ADVERTISEMENT

ಮೈಸೂರಿನಲ್ಲಿ 800 ದಾಟಿದ ಸಕ್ರಿಯ ಕೋವಿಡ್‌ ಪ್ರಕರಣ

ಜಿಲ್ಲೆಯಲ್ಲಿ ಹೊಸದಾಗಿ 93 ಮಂದಿಗೆ ಕೊರೊನಾ ಸೋಂಕು, ಏಳು ಸಾವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:24 IST
Last Updated 18 ಜುಲೈ 2020, 2:24 IST
ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ತಡೆದು ವಿಚಾರಿಸಿದರು (ಎಡಚಿತ್ರ). ಎನ್‌.ಆರ್‌.ಕ್ಷೇತ್ರದಲ್ಲಿ ಲಾಕ್‌ಡೌನ್‌ ವಿಧಿಸಿರುವುದರಿಂದ ಮೀನಾ ಬಜಾರ್‌ನಲ್ಲಿ ಶುಕ್ರವಾರ ವಹಿವಾಟು ಇಲ್ಲದ ಬಿಕೋ ಎನ್ನುತ್ತಿತ್ತು
ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ತಡೆದು ವಿಚಾರಿಸಿದರು (ಎಡಚಿತ್ರ). ಎನ್‌.ಆರ್‌.ಕ್ಷೇತ್ರದಲ್ಲಿ ಲಾಕ್‌ಡೌನ್‌ ವಿಧಿಸಿರುವುದರಿಂದ ಮೀನಾ ಬಜಾರ್‌ನಲ್ಲಿ ಶುಕ್ರವಾರ ವಹಿವಾಟು ಇಲ್ಲದ ಬಿಕೋ ಎನ್ನುತ್ತಿತ್ತು   

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ 93 ಮಂದಿಯಲ್ಲಿ ಕೋವಿಡ್‌ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,413ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿನಿಂದ ಏಳು ಮಂದಿ ಮೃತಪಟ್ಟಿದ್ದಾರೆ. ಸತ್ತವರ ಸಂಖ್ಯೆ 57ಕ್ಕೆ ಏರಿದೆ. ಜಿಲ್ಲೆಯಲ್ಲಿ ಗುರುವಾರ ಮೂವರು ಮೃತಪಟ್ಟಿದ್ದರು.

80 ವರ್ಷ, 69 ವರ್ಷ, 63 ವರ್ಷ, 47 ವರ್ಷ, 49 ವರ್ಷ ಮತ್ತು 48 ವರ್ಷ ವಯಸ್ಸಿನ ಪುರುಷರು ಹಾಗೂ 52 ವರ್ಷ ವಯಸ್ಸಿನ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದರು. ಇವರಲ್ಲಿ ನಾಲ್ವರು ಆ.15ರಂದು ಆಸ್ಪತ್ರೆಗೆ ದಾಖಲಾಗಿ ಮರುದಿನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸಿದೆ.

ADVERTISEMENT

ಮೂವರು ಗರ್ಭಿಣಿಯರಲ್ಲಿ, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದ 11 ಮಂದಿಯಲ್ಲಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿದ್ದ 24 ಮಂದಿ, ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದ 17 ಮಂದಿಯಲ್ಲಿ ಹಾಗೂ ಪ್ರಾಥಮಿಕ ಸಂಪರ್ಕಿತ 38 ಮಂದಿಯಲ್ಲಿ ಸೋಂಕು ಇರುವುದು ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ತಿಳಿಸಿದ್ದಾರೆ.

800 ದಾಟಿದ ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 805ಕ್ಕೆ ಏರಿಕೆಯಾಗಿದೆ. ಕೋವಿಡ್‌ ಆಸ್ಪತ್ರೆಯಲ್ಲಿ 245 ಮಂದಿ, ಕೋವಿಡ್‌ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ 75 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 110, ಖಾಸಗಿ ಆಸ್ಪತ್ರೆಗಳಲ್ಲಿ 85 ಹಾಗೂ 290 ಮಂದಿಯನ್ನು ಮನೆಗಳಲ್ಲೇ ಐಸೊಲೇಷನ್‌ ಮಾಡಲಾಗಿದೆ.

ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಹೊಸದಾಗಿ 78 ಪ್ರದೇಶಗಳನ್ನು ಕಂಟೈನ್‌ಮೆಂಟ್‌ ವಲಯ ಎಂದು ಗುರುತಿಸಲಾಗಿದೆ.

2,037 ಮಂದಿಯನ್ನು 14 ದಿನಗಳ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಒಟ್ಟು 30,205 ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.