ADVERTISEMENT

ರಾಜಕೀಯಕ್ಕೆ ಗುಡ್‌ಬೈ ಹೇಳಲು ಚಿಂತನೆ: ಶಾಸಕ ಸಾ.ರಾ. ಮಹೇಶ್‌

ಸೆ.21, 22ರಂದು ಚುಂಚನಕಟ್ಟೆ ಜಲಪಾತೋತ್ಸವ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 11:23 IST
Last Updated 15 ಸೆಪ್ಟೆಂಬರ್ 2019, 11:23 IST
ಕೆ.ಆರ್.ನಗರ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸಿದರು
ಕೆ.ಆರ್.ನಗರ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸಿದರು   

ಕೆ.ಆರ್‌.ನಗರ: ‘ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದ ಬೇಸರವಾಗಿದೆ. ರಾಜಕೀಯದಿಂದ ದೂರ ಉಳಿಯಲು ಪ್ರಯತ್ನಿಸುತ್ತಿದ್ದೇನೆ. ಗೌರವ ಇರುವಾಗಲೇ ರಾಜಕೀಯಕ್ಕೆ ಗುಡ್‌ಬೈ ಹೇಳಲು ಯೋಚಿಸುತ್ತಿದ್ದೇನೆ’ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿಆಯೋಜಿಸಿದ್ದ ‘ಸಾಂಸ್ಕೃತಿಕ, ಕ್ರೀಡೆ, ಎನ್ಎಸ್ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಯಾರೂ ಆಯ್ಕೆಯಾದ ಉದಾಹರಣೆ ಇಲ್ಲ. ಆದರೆ, ಜನರು ನನ್ನನ್ನು ಸತತವಾಗಿ 3 ಬಾರಿ ಆಯ್ಕೆ ಮಾಡಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಗಳು ಬೇಸರ ತರಿಸಿವೆ. ನೀವ್ಯಾರೂ ರಾಜಕಾರಣಿಗಳಾಗಬೇಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ನ್ಯಾಕ್‌ನಿಂದ ‘ಬಿ’ ಗ್ರೇಡ್‌ ಪಡೆದಿದ್ದ ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಶೈಕ್ಷಣಿಕ ಪ್ರಗತಿಯಲ್ಲಿ ಕುಸಿತ ಕಂಡು ಈ ಬಾರಿ ‘ಸಿ’ ಗ್ರೇಡ್‌ಗೆ ತೃಪ್ತಿ ಪಟ್ಟುಕೊಂಡಿದೆ. ಕಾಲೇಜಿಗೆ ಅಗತ್ಯವಾಗಿರುವ ಕಟ್ಟಡ, ತಡೆಗೋಡೆ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು. ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.

ಗಾಯಕ ದೇವಾನಂದ ವರಪ್ರಸಾದ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಗೋಪಾಲಯ್ಯ, ಪ್ರಾಂಶುಪಾಲರಾದ ಡಾ.ಪಿ.ಕೋಕಿಲಾ, ನಿವೃತ್ತ ಉಪನ್ಯಾಸಕ ಕೆ.ಆರ್.ಲಕ್ಕೇಗೌಡ, ಸಹಾಯಕ ಪ್ರಾಧ್ಯಾಪಕ ಸಿ.ಆರ್.ಸುನಿಲ್ ಮಾತನಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಕೆ.ಟಿ.ರಮೇಶ್, ತಹಶೀಲ್ದಾರ್‌ ಎಂ.ಮಂಜುಳಾ, ಸಹಾಯಕ ಪ್ರಾಧ್ಯಾಪಕರಾದ ವಿಜಯ್, ಎಸ್.ಮೋಹನ್, ಶ್ರುತಿ, ಸೀಮಾ ಬಡಿಗೇರ, ಶಾರದಮ್ಮ, ಪುರಸಭೆ ಸದಸ್ಯ ಸಂತೋಷ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.