ADVERTISEMENT

‘ಗಾಂಧಿ, ಅಂಬೇಡ್ಕರ್: ಸಮಾನ ಸ್ಥಾನ ನೀಡಿ’

‘ಗಾಂಧಿ –ಅಂಬೇಡ್ಕರ್ ಮುಖಾಮುಖಿ’ ವಿಚಾರ ಸಂಕಿರಣದಲ್ಲಿ ಮುಕ್ತ ಚರ್ಚೆ, ಸಂವಾದ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 10:10 IST
Last Updated 18 ನವೆಂಬರ್ 2019, 10:10 IST
ವಿಚಾರ ಸಂಕಿರಣದಲ್ಲಿ ಕೃಷ್ಣಪ್ರಸಾದ್‌ ಮಾತನಾಡಿದರು. ಕೃಷ್ಣ ಜನಮನ, ಪ್ರೊ.ಎಚ್‌.ಗೋವಿಂದಯ್ಯ, ಪ್ರೊ.ಮಹಾದೇವ ಶಂಕನಪುರ, ಜಗದೀಶ್‌ ಕೊಪ್ಪ ಇದ್ದಾರೆ
ವಿಚಾರ ಸಂಕಿರಣದಲ್ಲಿ ಕೃಷ್ಣಪ್ರಸಾದ್‌ ಮಾತನಾಡಿದರು. ಕೃಷ್ಣ ಜನಮನ, ಪ್ರೊ.ಎಚ್‌.ಗೋವಿಂದಯ್ಯ, ಪ್ರೊ.ಮಹಾದೇವ ಶಂಕನಪುರ, ಜಗದೀಶ್‌ ಕೊಪ್ಪ ಇದ್ದಾರೆ   

ಮೈಸೂರು: ದೇಶಕ್ಕೆ ಒದಗಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸಲು ಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಒಟ್ಟುಗೂಡಿಸಿಕೊಂಡು ಹೋಗಬೇಕು, ಸಮಾನ ಸ್ಥಾನಮಾನ ನೀಡಿ ಇಬ್ಬರನ್ನೂ ಉಳಿಸಿಕೊಳ್ಳಬೇಕಿದೆ ಎಂಬ ಅಭಿಪ್ರಾಯ ‘ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿ– ಏಕೆ? ಮತ್ತು ಬೇಕೆ?’ ಕುರಿತ ವಿಚಾರ ಸಂಕಿರಣದಲ್ಲಿ ಕೇಳಿಬಂತು.

ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್‌ ಚಿಂತನೆಯ ಒಳನೋಟಗಳು, ಇಬ್ಬರ ವಿಚಾರಧಾರೆಗಳಲ್ಲಿನ ದ್ವಂದ್ವಗಳ ಬಗ್ಗೆ ಮುಕ್ತ ಚರ್ಚೆ, ಸಂವಾದ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತ ಕೃಷ್ಣಪ್ರಸಾದ್, ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರನ್ನು ನಮ್ಮ ಸ್ಕೃತಿಪಟಲದಿಂದ ಅಳಿಸಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ಇವರಿಬ್ಬರಲ್ಲಿ ಯಾರು ಒಳ್ಳೆಯವರು ಎಂಬ ಚರ್ಚೆಯನ್ನು ನಾವು ಹಲವು ದಶಕಗಳಿಂದ ಮಾಡುತ್ತಾ ಬಂದಿದ್ದೇವೆ. ಅದೇ ವೇಳೆ ಮೂಲಭೂತವಾದಿಗಳು ಇವರನ್ನು ಅಳಿಸಿಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಸೂಕ್ಷ್ಮವನ್ನು ಅರಿತುಕೊಂಡು ಇಬ್ಬರನ್ನೂ ಉಳಿಸಿಕೊಳ್ಳುವುದು ಇಂದಿನ ಅಗತ್ಯ ಎಂದರು.

ಹಿಂದೂ ಮಹಾಸಭಾದವರು ಗಾಂಧಿ ಕೊಂದ ಗೋಡ್ಸೆ ಕುರಿತ ವಿಚಾರ ಸಂಕಿರಣ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ. ರಾಜ್ಯ ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿದ್ದ ಸುತ್ತೋಲೆಯಲ್ಲಿ ‘ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ರಚಿಸಿಲ್ಲ’ ಎಂದು ಬರೆಯಲಾಗಿದೆ. ಖಾಸಗಿ ಸಂಸ್ಥೆಯೊಂದು ಸಂವಿಧಾನ ಕುರಿತು ಕಾರ್ಯಕ್ರಮ ಆಯೋಜಿಸುವಾಗ ಅಂಬೇಡ್ಕರ್ ಭಾವಚಿತ್ರವನ್ನೇ ಪ್ರಕಟಿಸಿಲ್ಲ. ಇವೆಲ್ಲವೂ ಗಾಂಧಿ, ಅಂಬೇಡ್ಕರ್ ಅವರನ್ನು ಇತಿಹಾಸದಿಂದ ಅಳಿಸಿ ಹಾಕುವ ಉದ್ದೇಶದಿಂದ ಕೂಡಿವೆ ಎಂದು ಹೇಳಿದರು.

