ADVERTISEMENT

₹35 ಲಕ್ಷ ಮೌಲ್ಯದ ಶ್ರೀಗಂಧ ವಶ: ಬಂಧನ

ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್ದಾಗಲೇ ಸೆರೆ ಸಿಕ್ಕ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:27 IST
Last Updated 19 ಜನವರಿ 2021, 1:27 IST

ಮೈಸೂರು: ಇಲ್ಲಿನ ನೋಟು ಮುದ್ರಣ ಘಟಕದ ಆವರಣದ ಸಮೀಪ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕತ್ತರಿಸುತ್ತಿದ್ದ ಇಬ್ಬರು ಆರೋಪಿಗಳು ಸೇರಿದಂತೆ ಒಟ್ಟು ನಾಲ್ವರು ಗಂಧಚೋರರನ್ನು ಬಂಧಿಸಿರುವ ಮೇಟಗಳ್ಳಿ ಠಾಣೆ ಪೊಲೀಸರು ಅವರಿಂದ ₹ 35 ಲಕ್ಷ ಬೆಳೆ ಬಾಳುವ 230 ಕೆ.ಜಿ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಲ್ಲೂಕಿನ ಕಮ್ರಳ್ಳಿ ಗ್ರಾಮದ ರಘು (46), ಮಂಜುನಾಥ್, (22), ಲಷ್ಕರ್‌ಮೊಹಲ್ಲಾದ ಮಕ್ಬುಲ್‌ ಷರೀಫ್ (58) ಹಾಗೂ ಕಲ್ಯಾಣಗಿರಿಯ ಸಯ್ಯದ್‌ಗೌಸ್ ಮೊಯಿನುದ್ದೀನ್ (50) ಬಂಧಿತರು.

ಇವರಲ್ಲಿ ರಘು ಮತ್ತು ಮಂಜುನಾಥ್ ಗಂಧದ ಮರಗಳನ್ನು ಜ. 15ರಂದು ರಾತ್ರಿ ಕತ್ತರಿಸುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಇವರಿಂದ ಶ್ರೀಗಂಧವನ್ನು ಖರೀದಿಸುತ್ತಿದ್ದ ಮಕ್ಬುಲ್‌ ಷರೀಫ್ ಹಾಗೂ ಸಯ್ಯದ್‌ಗೌಸ್ ಮೊಯಿನುದ್ದೀನ್ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಇವರಲ್ಲಿ ಸಯ್ಯದ್‌ಗೌಸ್ ಮೊಯಿನುದ್ದೀನ್ ಕಳವು ಮಾಡಿದ ಗಂಧದ ಮರಗಳನ್ನು ಖರೀದಿಸಿದ್ದಕ್ಕೆ ಕಳೆದ ವರ್ಷವಷ್ಟೇ ಮಡಿಕೇರಿಯಲ್ಲಿ 84 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದ ಎಂದು ಅವರು ಹೇಳಿದ್ದಾರೆ.

ಡಿಸಿಪಿ ಗೀತಾಪ್ರಸನ್ನ, ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ಪಿಎಸ್‌ಐ ವಿಶ್ವನಾಥ್, ನಾಗರಾಜ್ ನಾಯಕ್, ಸಿಬ್ಬಂದಿಯಾದ ಪೊನ್ನಪ್ಪ, ಮಧುಕುಮಾರ್, ದಿವಾಕರ್, ಕೃಷ್ಣ, ರಾಜೇಶ್, ಪ್ರಶಾಂತ್‍ಕುಮಾರ್, ಸಿ.ಬಸವರಾಜು, ಶ್ರೀಶೈಲ ಹುಗ್ಗಿ, ಲಿಖಿತ್ ಆರ್. ಚೇತನ, ಆಶಾ, ಪ್ರಕಾಶ್, ಚಂದ್ರಕಾಂತ್ ತಳವಾರ್, ಮಣಿ ಕಾರ್ಯಾಚರಣೆ ತಂಡದಲ್ಲಿದ್ದರು.

ದೇವರಾಜ ಅರಸು ರಸ್ತೆಯಲ್ಲಿ ಇಬ್ಬರಿಗೆ ಚಾಕು ಇರಿತ
ಮೈಸೂರು:
ಇಲ್ಲಿನ ಜನನಿಬಿಡ ದೇವರಾಜ ಅರಸು ಅರಸು ರಸ್ತೆಯಲ್ಲಿ ಸೋಮವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಇಬ್ಬರಿಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ.

ರಂಜಿತ್ (26) ಮತ್ತು ಅರುಣ್ (26) ಚಾಕು ಇರಿತದಿಂದ ಗಾಯಗೊಂಡವರು. ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಡೀಕೇರಿಯಲ್ಲಿ ಗೋಬಿ ಮಂಚೂರಿ ಅಂಗಡಿ ನಡೆಸುತ್ತಿದ್ದ ರಂಜಿತ್‌ಗೂ ಜಯಕುಮಾರ್ ಎಂಬಾತನಿಗೂ ಈಚೆಗೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ರಂಜಿತ್ ತನ್ನ ಸ್ನೇಹಿತ ಅರುಣ್‌ ಜತೆ ದೇವರಾಜ ಅರಸು ರಸ್ತೆ ಹಾಗೂ ಜೆಎಲ್‌ಬಿ ರಸ್ತೆ ಸೇರುವ ಸಿಗ್ನಲ್‌ ಬಳಿ ನಿಂತಾಗ ಜಯಕುಮಾರ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿಕೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ದೇವರಾಜ ಠಾಣೆ ಇನ್‌ಸ್ಪೆಕ್ಟರ್ ದಿವಾಕರ್ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣ ಲಕ್ಷ್ಮೀಪುರಂ ಠಾಣೆಯಲ್ಲಿ ದಾಖಲಾಗಿದೆ. ಡಿಸಿಪಿ ಡಾ.ಎ.ಎನ್‌.ಪ್ರಕಾಶ್‌ಗೌಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.