ADVERTISEMENT

ಸಂಸ್ಕೃತ ಸತ್ತ ಭಾಷೆ, ಅದರ ಬದಲು ಅನ್ನ ನೀಡುವ ಕನ್ನಡ ಉಳಿಸಿ: ಮಹೇಶ್‌ ಚಂದ್ರ ಗುರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 10:14 IST
Last Updated 24 ಜನವರಿ 2022, 10:14 IST
ಮಹೇಶ್‌ಚಂದ್ರಗುರು
ಮಹೇಶ್‌ಚಂದ್ರಗುರು   

ಮೈಸೂರು: ‘ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಅಧ್ಯಯನ ಪೀಠಗಳಿದ್ದರೂ, ವಿದ್ಯಾರ್ಥಿಗಳು, ಅಧ್ಯಾಪಕರು ಇಲ್ಲ. ಆರ್‌ಎಸ್‌ಎಸ್‌ ಮೆಚ್ಚಿಸಲು ರಾಜ್ಯ ಸರ್ಕಾರವು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರು ಎಕರೆ ಭೂಮಿ, ನೂರಾರು ಕೋಟಿ ಅನುದಾನ ನೀಡಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ ಚಂದ್ರ ಗುರು ಆಕ್ರೋಶ ವ್ಯಕ್ತಪಡಿಸಿದರು.

‘ಅನ್ನದ ಭಾಷೆಯಾದ ಕನ್ನಡವನ್ನು ಉಳಿಸಲು ಸರ್ಕಾರ ಮುಂದಾಗುತ್ತಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ವಿಶ್ವವಿದ್ಯಾಲಯಗಳು ಭ್ರಷ್ಟಾಚಾರ, ಅನುದಾನ– ಸಿಬ್ಬಂದಿ ಕೊರತೆಯಿಂದ ಸೊರಗುತ್ತಿವೆ. ಅವುಗಳ ಕಾಯಕಲ್ಪಕ್ಕೆ ಮುಂದಾಗದೇ ಸತ್ತ ಭಾಷೆಗೆ ಮಹತ್ವ ನೀಡಿರುವುದು ಖಂಡನೀಯ’ ಎಂದು ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕೇರಳದ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಬರುತ್ತಿಲ್ಲ. ಮೈಸೂರು ವಿಶ್ವವಿದ್ಯಾಲಯದ ಸಂಸ್ಕೃತ ಅಧ್ಯಯನ ವಿಭಾಗಕ್ಕೆ ಕಳೆದ ಬಾರಿ ಒಬ್ಬನೇ ಒಬ್ಬ ವಿದ್ಯಾರ್ಥಿ ಪ್ರವೇಶ ಪಡೆದಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕೊರತೆ ಎದುರಾಗಿದೆ. ಹೀಗಿದ್ದರೂ ಸಂಸ್ಕೃತವನ್ನು ವೈಭವೀಕರಿಸಲು ರೈತರು, ಕಾರ್ಮಿಕರು, ದಲಿತರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಸಂಸ್ಕೃತ ವೈಭವೀಕರಿಸುವುದು ಬಹುಜನರನ್ನು ಕೊಂದಂತೆ’ ಎಂದರು.

ADVERTISEMENT

ಕೇಂದ್ರ ಸರ್ಕಾರವು ಸಂಸ್ಕೃತದ ಅಭಿವೃದ್ಧಿಗೆ ₹ 1,200 ಕೋಟಿ, ತೆಲುಗಿಗೆ ₹ 75 ಕೋಟಿ, ತಮಿಳಿಗೆ ₹ 60, ಮಲಯಾಳಂಗೆ ₹ 20 ಕೋಟಿ ನೀಡಿದೆ. ಆದರೆ, ಕನ್ನಡಕ್ಕೆ ನೀಡಿರುವುದು ₹ 6 ಕೋಟಿ. ರಾಜ್ಯದ 25 ಬಿಜೆಪಿ ಸಂಸದರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ವಿದ್ಯಾರ್ಥಿಗಳ ಹಣ ಸಂಸ್ಕೃತ ವಿ.ವಿ.ಗೆ: ‘ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಕಟ್ಟಡ ನಿರ್ಮಾಣಕ್ಕೆ ₹ 30 ಕೋಟಿ ನೀಡಲು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಒಪ್ಪಿಗೆ ನೀಡಿದೆ. ಇದು ವಿದ್ಯಾರ್ಥಿಗಳ ಹಣ. ಸರ್ಕಾರದಲ್ಲ’ ಎಂದು ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಮು ಹೇಳಿದರು.

‘ಉನ್ನತ ಶಿಕ್ಷಣ ಸಚಿವರು ಹಣ ನೀಡುವಂತೆ ಆದೇಶ ಹೊರಡಿಸಿದ್ದಾರೆ.ಸಂಸ್ಕೃತ, ಸಂಗೀತ, ಜಾನಪದ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿ 10 ವರ್ಷವಾಗಿದೆ. ಇವುಗಳನ್ನು ಸುಧಾರಿಸುವ ಬದಲು ಕಮಿಷನ್‌ ದಂಧೆಯಲ್ಲಿ ಸರ್ಕಾರ ಮುಳುಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.