ADVERTISEMENT

ಶಿವರಾತ್ರೀಶ್ವರ, ಹಾಲಭಾವಿ, ವೀರಪ್ಪ ಪ್ರಶಸ್ತಿ ಪ್ರದಾನ

ಗುರುವಿನ ಬೆಳಕು, ಕಾರುಣ್ಯ ಇದ್ದರೆ ಸಾಧನೆ: ಪ್ರಭುಚನ್ನಬಸವ ಸ್ವಾಮೀಜಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 10:49 IST
Last Updated 19 ಆಗಸ್ಟ್ 2022, 10:49 IST
ಮೈಸೂರಿನ ಶ್ರೀರಾಜೇಂದ್ರ ಭವನದಲ್ಲಿ ಶುಕ್ರವಾರ ಮಂಗಳೂರಿನ ಚಿತ್ರ ಕಲಾವಿದ ಕೆ.ಪುರುಷೋತ್ತಮ ನಾಯಕ್‌ ಅವರಿಗೆ ‘ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿ’, ಬೆಳಗಾವಿ ಜಿಲ್ಲೆ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ ‘ಶಿವರಾತ್ರೀಶ್ವರ ಪ್ರಶಸ್ತಿ’, ಬೆಂಗಳೂರಿನ ಚಿತ್ರ ಕಲಾವಿದ ಜಿ.ಆರ್‌.ಗೋವಿಂದ ರಾಜು ಅವರಿಗೆ ‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಬಿ.ಮಂಜುನಾಥ, ಚಂದ್ರಕಾಂತ ಬೆಲ್ಲದ, ಸದಾಶಿವಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಹೇಶ್‌ ಜೋಶಿ ಹಾಗೂ ದತ್ತಿ ನಿಧಿ ಸ್ಥಾಪಕರ ಕುಟುಂಬದವರು ಇದ್ದರು 
ಮೈಸೂರಿನ ಶ್ರೀರಾಜೇಂದ್ರ ಭವನದಲ್ಲಿ ಶುಕ್ರವಾರ ಮಂಗಳೂರಿನ ಚಿತ್ರ ಕಲಾವಿದ ಕೆ.ಪುರುಷೋತ್ತಮ ನಾಯಕ್‌ ಅವರಿಗೆ ‘ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿ’, ಬೆಳಗಾವಿ ಜಿಲ್ಲೆ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ ‘ಶಿವರಾತ್ರೀಶ್ವರ ಪ್ರಶಸ್ತಿ’, ಬೆಂಗಳೂರಿನ ಚಿತ್ರ ಕಲಾವಿದ ಜಿ.ಆರ್‌.ಗೋವಿಂದ ರಾಜು ಅವರಿಗೆ ‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಡಾ.ಬಿ.ಮಂಜುನಾಥ, ಚಂದ್ರಕಾಂತ ಬೆಲ್ಲದ, ಸದಾಶಿವಾನಂದ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಹೇಶ್‌ ಜೋಶಿ ಹಾಗೂ ದತ್ತಿ ನಿಧಿ ಸ್ಥಾಪಕರ ಕುಟುಂಬದವರು ಇದ್ದರು    

ಮೈಸೂರು: ಸುತ್ತೂರು ವೀರಸಿಂಹಾಸನ ಮಠ ಹಾಗೂ ಜೆಎಸ್‌ಎಸ್‌ ಮಹಾವಿದ್ಯಾಪೀಠದ ವತಿಯಿಂದ ಇಲ್ಲಿನ ಶ್ರೀರಾಜೇಂದ್ರ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆ ಅಥಣಿಯ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರಿಗೆ 2021ನೇ ಸಾಲಿನ ಶಿವರಾತ್ರೀಶ್ವರ ಪ್ರಶಸ್ತಿಯನ್ನು (₹ 25 ಸಾವಿರ ಗೌರವ ಧನ) ಪ್ರದಾನ ಮಾಡಲಾಯಿತು.

‘ವಚನ ಚಿತ್ರರಚನಾ ಪಿತಾಮಹ ಎಂ.ವೀರಪ್ಪ ದತ್ತಿ ಪ್ರಶಸ್ತಿ’ಯನ್ನು (₹ 68 ಸಾವಿರ ಗೌರವಧನ) ಬೆಂಗಳೂರಿನ ಚಿತ್ರ ಕಲಾವಿದ ಜಿ.ಆರ್‌.ಗೋವಿಂದ ರಾಜು ಹಾಗೂ ‘ಕಲಾಗುರು ಡಿ.ವಿ.ಹಾಲಭಾವಿ ಪ್ರಶಸ್ತಿ’ಯನ್ನು (₹ 10 ಸಾವಿರ ಗೌರವ ಧನ) ಮಂಗಳೂರಿನ ಚಿತ್ರ ಕಲಾವಿದ ಕೆ.ಪುರುಷೋತ್ತಮ ನಾಯಕ್‌ ಅವರಿಗೂ ನೀಡಲಾಯಿತು.

2020ನೇ ಸಾಲಿನ ಶಿವರಾತ್ರೀಶ್ವರ ಪ್ರಶಸ್ತಿಗೆ ಲೇಖಕ ಡಾ.ಎಚ್‌.ಎನ್‌.ಮುರುಳೀಧರ ಅವರಿಗೂ ಗೈರಿನಲ್ಲಿ ನೀಡಲಾಯಿತು.

