ADVERTISEMENT

ಆರ್‌ಎಸ್‌ಎಸ್‌, ಮೋದಿ, ಸಂತೋಷ್ ವಿರುದ್ಧ ಮಾಜಿ ಸಂಸದ ಆರ್.ಧ್ರುವನಾರಾಯಣ್ ವಾಗ್ದಾಳಿ

ರಾಷ್ಟ್ರೀಯ ಸುಳ್ಳುಗಾರರ ಶಾಖೆ ಎಂದು ಟೀಕೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 9:41 IST
Last Updated 10 ಜುಲೈ 2020, 9:41 IST
ಆರ್‌.ಧ್ರುವನಾರಾಯಣ್
ಆರ್‌.ಧ್ರುವನಾರಾಯಣ್   

ಮೈಸೂರು: ‘ಆರ್‌ಎಸ್‌ಎಸ್‌ ಎಂದರೇ ರಾಷ್ಟ್ರೀಯ ಸುಳ್ಳುಗಾರರ ಶಾಖೆ’ ಎಂದು ಮಾಜಿ ಸಂಸದ ಆರ್‌.ಧ್ರುವನಾರಾಯಣ್ ಶುಕ್ರವಾರ ಇಲ್ಲಿ ಕಟುವಾಗಿ ಟೀಕಿಸಿದರು.

‘ಆರ್‌ಎಸ್‌ಎಸ್‌ ದೇಶಭಕ್ತರನ್ನು ರೂಪಿಸುತ್ತಿಲ್ಲ. ಸುಳ್ಳುಗಾರರನ್ನು ಸೃಷ್ಟಿಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮಾತಿನಿಂದಲೇ ಇದು ಸಾಬೀತಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಪ್ರಧಾನಿ ಮೋದಿ ಆತ್ಮನಿರ್ಭರ್‌ ಭಾರತ್ ಮಾಡುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರ ಭಾರತ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜನರನ್ನು ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿಸಿ, ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

ಅಂಬೇಡ್ಕರ್ ಮನೆ ಮೇಲಿನ ದಾಳಿ ಖಂಡಿಸಿದ ಧ್ರುವನಾರಾಯಣ್, ‘ಅಂಬೇಡ್ಕರ್ ದೇಶದ ಆಸ್ತಿ. ದಾಳಿ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ. ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಿ. ಕಾಂಗ್ರೆಸ್ ಸಹ ಈ ಕೃತ್ಯವನ್ನು ಖಂಡಿಸುತ್ತದೆ’ ಎಂದರು.

ಈಚೆಗೆ ನಡೆದ ಬಿಜೆಪಿಯ ಜನ ಸಂವಾದದಲ್ಲಿ ಬಿ.ಎಲ್.ಸಂತೋಷ್ ‘ಕೊಟ್ಟ ಕುದುರೆಯನ್ನು ಏರದವನು ವೀರನೂ ಅಲ್ಲ, ಶೂರನೂ ಅಲ್ಲ’ ಎಂದಿರುವುದಕ್ಕೆ ತಿರುಗೇಟು ನೀಡಿದ ಮಾಜಿ ಸಂಸದರು, ‘ಕಾಂಗ್ರೆಸ್ ಕುದುರೆಗಳನ್ನು ಖರೀದಿಸಿ ಸರ್ಕಾರ ರಚಿಸಿದವರು ನೀವು. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಮಾತು ಸರಿಯಾಗಿಯೇ ಇದೆ. ಆದರೆ ಇದು ಮೋದಿ ಆಡಳಿತಕ್ಕೆ ಸರಿ ಹೊಂದಲಿದೆ’ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಸರ್ಕಾರದ ವಿರುದ್ಧವೂ ಹರಿಹಾಯ್ದ ಅವರು, ‘ಕೋವಿಡ್‌ನ ಸಂಕಷ್ಟದ ಸಮಯದಲ್ಲೂ ಸಚಿವರ ಬದಲಾವಣೆಯೇ ಬಿಜೆಪಿ ಸಾಧನೆ. ಈ ಸಂಕಷ್ಟದ ಕಾಲದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಪತ್ರ ಬರೆದು ಸಲಹೆ ಕೊಟ್ಟಿದ್ದಾರೆ. ಖುದ್ದು ಭೇಟಿಯಾಗಿ ಚರ್ಚಿಸಿದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ ಉತ್ತಮ ಕೆಲಸವನ್ನೇ ನಿರ್ವಹಿಸುತ್ತಿದ್ದಾರೆ’ ಎಂದರು.

ವಿಶ್ವನಾಥ್‌ಗೆ ಟಾಂಗ್‌: ಪ್ರಧಾನಿ ಮೋದಿ ಅಹಿಂದ ನಾಯಕ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್‌ಗೂ ಧ್ರುವನಾರಾಯಣ್‌ ಟಾಂಗ್ ನೀಡಿದರು.

‘ಈ ಹಿಂದೆ ದೇಶದಲ್ಲಿ ಹಿಂದುಳಿದ ವರ್ಗಗಳಿಗಾಗಿ ಮಂಡಲ ಆಯೋಗ ರಚನೆ ಮಾಡಿದಾಗ, ಎಬಿವಿಪಿ ರಾಷ್ಟ್ರವ್ಯಾಪಿ ಹೋರಾಟ ಮಾಡಿತ್ತು. ವಿ.ಪಿ.ಸಿಂಗ್‌ಗೆ ಕೊಟ್ಟಿದ್ದ ಬೆಂಬಲ ವಾಪಸ್ ಪಡೆದಿರಿ. ಆಗ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರಲಿಲ್ವಾ. ಆಗ ನಿಮ್ಮ ಮೋದಿ ಎಲ್ಲೋಗಿದ್ರು..?’ ಎಂದು ತಿರುಗೇಟು ನೀಡಿದರು.

ಮೈಸೂರು ನಗರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡ ಎಚ್‌.ಎ.ವೆಂಕಟೇಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.