ಮೈಸೂರು: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿನ ಪೀಳಿಗೆಗೆ ಮಾದರಿಯಾಗಿದೆ’ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ಇಲ್ಲಿನ ಕುರುಬಾರಹಳ್ಳಿಯ ರಾಯಣ್ಣ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಹಾಗೂ ರಾಯಣ್ಣನವರ 194ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ 135 ಕೋಟಿಗೂ ಜಾಸ್ತಿ ಜನಸಂಖ್ಯೆ ಹೊಂದಿರುವ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಅಂಬೇಡ್ಕರ್ ನೀಡಿದ ಸಂವಿಧಾನ ಕಾರಣ. ಇಲ್ಲದಿದ್ದರೆ ನಮ್ಮ ದೇಶವೂ ರಷ್ಯಾ, ಉಕ್ರೇನ್ ರೀತಿ ಹಿಂಸಾಚಾರಗಳನ್ನು ಎದುರಿಸಬೇಕಿರುತ್ತಿತ್ತು. ನರೇಂದ್ರ ಮೋದಿ, ಸಿದ್ದರಾಮಯ್ಯ, ಅಮಿತ್ ಶಾ, ಮಲ್ಲಿಕಾರ್ಜುನ ಖರ್ಗೆ, ದ್ರೌಪದಿ ಮುರ್ಮು ಮೊದಲಾದ ನಾಯಕರೆಲ್ಲ ದೇಶದ ದೊಡ್ಡ ಸ್ಥಾನಗಳಲ್ಲಿರುವುದಕ್ಕೆ ಸಂವಿಧಾನದ ಬಲವೇ ಕಾರಣ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.
‘ದೇಶಕ್ಕಾಗಿ ಪ್ರಾಣತೆತ್ತ ಸೇನಾನಿ ರಾಯಣ್ಣನ ಆದರ್ಶಗಳನ್ನು ಇಂದಿನ ಯುವಜನತೆ ಅರಿತು ಪಾಲಿಸಬೇಕು. ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ರಾಯಣ್ಣನನ್ನು ಹೇಗೆ ನಮ್ಮವರೇ ಬ್ರಿಟಿಷರಿಗೆ ಸಿಲುಕಿಸಿದರೋ ಹಾಗೆಯೇ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಸಕಲ ಸವಲತ್ತುಗಳು, ಭಾಗ್ಯಗಳನ್ನು ಪಡೆದ ಕೆಲ ವಿರೋಧಿಗಳು ಅವರ ಮೇಲೆ ನಿರಂತರವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಕೊಡುಗೆಗಳು ಶಾಶ್ವತವಾಗಿ ಉಳಿಯುತ್ತವೆ’ ಎಂದು ತಿಳಿಸಿದರು.
ಮುಖಂಡರಾದ ಎಂ.ಶಿವಣ್ಣ, ಕ್ಯಾಂಟೀನ್ ನಾಗಣ್ಣ, ಸಮಿತಿಯ ಅಧ್ಯಕ್ಷ ಟಿ. ಮಂಜುನಾಥ್, ಉಪಾಧ್ಯಕ್ಷ ಮಹದೇವು, ಆಶ್ರಯ ಸಮಿತಿ ಸದಸ್ಯ ಕುರುಬಾರಳ್ಳಿ ಸೋಮಶೇಖರ್, ರವಿ, ಧನಂಜಯ, ಕುರುಬಾರಳ್ಳಿ ಪ್ರಕಾಶ್, ಕ್ಯಾಂಟೀನ್ ರವಿ, ಚಂದ್ರಶೇಖರ್, ಪವನ್ ಚಂಗಪ್ಪ ವಿಶ್ವನಾಥ್, ನಜರಾಬಾದ್ ನಟರಾಜು, ಡೈರಿ ವೆಂಕಟೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.