ADVERTISEMENT

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ: ಸೇಂಟ್‌ ಫಿಲೋಮಿನಾ ಚರ್ಚ್‌ಗೆ ಭದ್ರತೆ

ಕೇಂದ್ರದಿಂದ ಎಚ್ಚರಿಕೆ ರವಾನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 20:00 IST
Last Updated 22 ಏಪ್ರಿಲ್ 2019, 20:00 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಮೈಸೂರು: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಗರ ಪೊಲೀಸರು ಇಲ್ಲಿನ ಐತಿಹಾಸಿಕ ಸೇಂಟ್ ಫಿಲೋಮಿನಾ ಚರ್ಚ್‌ಗೆ ಭದ್ರತೆ ಒದಗಿಸಿದ್ದಾರೆ.

ಲೋಹಶೋಧಕ ಯಂತ್ರಗಳು ಹಾಗೂ ಶ್ವಾನದಳದಿಂದ ಸೋಮವಾರ ಒಂದು ಸುತ್ತಿನ ತಪಾಸಣೆ ನಡೆಸಲಾಯಿತು. 12 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಎರಡು ಗರುಡ ವಾಹನಗಳು, ಇಬ್ಬರು ಸಹಾಯಕ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್, ಹೆಡ್‌ಕಾನ್‌ಸ್ಟೆಬಲ್‌ಗಳು ಮತ್ತು 8 ಮಂದಿ ಕಾನ್‌ಸ್ಟೆಬಲ್‌ಗಳು ಭದ್ರತೆಯ ಹೊಣೆ ಹೊತ್ತಿದ್ದಾರೆ.

ADVERTISEMENT

ಬಸ್‌ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿಯೂ ನಿಗಾ ವಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು.

‘ಕೇವಲ ಸೇಂಟ್ ಫಿಲೋಮಿನಾ ಚರ್ಚ್‌ಗೆ ಮಾತ್ರವಲ್ಲ; ನಗರದ ಪ್ರಮುಖ ಸ್ಥಳಗಳಿಗೆ ಭದ್ರತೆ ಹೆಚ್ಚಿಸಲಾಗಿದೆ’ ಎಂದು ಡಿಸಿಪಿ ಮುತ್ತುರಾಜ್‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

2006ರಲ್ಲಿ ಅಲ್‌ಬ್ರದರ್ ಸಂಘಟನೆಯ ಇಬ್ಬರು ಸದಸ್ಯರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು. ಅಲ್‌ಖೈದಾ ಸಂಘಟನೆಯ ನಾಯಕ ಹಾಗೂ ಕುಖ್ಯಾತ ಒಸಮಾ‌ ಬಿನ್‌ ಲಾಡೆನ್‌ ಜತೆ ಸೆರೆ ಸಿಕ್ಕ ಅಬುಜುಬೇದಾ ಮೈಸೂರಿನಲ್ಲಿ ಎರಡು ವರ್ಷ ಕಾನೂನು ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಅಮೆರಿಕದ ವಶದಲ್ಲಿದ್ದಾನೆ. 2016ರ ಆಗಸ್ಟ್‌ನಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಕುಕ್ಕರ್ ಬಾಂಬ್‌ವೊಂದನ್ನು ಸ್ಫೋಟಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.