ಮೈಸೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಜಾರಿಗೊಂಡಾಗಿನಿಂದ ಜಿಲ್ಲೆಯ ವಿವಿಧ ಸಾರಿಗೆ ಘಟಕಗಳ ವ್ಯಾಪ್ತಿಯಲ್ಲಿ ಬರೋಬ್ಬರಿ 31.04 ಕೋಟಿ ಮಹಿಳಾ ಪ್ರಯಾಣಿಕರು ಸಂಚರಿಸಿದ್ದು, ಕೆಎಸ್‌ಆರ್‌ಟಿಸಿಗೆ ₹776 ಕೋಟಿ ಆದಾಯ ಲಭಿಸಿದೆ.
ಜಿಲ್ಲೆಯಲ್ಲಿ ಒಟ್ಟು 10 ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷದ ಅವಧಿಯಲ್ಲಿ ಒಟ್ಟಾರೆ 46.67 ಕೋಟಿ ಪ್ರಯಾಣಿಕರು ಸಂಚಾರ ಕೈಗೊಂಡಿದ್ದಾರೆ. ಇವರಲ್ಲಿ ಶೇ 66.5 ಮಂದಿ ಶಕ್ತಿ ಯೋಜನೆಯ ಉಚಿತ ಸಂಚಾರದ ಲಾಭ ಪಡೆದಿದ್ದಾರೆ.
ಯಾವ ವರ್ಷ ಎಷ್ಟು?: 2023–24ನೇ ಸಾಲಿನಲ್ಲಿ ಜಿಲ್ಲೆಯ 10 ಘಟಕಗಳಿಂದ ಒಟ್ಟು 18.39 ಕೋಟಿ ಮಂದಿ ಪ್ರಯಾಣ ಕೈಗೊಂಡಿದ್ದು, ಇವರಲ್ಲಿ 10.81 ಕೋಟಿ ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಇದರಿಂದ ₹246.77 ಕೋಟಿ ಆದಾಯವು ಸಾರಿಗೆ ಸಂಸ್ಥೆಗೆ ಲಭಿಸಿದೆ.
2024–25ನೇ ಸಾಲಿನಲ್ಲಿ 22.58 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಇವರಲ್ಲಿ 15.99 ಕೋಟಿ ಮಹಿಳಾ ಪ್ರಯಾಣಿಕರು. ಇದರಿಂದ ₹404.77 ಕೋಟಿ ಆದಾಯ ಬಂದಿದೆ. ಈ ಸಾಲಿನಲ್ಲಿ ಜೂನ್ ಅಂತ್ಯಕ್ಕೆ 5.70 ಕೋಟಿ ಪ್ರಯಾಣ ಕೈಗೊಂಡಿದ್ದು, ಇವರಲ್ಲಿ 4.24 ಕೋಟಿ ಮಹಿಳೆಯರು. ಇದರಿಂದ ಸಂಸ್ಥೆಯು ₹123.94 ಕೋಟಿ ಆದಾಯ ಗಳಿಸಿದೆ.
ಎಲ್ಲಿ ಹೆಚ್ಚು?: ಮೈಸೂರು ನಗರ ವಿಭಾಗದ 4 ಘಟಕಗಳು ಅತಿ ಹೆಚ್ಚು ಪ್ರಯಾಣಿಕರನ್ನು ಕಂಡಿದ್ದು, ಉತ್ತಮ ಆದಾಯವನ್ನೂ ಗಳಿಸಿವೆ. ಕುವೆಂಪುನಗರ, ಸಾತಗಳ್ಳಿ, ವಿಜಯನಗರ ಘಟಕಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಮೈಸೂರು ಗ್ರಾಮಾಂತರ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ಘಟಕಗಳು ಉಳಿದವಕ್ಕೆ ಹೋಲಿಸಿದರೆ ಕಡಿಮೆ ಆದಾಯ ಪಡೆದಿವೆ.
ಸದ್ಯ ಮೈಸೂರು ಜಿಲ್ಲೆಯಲ್ಲಿ ನಿತ್ಯ 1,308 ಬಸ್‌ಗಳು ಸಂಚಾರ ಕೈಗೊಂಡಿದ್ದು, 3748 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿತ್ಯ ಸರಾಸರಿ 6.24 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.