ಮೈಸೂರು: ‘ಗ್ರಾಮೀಣಾಭಿವೃದ್ಧಿಯು ಒಂದು ದಿನದಲ್ಲಿ ಸಾಧ್ಯವಾಗುವುದಿಲ್ಲ. ನಾವು ಆರೋಪಗಳನ್ನು ಬದಿಗಿರಿಸಿ, ಕೆಲಸಗಳಿಗೆ ಅಂಟಿಕೊಂಡು ಹಳ್ಳಿಗಳಿಗೆ ತೆರಳಬೇಕು’ ಎಂದು ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ 9ನೇ ‘ಮೈಸೂರು ಸಾಹಿತ್ಯ ಸಂಭ್ರಮ’ದಲ್ಲಿ ‘ಸಾಹಿತ್ಯ– ಸಿನಿಮಾ– ಹಳ್ಳಿ ಹಂಬಲದ ತೆಕ್ಕೆಯಲ್ಲಿ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಳ್ಳಿಗಳೆಂದರೆ ರೆಸಾರ್ಟ್ ಎಂಬ ಭಾವನೆಯಿಂದ ತೆರಳಬಾರದು. ಹಳ್ಳಿಗಳು ಕೆಲವೊಮ್ಮೆ ನಿಶ್ಚಲ, ನಿರ್ಜೀವವೆನಿಸುತ್ತದೆ. ಅಲ್ಲಿನ ವಾಸ್ತವವನ್ನು ಅರಿತು ಬೆರೆಯಬೇಕು. ಬದಲಾವಣೆಗೆ ಮುಂದಾಗಬೇಕು’ ಎಂದರು.
‘ನಾಗತಿಹಳ್ಳಿಗೆ ತೆರಳುವ, ಅಲ್ಲಿ ಕೆಲ ಅಭಿವೃದ್ಧಿ ಕೆಲಸಕ್ಕೆ ಮುಂದಾಗಿರುವ ನನ್ನ ನಿರ್ಧಾರವು ‘ರೆಕ್ಕೆ ಬೇರು’ ಎಂಬ ತತ್ವಕ್ಕೆ ಅಂಟಿಕೊಂಡಿದೆ. ಮನುಷ್ಯ ರೆಕ್ಕೆ ಬಿಚ್ಚಿ ಹಾರಬೇಕು, ಹಾರಿ ಹೀರಿದ್ದನ್ನು ಬೇರಿನ ಮೂಲಕ ಪಸರಿಸಬೇಕು. ಕುವೆಂಪು ಕುಳಿತಲ್ಲಿಯೇ ಜಗತ್ತನ್ನು ಕಂಡರೇ, ರವೀಂದ್ರನಾಥ್ ಟ್ಯಾಗೋರ್ ಜಗತ್ತನ್ನು ಸುತ್ತಿ ಹೊಸ ದರ್ಶನವನ್ನು ತಿಳಿಸಿದರು. ಈ ಇಬ್ಬರ ವಿಭಿನ್ನ ಸಾಮ್ಯತೆಯು ನನ್ನನು ಪ್ರಭಾವಿಸಿದೆ’ ಎಂದು ವಿವರಿಸಿದರು.
