ADVERTISEMENT

ರೈತರ ಬೆವರಿಗೆ ನ್ಯಾಯ ಕೇಳಿದ ಸಮ್ಮೇಳನ

2 ಎಕರೆ ಭೂಮಿಯನ್ನು ಹೊಂದಿದವರ ಬದುಕು ಸಹನೀಯಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 10:24 IST
Last Updated 2 ಮಾರ್ಚ್ 2020, 10:24 IST
ನಂಜನಗೂಡಿನಲ್ಲಿ ಭಾನುವಾರ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಸಿ.ಬಸವರಾಜು ಮಾತನಾಡಿದರು
ನಂಜನಗೂಡಿನಲ್ಲಿ ಭಾನುವಾರ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿವೃತ್ತ ಪ್ರಾಧ್ಯಾಪಕ ಕೆ.ಸಿ.ಬಸವರಾಜು ಮಾತನಾಡಿದರು   

ನಂಜನಗೂಡು: ಇಲ್ಲಿ ನಡೆಯುತ್ತಿರುವ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ದಿನ ರೈತರ ಬೆವರಿಗೆ ನ್ಯಾಯಯುತವಾದ ಬೆಲೆ ಬೇಕು ಎಂದು ಒತ್ತಾಯಿಸಲಾಯಿತು.

ರೈತರ ಬದುಕಿನ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟ ವಿಶ್ರಾಂತ ಪ್ರಾಧ್ಯಾಪಕ ಕೆ.ಸಿ.ಬಸವರಾಜು, 2 ಎಕರೆ ಭೂಮಿ ಹೊಂದಿದ ರೈತರ ಬದುಕನ್ನು ಸಹನೀಯಗೊಳಿಸಬೇಕು. ಇದಕ್ಕೆ ದೊಡ್ಡಮಟ್ಟದ ಹೋರಾಟ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಪೋರೇಟ್ ಕೃಷಿ, ಗುತ್ತಿಗೆ ಕೃಷಿ ಪದ್ಧತಿಗಳ ಮೂಲಕ ಸ್ವಾಭಿಮಾನಿ ರೈತರನ್ನು ಕೂಲಿಕಾರರನ್ನಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ದೇಶದಲ್ಲಿ ಇನ್ನೂ ಶೇ 50ಕ್ಕಿಂತ ಹೆಚ್ಚು ಮಂದಿ ಭೂಮಿಯನ್ನು ನಂಬಿ ಬದುಕು ನಡೆಸುತ್ತಿದ್ದಾರೆ. ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಇನ್ನಾದರೂ ಕೃಷಿ ಮಹತ್ವದ ಸ್ಥಾನ ಪಡೆಯಬೇಕು ಎಂದು ಪ್ರತಿಪಾದಿಸಿದರು.

ಸುಮಾರು 10 ಲಕ್ಷ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇರೆ ಯಾವ ವಲಯದ ನೌಕರರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೃಷಿಯ ಮೂಲಸಮಸ್ಯೆಗಳನ್ನು ಹುಡುಕುವಲ್ಲಿ ಸರ್ಕಾರ ಸೋತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತಸಂಘದ ಉಗಮ, ಮುಕ್ತ ಆರ್ಥಿಕ ನೀತಿಗಳು ಜಾರಿಗೆ ಬಂದ ಬಗೆ, ಅವು ಕೃಷಿಯ ಮೇಲೆ ಬೀರಿದ ಪರಿಣಾಮಗಳನ್ನು ಕುರಿತು ಅವರು ವಿವರಿಸಿದರು.

ದೇಶದಲ್ಲಿ ನಡೆದ ಕೈಗಾರಿಕೀಕರಣ, ಉದಾರೀಕರಣಗಳು ಕೃಷಿಕರ ಬದುಕನ್ನು ನಾಶ ಮಾಡಿತು, ಹಳ್ಳಿಗಳನ್ನು ಸ್ಮಶಾನಗೊಳಿಸಿತು ಎಂದು ಕಿಡಿಕಾರಿದರು.

ಕೆರೆಗಳನ್ನು ಉಳಿಸಲು ಆಗ್ರಹ

ಲೇಖಕ ಚಿನ್ನಸ್ವಾಮಿ ವಡ್ಡಗೆರೆ ಮಾತನಾಡಿ, ‘ಸಮುದಾಯ ನಾಯಕತ್ವಗಳ ಮೂಲಕ ಕೆರೆಗಳನ್ನು ಉಳಿಸಬೇಕು’ ಎಂದು ಒತ್ತಾಯಿಸಿದರು.

ಕಬಿನಿಯಿಂದ ಕೆರೆಗಳಿಗೆ ನೀರು ತುಂಬಿಸಿದ ಬಳಿಕ ರೈತರು ರೈಲಿನಲ್ಲಿ ಕೂಲಿಯನ್ನರಸಿ ಮೈಸೂರಿಗೆ ಹೋಗುವುದು ಕಡಿಮೆಯಾಗುತ್ತಿದೆ. ಅಂತರ್ಜಲದ ಏರಿಕೆಯಾಗಿ ಕೆಲವು ರೈತರಾದರೂ ಮತ್ತೆ ಕೃಷಿಯತ್ತ ಮುಖಮಾಡಿದ್ದಾರೆ ಎಂದು ಹೇಳಿದರು.

ಇನ್ನೂ ಹಲವೆಡೆ ಕೆರೆಗಳಿಗೆ ಕಲುಷಿತ ನೀರನ್ನು ಬಿಟ್ಟು ಹಾಳು ಮಾಡಿ, ಅವುಗಳನ್ನು ಬಡಾವಣೆಗಳನ್ನಾಗಿ ಪರಿವರ್ತಿಸುವ ಹುನ್ನಾರಗಳು ನಡೆದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.