ADVERTISEMENT

ಮೈಸೂರು: ವಾಯು, ಶಬ್ದಮಾಲಿನ್ಯಕ್ಕೆ ಉದಯಗಿರಿಯ ಎಸ್‌ಬಿಎಂ ಕಾಲೊನಿಯ ಜನರು ಹೈರಾಣು

‘ಮುಡಾ’ ಅಧಿಕಾರಿಗಳ ನಿರ್ಲಕ್ಷ್ಯ l ಮಗಳನ್ನು ಬಾಣಂತನಕ್ಕಾಗಿ ಬೇರೆ ಊರಿಗೆ ಕಳುಹಿಸುವ ಸ್ಥಿತಿ-: ನಾಗರಿಕರ ಅಳಲು

ಕೆ.ಎಸ್.ಗಿರೀಶ್
Published 1 ಏಪ್ರಿಲ್ 2021, 19:30 IST
Last Updated 1 ಏಪ್ರಿಲ್ 2021, 19:30 IST
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಕಸಕ್ಕೆ ನಿತ್ಯವೂ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೊರಹೊಮ್ಮುವ ಹೊಗೆಯಿಂದ ಸ್ಥಳೀಯ ನಿವಾಸಿಗಳು ಬಳಲುವಂತಾಗಿದೆ (ಎಡಚಿತ್ರ) ‘ಮುಡಾ’ಕ್ಕೆ ಸೇರಿದ ಜಾಗದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಕಸಕ್ಕೆ ನಿತ್ಯವೂ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೊರಹೊಮ್ಮುವ ಹೊಗೆಯಿಂದ ಸ್ಥಳೀಯ ನಿವಾಸಿಗಳು ಬಳಲುವಂತಾಗಿದೆ (ಎಡಚಿತ್ರ) ‘ಮುಡಾ’ಕ್ಕೆ ಸೇರಿದ ಜಾಗದಲ್ಲಿ ಸುರಿದಿರುವ ಕಟ್ಟಡ ತ್ಯಾಜ್ಯ   

ಮೈಸೂರು: ಇಲ್ಲಿನ ಉದಯಗಿರಿಯ ಎಸ್‌ಬಿಎಂ ಕಾಲೊನಿಯ ನಿವಾಸಿಗಳು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯದಿಂದ ಹೈರಾಣಾಗಿದ್ದಾರೆ. ಕಿಟಕಿಗಳಿದ್ದರೂ ತೆರೆಯಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.

ಎಸ್‌ಬಿಎಂ ಕಾಲೊನಿಯ ಇಂದಿರಾ ಗಾಂಧಿ ರಸ್ತೆಯಲ್ಲಿರುವ ‘ಮುಡಾ’ಕ್ಕೆ ಸೇರಿದ ಸುಮಾರು ಒಂದೂವರೆ ಎಕರೆಯಷ್ಟು ವಿಸ್ತೀರ್ಣದ ಜಾಗದಲ್ಲಿ ರಾಶಿ ರಾಶಿ ಕಸವನ್ನು ಸುರಿಯಲಾಗಿದೆ. ಕೆಲವರು ‘ಎಂ–ಸ್ಯಾಂಡ್‌’, ಜಲ್ಲಿಕಲ್ಲು ಗಳನ್ನು ಹಾಕುವ ಜಾಗವನ್ನಾಗಿ ಪರಿವರ್ತಿಸಿಕೊಂಡರೆ, ಮತ್ತೆ ಕೆಲವರು ಸೌದೆ ಕತ್ತರಿಸುವ ತಾಣವನ್ನಾಗಿಯೂ ಬಳಕೆ ಮಾಡಿಕೊಂಡಿದ್ದಾರೆ.

