ADVERTISEMENT

ಪ್ರಧಾನಿ ಮೋದಿಗೆ ನೇತಾಜಿ ಪ್ರತಿಮೆ ನೀಡಿದ ಮೈಸೂರಿನ ಅರುಣ್‌ ಯೋಗಿರಾಜ್‌‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 13:05 IST
Last Updated 5 ಏಪ್ರಿಲ್ 2022, 13:05 IST
ನವದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌, ನೇತಾಜಿಯ ಪ್ರತಿಮೆ ನೀಡಿದರು.
ನವದೆಹಲಿಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌, ನೇತಾಜಿಯ ಪ್ರತಿಮೆ ನೀಡಿದರು.   

ಮೈಸೂರು: ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 2 ಅಡಿ ಎತ್ತರದ ಏಕಶಿಲಾ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು.

‘ಉತ್ತರಾಖಂಡದ ಕೇದಾರನಾಥದಲ್ಲಿ ಈಚೆಗೆ ಅನಾವರಣಗೊಳಿಸಿದ, ನಾನು ಕೆತ್ತಿದ್ದ ಆದಿ ಶಂಕರಾಚಾರ್ಯರ ಪ್ರತಿಮೆ ವಿಚಾರ ಪ್ರಸ್ತಾಪಿಸಿ ಮೆಚ್ಚುಗೆ ಸೂಚಿಸಿದರು. ಐದು ತಲೆಮಾರುಗಳಿಂದ ನಮ್ಮ ಕುಟುಂಬವು ಶಿಲ್ಪಗಳ ಕೆತ್ತನೆ ಕೆಲಸದಲ್ಲಿ ತೊಡಗಿದ್ದು, ಪ್ರಧಾನಿ ಮೆಚ್ಚುಗೆಯಿಂದ ಈ ಕಾರ್ಯಕ್ಕೆ ಮನ್ನಣೆ ಸಿಕ್ಕಿದೆ. ತುಂಬಾ ಸಂತೋಷ ಉಂಟು ಮಾಡಿದೆ. ಮೋದಿ ಅವರನ್ನು ಭೇಟಿ ಮಾಡಿಸಿದ ಸಂಸದ ಪ್ರತಾಪಸಿಂಹ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಅರುಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭೇಟಿ ವಿಚಾರವನ್ನು ಮೋದಿ ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಅರುಣ್‌ ಯೋಗಿರಾಜ್‌ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ. ನೇತಾಜಿ ಬೋಸ್‌ ವಿಗ್ರಹವನ್ನು ನೀಡಿದ್ದಕ್ಕೆ ಧನ್ಯವಾದ’ ಎಂದಿದ್ದಾರೆ.

ADVERTISEMENT

‌ಕಶ್ಯಪ ಶಿಲ್ಪಕಲಾ ನಿಕೇತನದ ಅರುಣ್‌, 14 ವರ್ಷಗಳಿಂದ ಶಿಲ್ಪ ಕೆತ್ತನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರು ಶಿಲ್ಪ ಕಲಾಕೃತಿಯ 5ನೇ ತಲೆಮಾರಿನವರು. ಓದಿದ್ದು ಎಂಬಿಎ. ವಿದ್ಯಾಭಾಸಕ್ಕೆ ತಕ್ಕಂತೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ, ‘ಕಲ್ಲಿ’ನ ಸೆಳೆತಕ್ಕೆ ಮಾರು ಹೋದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.