ಎಂದು ನಿವೃತ್ತ ಲೋಕಾಯುಕ್ತ ಎನ್‌. ಸಂತೋಷ್‌ ಹೆಗ್ಡೆ ಎಚ್ಚರಿಕೆ ನೀಡಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‌‌‘ಭಾರತದಲ್ಲಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸುತ್ತಾರೆ. ಅದೇ ವ್ಯಕ್ತಿ ಚುನಾವಣೆಯಲ್ಲಿ ಗೆದ್ದು, ಸಚಿವರಾಗುತ್ತಾರೆ. ಅಂಥ ವ್ಯಕ್ತಿಗಳನ್ನು ಬಹಿಷ್ಕರಿಸುವಂತಹ ಶಕ್ತಿ ಈ ಸಮಾಜಕ್ಕೆ ಇಲ್ಲ. ಮೌಲ್ಯಗಳ ಕುಸಿತವೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‌‌ಭ್ರಷ್ಟ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಆದರೆ, ಅದಕ್ಕೆ ಇಂದಿನ ಯುವ ಪೀಳಿಗೆ ಸಂಕಲ್ಪ ತೊಡಬೇಕು. ಇರುವುದರಲ್ಲೇ ತೃಪ್ತಿ ಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಾಮಾಣಿಕತೆ, ಬದ್ಧತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಂಸತ್‌, ವಿಧಾನಸಭೆಯಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿಲ್ಲ. ಗಲಾಟೆ, ಗದ್ದಲದಲ್ಲೇ ಕಾಲ ಕಳೆಯುತ್ತಾರೆ. ಇದರಿಂದ ಸಾರ್ವಜನಿಕರ ಕೋಟ್ಯಂತರ ರೂಪಾಯಿ ಪೋಲಾಗುತ್ತಿದೆ ಎಂದು ದೂರಿದರು.

‌ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿಯ ಅರ್ಥ ಈಗ ಏನಾಗಿದೆ? ಕೆಪಿಎಸ್‌ಸಿಯ ಹಿಂದಿನ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಸಿಐಡಿ ಆರೋಪ ಪಟ್ಟಿ ಸಲ್ಲಿಸಿದೆ. ಅಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಂಜಿಪಿ ಸಂಸ್ಥೆಯ ಸಂಸ್ಥಾಪಕ ಡಾ.ಭಾಮಿ ವಿ.ಶೆಣೈ ಮಾತನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಖಜಾಂಚಿ ಎಸ್‌.ಎನ್‌.ಲಕ್ಷ್ಮಿನಾರಾಯಣ ಉಪಸ್ಥಿತರಿದ್ದರು.

‘ದೇಶ ಒಡೆಯಲು ಅವಕಾಶ ಕೊಡಬಾರದು’

ದೇಶವು ಒಂದೇ ಧರ್ಮ, ಭಾಷೆ, ಸಂಸ್ಕೃತಿಗೆ ಸೇರಿದ್ದಲ್ಲ. ಇಲ್ಲಿ ವೈವಿಧ್ಯಮಯ ಸಂಸ್ಕೃತಿ, ಧರ್ಮ, ಭಾಷೆಗಳಿವೆ. ಇದೇ ಭಾರತದ ಸೊಗಸು. ಆದರೆ, ಮಾನವೀಯತೆ, ತೃಪ್ತಿ ಇಲ್ಲದ ಮನಸ್ಸುಗಳು ಇರುವ ಕಡೆ ಇವುಗಳನ್ನು ಛಿದ್ರಛಿದ್ರ ಮಾಡಿಬಿಡಬಹುದು. ಇದರ ಬಗ್ಗೆ ಯುವ ಪೀಳಿಗೆ ಎಚ್ಚರಿಕೆ ವಹಿಸಬೇಕು ಎಂದು ಸಂತೋಷ್‌ ಹೆಗ್ಡೆ ಸಲಹೆ ನೀಡಿದರು.

ಭಾಷಾವಾರು ಪ್ರಾಂತ್ಯಗಳ ರಚನೆಗೆ ಅನೇಕರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆದರೆ, ಆಂಧ್ರಪ್ರದೇಶ ಎರಡು ರಾಜ್ಯಗಳಾಗಿ ವಿಭಜನೆ ಆಗಿದೆ. ಈಗ ರಾಯಲಸೀಮೆಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಕರ್ನಾಟಕದಲ್ಲೂ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂಬ ಕೂಗು ಎದ್ದಿದೆ. ಮುಂದೆ, ಹೈದರಾಬಾದ್‌ ಕರ್ನಾಟಕ, ಕೊಡಗು, ತುಳುನಾಡಿನ ಬೇಡಿಕೆ ಬರಬಹುದು. ಹೀಗೇ... ಮುಂದುವರೆದರೆ ದೇಶದ ಸ್ಥಿತಿ ಏನಾಗಬಹುದು ಎಂಬುದನ್ನು ಎಲ್ಲರೂ ಚಿಂತಿಸಬೇಕು ಎಂದು ಹೇಳಿದರು.

ಎಲ್ಲ ಹಗರಣಗಳಲ್ಲೂ ಅಧಿಕಾರಿಗಳ ಕೈವಾಡ

ದೇಶದಲ್ಲಿ ನಡೆದಿರುವ ಹಾಗೂ ನಡೆಯುವ ಎಲ್ಲ ಹಗರಣಗಳಲ್ಲೂ ಅಧಿಕಾರಿಗಳ ಕೈವಾಡ ಇದ್ದೇ ಇರುತ್ತದೆ. ನೀತಿ, ನಿಯಮಗಳಿಗೆ ಸಹಿ ಹಾಕುವವರೇ ಅಧಿಕಾರಿಗಳು. ಅವರ ಕೈವಾಡ ಇಲ್ಲದೆ ಯಾವುದೇ ಹಗರಣವೂ ನಡೆಯುವುದಿಲ್ಲ ಎಂದು ಸಂತೋಷ್‌ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.