ಇದರಿಂದಾಗಿ ಇಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ಕಿಟಕಿ ತೆರೆದರೆ ಸಾಕು ಮನೆಯೊಳಗೆ ಕ್ಷಣಾರ್ಧದಲ್ಲಿ ದೂಳು ದಾಂಗುಡಿ ಇಡುತ್ತದೆ. ಮನೆಯನ್ನು ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಎಲ್ಲೆಂದರಲ್ಲಿ ದೂಳು ಮತ್ತೆ ಮತ್ತೆ ಕೂರುತ್ತದೆ. ಸೌದೆ ಕತ್ತರಿಸುವ, ಜಲ್ಲಿಕಲ್ಲು, ‘ಎಂ–ಸ್ಯಾಂಡ್‌’ನ್ನು ಸುರಿಯುವಾಗ ಹಾಗೂ ಲಾರಿಗೆ ಹಾಕುವಾಗ ಬರುವ ಶಬ್ದಗಳಿಂದ ಜನರು ರೋಸಿ ಹೋಗಿದ್ದಾರೆ. ಹಗಲಿನಲ್ಲಿ ಮಾತ್ರವಲ್ಲ ರಾತ್ರಿಯಲ್ಲೂ ನಿದ್ದೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಹೆಸರು ಬಹಿರಂಗಪಡಿಸಲು ಬಯಸದ ಸ್ಥಳೀಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿ, ‘ಇದೊಂದು ನಿಜಕ್ಕೂ ನರಕ ಎಂಬಂತಾ
ಗಿದೆ. ಬಾಣಂತನಕ್ಕೆ ಬಂದ ಮಗಳನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ. ದೂಳಿನಿಂದ ಮಗುವಿಗೆ ಅಲರ್ಜಿಯಾಗುತ್ತದೆ. ಇದರಿಂದ ಇಲ್ಲಿರುವ ಹಲವು ಮಂದಿ ತಮ್ಮ ಮಗಳನ್ನು ಬೇರೆ ಸಂಬಂಧಿಕರ ಮನೆಯಲ್ಲಿ ಇಲ್ಲವೇ ಅಳಿಯನ ಮನೆಯಲ್ಲೇ ಬಾಣಂತನಕ್ಕೆ ಕಳುಹಿಸುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತಿಗಿಳಿದ ಸ್ಥಳೀಯ ನಿವಾಸಿ ವಾಸುದೇವರಾಜು, ‘ಎಸ್‌ಬಿಎಂ ಕಾಲೊ ನಿಯಲ್ಲಿ ಇರುವ ಬಹುತೇಕ ಮಂದಿ ಬ್ಯಾಂಕ್‌ ನೌಕರಿಯಿಂದ ನಿವೃತ್ತರಾದವರು. ಸುಮಾರು 220 ಮಂದಿ ಇಲ್ಲಿದ್ದಾರೆ. ಇವರೆಲ್ಲರೂ ನಿವೃತ್ತ ಜೀವನವನ್ನು ಸುಖವಾಗಿ ಕಳೆಯಲೆಂದು ಇಲ್ಲಿ ಮನೆ ನಿರ್ಮಿಸಿಕೊಂಡವರು. ಆದರೆ, ‘ಮುಡಾ’ಗೆ ಸೇರಿದ ಈ ಜಾಗದಿಂದಾಗಿ ಹೊರಹೊಮ್ಮುವ ದೂಳು, ಶಬ್ದಗಳಿಂದ ಬಳಲಿ ಹೋಗಿದ್ದಾರೆ. ಅಸ್ತಮಾ ಇದ್ದವರಂತೂ ನರಕಯಾತನೆ ಪಡುವಂತಾಗಿದೆ’ ಎಂದು ದೂರುತ್ತಾರೆ.

‘ಈ ಕುರಿತು ಪಾಲಿಕೆ ಮತ್ತು ಮುಡಾ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ವಿಚಾರವನ್ನು ತರಲಾಗಿದೆ. ಲಿಖಿತವಾಗಿಯೂ ದೂರು ನೀಡಲಾ ಗಿದೆ. ಆದರೆ, ಯಾರೊಬ್ಬರೂ ಈ ಜಾಗದತ್ತ ಗಮನಹರಿಸುತ್ತಿಲ್ಲ. ತಮಗೆ ಸಂಬಂಧವೇ ಇಲ್ಲದ ಹಾಗೆ ವರ್ತಿಸುತ್ತಿದ್ದಾರೆ. ಇನ್ನಾರಿಗೆ ದೂರಬೇಕು ಎನ್ನುವುದೂ ಗೊತ್ತಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.