ADVERTISEMENT

ಶಿವರಾತ್ರಿ ರಾಜೇಂದ್ರ ಶ್ರೀ ಜಯಂತಿ 25ರಂದು

ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ಹಲವು ಸೇವಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 6:37 IST
Last Updated 23 ಆಗಸ್ಟ್ 2024, 6:37 IST
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ   

ಮೈಸೂರು: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ 109ನೇ ಜಯಂತಿ ಮಹೋತ್ಸವವನ್ನು ಆ.25ರಂದು ನಗರದ ಚಾಮುಂಡಿಬೆಟ್ಟದ ಪಾದದಲ್ಲಿರುವ ಶಾಖಾ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10.30ಕ್ಕೆ ಗೋವಾದ ರಾಜ್ಯಪಾಲ ಪಿ.ಎಸ್.ಶ್ರೀಧರನ್‌ ಪಿಳ್ಳೈ ಉದ್ಘಾಟಿಸುವರು. ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಅಧ್ಯಾತ್ಮ ನೇತಾರ ಮಧುಸೂದನ ಸಾಯಿ ಸಮ್ಮುಖ ವಹಿಸುವರು. ಮೇಘಾಲಯದ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್ ಅಧ್ಯಕ್ಷತೆ ವಹಿಸುವರು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

‘ಅನ್ನ, ಶಿಕ್ಷಣ, ಅರಿವು, ಆರೋಗ್ಯ, ಕಲೆ, ಸಾಹಿತ್ಯ, ಸಂಗೀತ, ಸಮಾಜ ಸುಧಾರಣೆ, ಧರ್ಮ ಜಾಗೃತಿ ಮೊದಲಾದ ಕ್ಷೇತ್ರಗಳಲ್ಲಿ ಶ್ರೀಮಠವು ಹಮ್ಮಿಕೊಂಡಿರುವ ಎಲ್ಲ ರೀತಿಯ ಸೇವಾ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕಿದ ಶ್ರೀಗಳ ಜಯಂತಿಯನ್ನು ಪ್ರತಿ ವರ್ಷದಂತೆ ಈ ಬಾರಿಯೂ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುವುದು. ಅಂದು ಹಲವು ಸೇವಾ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಂದು ಮಧ್ಯಾಹ್ನ 3ಕ್ಕೆ, ಜೆಎಸ್‌ಎಸ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಅಭಿನಂದಿಸಲಾಗುವುದು. ನಿವೃತ್ತರಾಗಿರುವ 102 ಮಂದಿ ಹಾಗೂ ಸೇವೆಯಿಂದ ಬಿಡುಗಡೆ ಪಡೆದಿರುವ 63 ಜನರನ್ನು ಅಭಿನಂದಿಸಲಾಗುವುದು. ಸೇವೆಯಲ್ಲಿರವಾಗಲೇ ನಿಧನರಾದ 12 ನೌಕರರ ಕುಟುಂಬದವರಿಗೆ ಸಾಂತ್ವನ ಹೇಳಲಾಗುವುದು’ ಎಂದು ತಿಳಿಸಿದರು.

‘ಜಯಂತಿಯ ಅಂಗವಾಗಿ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ–ಪಕ್ಷಿಗಳಿಗೆ ಆಹಾರ ವಿತರಣೆಗೆಂದು ಪ್ರತಿ ವರ್ಷದಂತೆ ಈ ಬಾರಿಯೂ ₹ 1 ಲಕ್ಷ ನೀಡಲಾಗುವುದು. ಜೆಎಸ್‌ಎಸ್ ಗ್ರಂಥಮಾಲೆಯ ಪ್ರಕಟಣೆಗಳಿಗೆ ಆ.25ರಿಂದ ಸೆ.30ರವರೆಗೆ ಶೇ.50ರಷ್ಟು ರಿಯಾಯಿತಿ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ–2 ಶಿವಕುಮಾರಸ್ವಾಮಿ, ಕಾನೂನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಸುರೇಶ್‌, ಜಯಂತಿ ಮಹೋತ್ಸವ ಸಮಿತಿ ಮಾಧ್ಯಮ ಉಸ್ತುವಾರಿ ಸಂಚಾಲಕ ಎಸ್‌.ಎಂ.ಜಂಬುಕೇಶ್ವರ ಪಾಲ್ಗೊಂಡಿದ್ದರು.

