ಮೈಸೂರು: ‘ಗುಜರಾತ್‌ನಲ್ಲಿ ಕಳೆದ 25 ವರ್ಷದಿಂದ ಬಿಜೆಪಿ ಆಡಳಿತದಲ್ಲಿದ್ದು, ಅಲ್ಲಿನ ಸೇತುವೆಗಳು ಕುಸಿದು ಬೀಳುತ್ತಿವೆ. ಇವುಗಳ ಡಿಪಿಆರ್ ಮಾಡಿದವರು ಬಿಜೆಪಿಗರಲ್ಲವೇ’ ಎಂದು ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದರು.
ನಗರದಲ್ಲಿ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮಾಜಿ ಸಂಸದ ಪ್ರತಾಪ ಸಿಂಹ ಅವರು, ‘ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು’ ಎಂಬ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಹೇಳಿಕೆಯನ್ನು ಟೀಕಿಸುವ ಭರದಲ್ಲಿ, ಯಾವ ಮುಲ್ಲ ಡಿಪಿಆರ್ ತಯಾರಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಕೆಆರ್‌ಎಸ್ ಜಲಾಶಯಕ್ಕೆ ಹೋದರೆ ನಾಲ್ವಡಿ ಅವರು ಟಿಪ್ಪು ಹಾಕಿದ ಅಡಿಗಲ್ಲಿನ ಪರ್ಶಿಯನ್ ಶಾಸನದ ಕನ್ನಡಕ್ಕೆ ಅನುವಾದಿಸಿದ ಶಾಸನವನ್ನು ಬರೆಯಿಸಿ ಸ್ಥಾಪಿಸಿದವರು ನಾಲ್ವಡಿ’ ಎಂದು ಹೇಳಿದರು.
‘ನಾಲ್ವಡಿ ಅವರಿಗಿರುವ ಇಂಥ ದೊಡ್ಡತನ ಬಿಜೆಪಿಗರಾದ ಆರ್.ಅಶೋಕ್, ಪ್ರತಾಪ ಸಿಂಹ ಅವರಿಗೆ ಎಲ್ಲಿ ಬರಬೇಕು. ಬಿಹಾರ, ಗುಜರಾತ್‌ನಲ್ಲಿ ಸೇತುವೆಗಳು ಕುಸಿದು ಬೀಳುತ್ತಿವೆ. ಇವುಗಳ ಡಿಪಿಆರ್ ತಯಾರಿಸಿದವರು ಮೋದಿ ಅವರೇ? ಆಗ್ರಾದ ತಾಜ್‌ಮಹಲ್, ದೆಹಲಿಯ ಕೆಂಪುಕೋಟೆ, ರಾಜ್ಯದ ಗೋಲ್‌ಗುಂಬಜ್ ಕಟ್ಟಡಗಳ ಡಿಪಿಆರ್ ಮಾಡಿದವರು ಯಾರು ಎಂಬುದನ್ನು ಹೇಳಲಿ’ ಎಂದರು.
‘ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ನಾಡಿಗೆ ನೀಡಿದ ಕೊಡುಗೆ ಮರೆಯಲಾಗದು. ರಾಜ್ಯದ ಶೇ 30 ರಷ್ಟು ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದ್ದರು. 40 ಸಾವಿರ ಕೆರೆ, ಕಟ್ಟೆಗಳನ್ನು ಕಟ್ಟಿಸಿದ್ದರು. ಹೊಯ್ಸಳರು, ಗಂಗರು ಅಣೆಕಟ್ಟುಗಳನ್ನು ಕಟ್ಟಿದ್ದರು. ಅವುಗಳ ಡಿಪಿಆರ್ ಹುಡುಕಲು ಆಗುವುದೇ? ಮುಸ್ಲಿಂ ದೊರೆಯೆಂಬ ಕಾರಣಕ್ಕೆ ಟಿಪ್ಪು ಮೇಲೆ ಮುಗಿಬೀಳಬಾರದು. ಸುಳ್ಳು ಇತಿಹಾಸವನ್ನು ಬರೆಯಲಾಗದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.