ಚರಿತ್ರೆಯ ಮರುವ್ಯಾಖ್ಯಾನ ಆಗಲಿ: ‘ಗಾಂಧಿ ಮತ್ತು ಅಂಬೇಡ್ಕರ್‌ ಚಿಂತನೆಯ ಒಳನೋಟಗಳು’ ವಿಷಯದಲ್ಲಿ ಮಾತನಾಡಿದ ಚಿಂತಕ ಜಗದೀಶ್‌ ಕೊಪ್ಪ, ಅಂಬೇಡ್ಕರ್‌ ಮತ್ತು ಗಾಂಧೀಜಿ ಅವರನ್ನು ಜತೆಗೂಡಿಸಿಕೊಂಡು ಹೋರಾಟ ಮಾಡಿದರೆ ಮಾತ್ರ ನಮಗೆ ಭವಿಷ್ಯವಿದೆ ಎಂದು ತಿಳಿಸಿದರು.

ಗಾಂಧಿಯನ್ನು ಕೊಂದವರನ್ನು ಮಹಾತ್ಮರ ಪಟ್ಟಕ್ಕೆ ಏರಿಸಲಾಗುತ್ತಿದೆ. ಬ್ರಿಟಿಷರಿಗೆ 13 ಸಲ ಕ್ಷಮಾಪಣ ಪತ್ರ ಬರೆದ ಸಾವರ್ಕರ್‌ಗೆ ಭಾರತ ರತ್ನ ಕೊಡಬೇಕು ಎಂಬ ಕೂಗು ಎದ್ದಿದೆ. ನಾವು ನಮ್ಮ ಚಿಂತನೆಯ ಮಾದರಿಯನ್ನು ಬದಲಿಸಬೇಕಿದೆ. ಚರಿತ್ರೆಯ ಮರುವ್ಯಾಖ್ಯಾನ ನಡೆಸುವ ಅಗತ್ಯವಿದೆ ಎಂದು ನುಡಿದರು.

ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ಆಶಯಗಳು ಒಂದೇ ಆಗಿದ್ದವು. ಆದರೆ ತಮ್ಮ ಉದ್ದೇಶದ ಈಡೇರಿಕೆಗೆ ಭಿನ್ನ ಮಾರ್ಗಗಳನ್ನು ಆಯ್ದುಕೊಂಡಿದ್ದರು. ಈ ದೇಶದ ಪ್ರತಿಯೊಬ್ಬರಿಗೂ ಘನತೆಯ ಬದುಕು ತಂದುಕೊಡುವುದು ಇಬ್ಬರ ಗುರಿ ಆಗಿತ್ತು. ಸಮುದಾಯದ ನೋವನ್ನು ತಮ್ಮ ವೈಯಕ್ತಿಕ ನೋವು ಎಂದೇ ಭಾವಿಸಿದ್ದರು ಎಂದರು.

ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಗಾಂಧಿ ಮತ್ತು ಅಂಬೇಡ್ಕರ್‌ ಮುಖಾಮುಖಿ ಎನ್ನುವುದಕ್ಕಿಂತ ಅನುಸಂಧಾನ ಎನ್ನಬೇಕು. ಪೂನಾ ಒಪ್ಪಂದ ಮುಂದಿಟ್ಟುಕೊಂಡು ಗಾಂಧೀಜಿ ಅವರನ್ನು ವಿರೋಧಿಸಲಾಗುತ್ತದೆ. ದಲಿತರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತರೆ ಅಸ್ಪೃಶ್ಯತೆ ತೊಲಗುವುದೇ? ಪೂನಾ ಒಪ್ಪಂದದಿಂದ ದಲಿತರಿಗೆ ಯಾವುದೇ ನಷ್ಟ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.

‘ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿ- ಭಾರತದ ಸಾಮಾಜಿಕ ವ್ಯವಸ್ಥೆಗೆ ಪೂರಕವೇ?’ ವಿಷಯದಲ್ಲಿ ಚಿಂತಕ ಪ್ರೊ.ಮಹಾದೇವ ಶಂಕನಪುರ ವಿಚಾರ ಮಂಡಿಸಿದರು. ಸಮಾರೋಪ ಸಮಾರಂಭದಲ್ಲಿ ಶಾಸಕ ಎನ್.ಮಹೇಶ್, ರಂಗಾಯಣದ ಜಂಟಿ ನಿರ್ದೇಶಕ ಎನ್‌.ಮಲ್ಲಿಕಾರ್ಜುನಸ್ವಾಮಿ ಪಾಲ್ಗೊಂಡಿದ್ದರು. ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಕೃಷ್ಣ ಜನಮನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.