
ಪೊಲೀಸ್
ಸಾಂದರ್ಭಿಕ ಚಿತ್ರ
ಮೈಸೂರು: ನಗರದ ಖಾಸಗಿ ಶಾಲೆಯೊಂದರ ಬಾಲಕನ ಮೇಲೆ ಆತನ ಸಹಪಾಠಿಗಳು ಹಲ್ಲೆ ನಡೆಸಿ, ತೀವ್ರ ಗಾಯಗೊಳಿಸಿದ್ದು, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಸಂತ್ರಸ್ತ ಬಾಲಕನ ಪೋಷಕರು ದೂರು ನೀಡಿದ್ದಾರೆ.
13 ವರ್ಷದ ಬಾಲಕನ ಮರ್ಮಾಂಗಕ್ಕೆ ಕಾಲಿನಿಂದ ಒದ್ದ ಮೂವರು ಸಹಪಾಠಿಗಳು, ಆತನ ಒಂದು ವೃಷಣವನ್ನು ಶಾಶ್ವತವಾಗಿ ಹಾನಿಯಾಗುವಂತೆ ಮಾಡಿದ್ದಾರೆ. ಅದಕ್ಕೆ ಮೂವರು ವಿದ್ಯಾರ್ಥಿಗಳು, ಆಡಳಿತ ಮಂಡಳಿ ಮುಖ್ಯಸ್ಥರು, ಪ್ರಾಂಶುಪಾಲರು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ನಿರ್ಲಕ್ಷ್ಯ ಕಾರಣವೆಂದು ದೂರಿನಲ್ಲಿ ಬಾಲಕನ ತಂದೆ ಹೇಳಿದ್ದಾರೆ.
‘ಅ.26ರಂದು ಪುತ್ರ ತೊಡೆಯ ಭಾಗ ನೋವಾಗುತ್ತಿದೆ ಎಂದು ಹೇಳಿದ್ದ. ನಂತರ ವಿಚಾರಿಸಿದಾಗ ಘಟನೆಯ ಬಗ್ಗೆ ವಿವರಿಸಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದಾಗ ವೃಷಣಕ್ಕೆ ಹಾನಿಯಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತೊಂದರೆ ನೀಡಿದ ವಿದ್ಯಾರ್ಥಿಗಳು ಹಾಗೂ ನಿರ್ಲಕ್ಷ್ಯ ವಹಿಸಿದ ಶಾಲೆಯವರ ವಿರುದ್ಧ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಬಾಲನ್ಯಾಯ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ 115(2), 117(2), 125(ಬಿ), ರೆ/ವಿ 190 ಅನ್ವಯ ಜಯಲಕ್ಷ್ಮೀಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
₹ 1.39 ಕೋಟಿ ವಂಚನೆ
ಮೈಸೂರು: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹಾಗೂ ಪೊಲೀಸ್ ತನಿಖಾಧಿಕಾರಿ ಎಂದು ಹೇಳಿದ ಸೈಬರ್ ವಂಚಕರು ಕುವೆಂಪುನಗರದ ವೃದ್ಧರೊಬ್ಬರಿಂದ ₹ 1.39 ಕೋಟಿ ದೋಚಿದ್ದಾರೆ.
‘ನಿಮ್ಮ ಮೊಬೈಲ್ ಫೋನ್ ಸಂಖ್ಯೆಯು ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆ ಆಗುತ್ತಿರುವುದಾಗಿ ಎಲ್ಲ ಫೋನ್ ಸಂಖ್ಯೆಗಳನ್ನು ಬ್ಲಾಕ್ ಮಾಡುವುದಾಗಿ ವಂಚಕರು ಹೇಳಿದ್ದರು. ತನಿಖಾಧಿಕಾರಿ ಸೋಗಿನಲ್ಲಿ ವಿಡಿಯೊ ಕಾಲ್ ಮಾಡಿದ ಅವರು ಆಧಾರ್ ಕಾರ್ಡ್, ಬ್ಯಾಂಕ್ ಖಾತೆಗಳ ವಿವರ ಪಡೆದಿದ್ದರು’ ಎಂದು ದೂರುದಾರರು ಹೇಳಿದ್ದಾರೆ.
‘ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ನರೇಶ್ ಗೋಯಲ್ ಅವರ ಮನೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಸಿಕ್ಕಿದೆ. ಪ್ರಕರಣ ರಾಷ್ಟ್ರೀಯ ಗೌಪ್ಯತೆಯ ವಿಷಯವಾಗಿದ್ದು, ಯಾರಿಗೂ ತಿಳಿಸದಂತೆ ಹೇಳಿದ್ದಾರೆ. ಬ್ಯಾಂಕ್ ಖಾತೆಗಳ ವಿವರ ಪಡೆದು, ಹಂತ ಹಂತವಾಗಿ ₹ 97.5 ಲಕ್ಷ, ₹ 41.4 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದ್ದಾರೆ.
ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.