ಸಾಹಿತ್ಯದ ಪ್ರೇರಣೆ ಅಗತ್ಯ: ‘ಗ್ರಾಮೀಣ ಮಹಿಳೆಯ ಬದುಕಿನ ಅರಿವು ನನ್ನ ಕೃತಿಗಳಲ್ಲಿನ ಬನ್ನೇರಿ, ಪುಟ್ಟಕ್ಕ ಮತ್ತು ದೇವೇರಿಯಂತಹ ಪಾತ್ರಗಳ ಹುಟ್ಟಿಗೆ ಕಾರಣ. ಸಾಹಿತ್ಯದ ಓದು ನನ್ನ ಹಲವು ಸಿನಿಮಾಗಳಿಗೆ ಪ್ರೇರಣೆ ನೀಡುತ್ತದೆ, ಧಾರಾವಾಹಿಗೂ ಕೂಡ. ಆದರೆ, ಇಂದು ಕನ್ನಡ ಧಾರಾವಾಹಿ, ಸಿನಿಮಾಗಳಲ್ಲಿ ನಿರ್ದೇಶಕರ ಅಭಿವ್ಯಕ್ತಿ ಸ್ವಾತಂತ್ರ್ಯ, ಕ್ರಿಯಾಶೀಲತೆಗೆ ಬೆಲೆಯಿಲ್ಲ, ಬೇರೆ ಭಾಷೆಯ ಯಾರದೋ ಕಥೆಯನ್ನು, ಇಲ್ಲಿ ಮತ್ಯಾರೋ ಬಳಸುತ್ತಾರೆ. ಕಾರ್ಪೊರೇಟ್ ಹಿಡಿತ ಹೆಚ್ಚಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಕನ್ನಡ ಭಾಷೆ, ಕನ್ನಡತನವಿಲ್ಲದೆ ಕನ್ನಡ ಸಿನಿಮಾ ಉಳಿಯುವುದಿಲ್ಲ. ನಾನು ಸಿನಿಮಾ ಕ್ಷೇತ್ರದಲ್ಲಿ ಇದ್ದ ಕಾರಣ ನನ್ನ ಸಾಹಿತ್ಯ ಕೃತಿಗಳನ್ನು ವಿಮರ್ಶಕರು ಕಡೆಗಣಿಸಿರಬಹುದು. ಈಗ ನಾನು ಪ್ರಶಸ್ತಿಯ ಹಂಬಲವನ್ನು ಮೀರಿ ಬದುಕುತ್ತಿದ್ದೇನೆ’ ಎಂದರು.
‘1985ರಲ್ಲಿ ಮಾನಸಗಂಗೋತ್ರಿಯಲ್ಲಿ ದೊರೆತ ಶಿಕ್ಷಕವೃಂದ, ಕೆಲ ಚಳವಳಿಗಳಲ್ಲಿ ಹಾದುಹೋಗಿದ್ದು ನನ್ನಲ್ಲಿ ಹೊಸತನ ನೀಡಿದೆ. ಕಥೆ ಮೂಲಕ ಹಲವು ಓದುಗರನ್ನು ತಲುಪಿ, ಯಶಸ್ಸು ಪಡೆದಿದ್ದರೂ ಕಳೆದ ವರ್ಷ ‘ಪ್ರಜಾವಾಣಿ ದೀಪಾವಳಿ ಕಥೆ’ ಸ್ಪರ್ಧೆಯಲ್ಲಿ ನನ್ನ ‘ಒಳ ಚರಂಡಿ’ ಕಥೆಗೆ ಪ್ರಥಮ ಬಹುಮಾನ ದೊರೆತಿದ್ದು, 40 ವರ್ಷದ ಸಾಹಿತ್ಯ ಸೇವೆಗೆ ಸಾರ್ಥಕ ಭಾವನೆಯನ್ನು ಒದಗಿಸಿತು. ಈಗಿನ ಯುವಜನರೊಂದಿಗೆ ಸ್ಪರ್ಧಿಸುವುದು ಹೊಸ ಚೈತನ್ಯ ನೀಡುತ್ತದೆ’ ಎಂದರು. ಲೇಖಕ ಪ್ರೊ.ಸಿ.ನಾಗಣ್ಣ ಗೋಷ್ಠಿ ನಡೆಸಿಕೊಟ್ಟರು.
‘ಅಮೆರಿಕಾ ಅಮೆರಿಕಾ’ ಸಿನಿಮಾ ನನಗೆ ಈಗಲೂ ಪ್ರತಿಸ್ಪರ್ಧಿ ಒಂದು ರೀತಿ ವೈರಿ ಎನ್ನಬಹುದು. ಅದನ್ನು ಮೀರುವ ಸಿನಿಮಾ ಸೃಷ್ಟಿಯೇ ನನ್ನ ಗುರಿನಾಗತಿಹಳ್ಳಿ ಚಂದ್ರಶೇಖರ್ ಚಿತ್ರ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.