ADVERTISEMENT

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಭುಚನ್ನಬಸವ ಸ್ವಾಮೀಜಿ, ‘ಲಕ್ಷಾಂತರ ಮಕ್ಕಳಿಗೆ ಅನ್ನ, ಅರಿವು, ಆಶ್ರಯ, ಅನುಭಾವ ನೀಡಿ ಸುತ್ತೂರು ಮಠ ಸಲಹಿದೆ. ಮೈಗೂರಿನಿಂದ ಮೈಸೂರಿಗೆ ಬಂದು ಗುರು ರಾಜೇಂದ್ರ ಸ್ವಾಮೀಜಿ ಅವರ ಅಂತಃಕರಣದ ದೃಷ್ಟಿಗೆ ಬಿದ್ದೆ’ ಎಂದರು.

‘ಪ್ರಶಸ್ತಿಗೆ ‘ಮಹಾತ್ಮರ ಚರಿತಾಮೃತ’ ಕೃತಿ ಆಯ್ಕೆಯಾಗಿರುವುದು ಗುರುವಿನ ಆಶೀರ್ವಾದವಾಗಿದೆ. ಪುಸ್ತಕವು ನಾಲ್ಕನೇ ಮುದ್ರಣವನ್ನೂ ಕಂಡಿದೆ. ಹುಡುಗನಾಗಿ ಬಂದವನಿಗೆ ಅರಿವಿನ ಬೆಳಕನ್ನು ಮಠ ನೀಡಿದೆ’ ಎಂದು ಹೇಳಿದರು.

ಕಲಾವಿದ ಜಿ.ಆರ್‌.ಗೋವಿಂದ ರಾಜು ಮಾತನಾಡಿ, ‘ಚಿತ್ರಕಲೆಯನ್ನು ಕಲಿಯುವುದು ಕಷ್ಟ. ಅಭಿಮಾನವಿದ್ದರೆ ಕಲೆ ಒಲಿಯುತ್ತದೆ. ಗುರು ಎಸ್‌.ಎಂ.ಸೂಫಿ ನನ್ನನ್ನು ಮುನ್ನಡೆಸಿದರು. ಅವರು ಮುಸ್ಲಿಮರಾದರೂ ನಂಜುಂಡೇಶ್ವರ– ಚಾಮುಂಡೇಶ್ವರಿಯ ಭಕ್ತಿಯನ್ನು ನನ್ನಲ್ಲಿ ಹೆಚ್ಚಿಸಿದರು. 64 ವಿದ್ಯೆಗಳನ್ನು ಕಲಿತ ಶಿವನಂತೆ ಕಲಾವಿದನಾಗಬೇಕೆಂದು ಯಾವಾಗಲೂ ಹೇಳುತ್ತಿದ್ದರು’ ಎಂದು ಸ್ಮರಿಸಿದರು.

‘ಜಾತಿ–ಧರ್ಮದ ಭೇದವಿಲ್ಲದೆಯೇ ವಿದ್ಯೆಯನ್ನು ಗುರು ಧಾರೆಯೆರೆದರು. ನಾನು ವೈಷ್ಣವನಾದರೂ ನಂಜುಂಡ– ಚಾಮುಂಡಿ ನನ್ನ ತಂದೆ– ತಾಯಿ’ ಎಂದು ನೆನೆದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಮಂಜುನಾಥ ಅವರು ‘ದ ಹೆರಿಟೇಜ್ ಆಫ್‌ ಸುತ್ತೂರು ಮಠ್‌’, ‘ಕ್ಯಾತನಹಳ್ಳಿ ಸಾಹುಕಾರ್‌ ಸಿದ್ಧಲಿಂಗಯ್ಯ’, ‘ನಾಟ್ಯಕಲಾ ವಿಶಾರದ ಎಂ.ಸಿ.ಮಹದೇವಸ್ವಾಮಿ’ ಕೃತಿಗಳನ್ನು ಬಿಡುಗಡೆ ಮಾಡಿದರು.

ಕೃತಿಗಳ ಕುರಿತು ನಂದೀಶ್‌ ಹಂಚೆ ಮಾತನಾಡಿದರು.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗದುಗಿನ ಶಿವಾನಂದ ಬೃಹನ್ಮಠದ ಸದಾಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

‘ಸಮಯ ಸಾಧಕರೇ ಹೆಚ್ಚು’:ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಮಾತನಾಡಿ, ‘ಸಾಧನೆಗೆ ಗುರು– ಗುರಿ ಇರಬೇಕು. ಪ್ರಸ್ತುತ ಸಂದರ್ಭದಲ್ಲಿ ಸಾಧಕರಿಗಿಂತ ಸಮಯ ಸಾಧಕರೇ ಹೆಚ್ಚಿದ್ದಾರೆ. ಸರ್ಕಾರ ನೀಡುವ ನೂರಾರು ಪ್ರಶಸ್ತಿಗಳನ್ನು ಅರ್ಹತೆಯಿಂದ ಪಡೆದುಕೊಳ್ಳುತ್ತಿಲ್ಲ. ಪ್ರಭಾವ ಬಳಸಿ ಹೊಡೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅರ್ಜಿಯನ್ನೇ ಪಡೆಯದೇ ಪುಸ್ತಕಗಳನ್ನು ಆಯ್ಕೆ ಮಾಡಿ ಅರ್ಹರಿಗೆ ಪ್ರಶಸ್ತಿ ನೀಡುವ ಸುತ್ತೂರು ಮಠದ ಕಾರ್ಯವು ರಾಜ್ಯದ ಎಲ್ಲ ಸಂಸ್ಥೆಗಳಿಗೂ ಆದರ್ಶವಾಗಿದೆ’ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.