ADVERTISEMENT

ತಿ. ನರಸೀಪುರ | ಶನೇಶ್ವರಸ್ವಾಮಿ‌ ಉತ್ಸವ: ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 3:02 IST
Last Updated 3 ಆಗಸ್ಟ್ 2025, 3:02 IST
<div class="paragraphs"><p>ತಿ.ನರಸೀಪುರ ತಾಲ್ಲೂಕಿನ ಚೌಹಳ್ಳಿ ಗ್ರಾಮದಲ್ಲಿ ಶನೇಶ್ವರ ಸ್ವಾಮಿ ಉತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು</p></div>

ತಿ.ನರಸೀಪುರ ತಾಲ್ಲೂಕಿನ ಚೌಹಳ್ಳಿ ಗ್ರಾಮದಲ್ಲಿ ಶನೇಶ್ವರ ಸ್ವಾಮಿ ಉತ್ಸವದ ಅಂಗವಾಗಿ ಮೆರವಣಿಗೆ ನಡೆಯಿತು

   

ತಿ. ನರಸೀಪುರ: ತಾಲ್ಲೂಕಿನ ಚೌಹಳ್ಳಿ ಗ್ರಾಮದ ಸಮೀಪದಲ್ಲಿರುವ ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶ್ರಾವಣ ಮಾಸದ ಎರಡನೇ ಶನಿವಾರ ಶನೇಶ್ವರಸ್ವಾಮಿ‌ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಉತ್ಸವದ ಅಂಗವಾಗಿ ಬೆಳಗಿನಿಂದಲೇ ಶನೇಶ್ವರ ಸ್ವಾಮಿಗೆ ಗುಡ್ಡಪ್ಪ ಮಹೇಶ್ ಅವರು ವಿಶೇಷ ಪೂಜೆ ನೆರವೇರಿಸಿದರು. ಬಳಿಕ ವೀರಗಾಸೆ ಕಲಾ ತಂಡಗಳೊಂದಿಗೆ ಶನಿದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.

ADVERTISEMENT

ಗ್ರಾಮ ಮಾತ್ರವಲ್ಲದೇ ನೆರೆ ಹೊರೆ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಉತ್ಸವದ ಪೂಜೆ ಕಾರ್ಯಗಳಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.

ಪ್ರತಿ ಅಮಾವಾಸ್ಯೆಯಂದು ಈ ದೇವಾಲಯದಲ್ಲಿ ವಿಶೇಷ ಪೂಜೆಗಳು ಹಾಗೂ ಅನ್ನಸಂತರ್ಪಣೆ ಕೂಡ ಆಯೋಜಿಸಲಾಗುತ್ತಿದೆ ಎಂದು ಗುಡ್ಡಪ್ಪ ಮಹೇಶ್ ತಿಳಿಸಿದರು.

ಸೋಮನಾಥಪುರದಲ್ಲಿ ಶ್ರಾವಣ ಪೂಜೆ 

ತಾಲ್ಲೂಕಿನ ಸೋಮನಾಥಪುರ ಗ್ರಾಮದ ಹೊರವಲಯದಲ್ಲಿರುವ ಶನೇಶ್ವರ ಸ್ವಾಮಿ‌ ಸಮೂಹ ದೇವಾಲಯಗಳ‌ ಸನ್ನಿಧಿಯಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ನಡೆಯಿತು.

ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ, ಹೂವಿನ ಅಲಂಕಾರ, ಪಂಚಾಮೃತಾಭಿಷೇಕ, ನವಗ್ರಹ ಪೂಜೆ ನಡೆಯಿತು. ಮುಂದಿನ ಆ.8ರಂದು ಸಮೂಹ ದೇವಾಲಯದಲ್ಲಿ ಶ್ರೀಚಕ್ರ ಸಮೇತ ಮಾತಾ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ಹಾಗೂ ಶನಿವಾರ ದೇವರಿಗೆ ಹಾಲಿನ ಅಭಿಷೇಕ, ಗಣಪತಿ, ನವಗ್ರಹ ಹಾಗೂ ಸುದರ್ಶನ ಹೋಮಗಳು ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಅರ್ಚಕ ಕೇಶವಸ್ವಾಮಿ ಕೋರಿದ್ದಾರೆ.

ಛಾಯಾದೇವಿ ದೇಗುಲದಲ್ಲಿ ದಾಸೋಹ

ಪಟ್ಟಣದ ವಿದ್ಯಾನಗರದಲ್ಲಿರುವ ಛಾಯಾದೇವಿ- ಶ್ರೀಶನೇಶ್ವರ ಸ್ವಾಮಿ ದೇವಾಲಯದಲ್ಲಿ ಶನಿವಾರ ಶ್ರಾವಣ ಮಾಸದ ವಿಶೇಷ ಪೂಜೆಗಳು ಜರುಗಿದವು. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ದಾಸೋಹ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.