ಜಯಂತಿ ಅಂಗವಾಗಿ ಜೆಎಸ್‌ಎಸ್ ಆಸ್ಪತ್ರೆಯ ಮಾಹಿತಿ ಕೇಂದ್ರದ ಘಟಕವು ಶ್ರೀಮಠದ ಆವರಣದಲ್ಲಿ ನೇತ್ರ ರಕ್ತ ಅಂಗಾಂಗಗಳು ಹಾಗೂ ದೇಹದಾನಗಳ ಬಗ್ಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಳ್ಳಲಿದೆ ಎಸ್.ಪಿ.ಮಂಜುನಾಥ್‌ ಕಾರ್ಯದರ್ಶಿ ಜೆಎಸ್‌ಎಸ್‌ ಮಹಾವಿದ್ಯಾಪೀಠ

ಅಂಗ ಸಂಸ್ಥೆಗಳಲ್ಲಿ ವಿವಿಧೆಡೆ ಆಚರಣೆ

ಪ್ರತಿ ವರ್ಷದಂತೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಎಲ್ಲ ಅಂಗ ಸಂಸ್ಥೆಗಳು ವಿವಿಧ ಸಂಘ–ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಶ್ರೀಗಳ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುವುದು. ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಹಣ್ಣು ವಿತರಣೆ ಶಾಲಾ–ಕಾಲೇಜುಗಳ ಆವರಣದಲ್ಲಿ ಸಸಿ ನೆಡುವುದು ವಿಚಾರಸಂಕಿರಣ ಹಾಗೂ ಕ್ರೀಡಾಕೂಟ ನಡೆಸಲಾಗುವುದು. ಆರೋಗ್ಯ ತಪಾಸಣೆ ಜಾಗೃತಿ ಶಿಬಿರವನ್ನೂ ಆಯೋಜಿಸಲಾಗಿದೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳು ಲೇಖನ ಸಾಮಗ್ರಿ ಶಾಲಾ ಬ್ಯಾಗ್‌ಗಳು ಬಟ್ಟೆಗಳನ್ನು ವಿತರಿಸುವುದು ಮೊದಲಾದ ಸೇವಾ ಕಾರ್ಯಕ್ರಮಗಳು ಜರುಗಲಿವೆ ಎಂದು ಮಂಜುನಾಥ್‌ ವಿವರ ನೀಡಿದರು.

ಪುರಸ್ಕಾರ ಪ್ರೋತ್ಸಾಹ

ಜೆಎಸ್‌ಎಸ್‌ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ ‘ಜೆಎಸ್‌ಎಸ್ ಪ್ರೌಢಶಾಲೆ ಪಬ್ಲಿಕ್ ಶಾಲೆ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪಿಯುಸಿ ಹಾಗೂ 12ನೇ ತರಗತಿ ಪರೀಕ್ಷೆಗಳಲ್ಲಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿ ವಿಭಾಗದ ಮೊದಲ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ವಿವರಿಸಿದರು. ‘ಜೆಎಸ್‌ಎಸ್ ಶಾಲಾ ಕಾಲೇಜುಗಳ ಉತ್ತಮ ವಾರ್ಷಿಕ ಸಂಚಿಕೆಗಳು ಹಾಗೂ ‘ಪ್ರಸಾದ’ ಮಾಸಿಕ ಸಂಚಿಕೆಯ ವಾರ್ಷಿಕ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಜೆಎಸ್‌ಎಸ್ ಪ್ರಸಾದ ನಿಲಯಗಳಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಹೆಚ್ಚಿನ ಅಂಕ ಗಳಿಸಿ ಆರ್ಥಿಕ ನೆರವು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ವಿದ್ಯಾರ್ಥಿವೇತನ ನೀಡಲಾಗುವುದು’ ಎಂದು ತಿಳಿಸಿದರು.

ಸುವರ್ಣ ಮಹೋತ್ಸವ ಉಪನ್ಯಾಸ

ಜೆಎಸ್‌ಎಸ್‌ ಮಹಾವಿದ್ಯಾಪೀಠದಿಂದ ಸುವರ್ಣ ಮಹೋತ್ಸವ ಉಪನ್ಯಾಸ ಹಾಗೂ ವಿಶೇಷ ಉಪನ್ಯಾಸ ಮಾಲೆಯ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಆ.24ರಂದು ಸಂಜೆ 4ಕ್ಕೆ ಜೆಎಸ್‌ಎಸ್‌ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ‘ಆತ್ಮಾನೋ ಮೋಕ್ಷಾರ್ಥಂ ಜಗತ್‌ ಹಿತಾಯ ಚ’ ವಿಷಯದ ಕುರಿತು ಅಧ್ಯಾತ್ಮ ನೇತಾರ ಮಧುಸೂದನ ಸಾಯಿ ಉಪನ್ಯಾಸ ನೀಡುವರು. ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್‌ ಅಧ್ಯಕ್ಷತೆ ವಹಿಸುವರು. ‘ಈಸ್‌ ಚಾರಿಟಿ ಎಸೆನ್ಷಿಯಲ್‌’ (ಅನುವಾದಿತ ಕೃತಿ– ಸುಧಾ ಮೂರ್ತಿ) ‘ಲೀಡರ್‌ಶಿಪ್ ಆಫ್‌ ಜಿ–20 ಅಪರ್ಚ್ಯುನಿಟೀಸ್ ಫಾರ್ ಭಾರತ್’ (ತಿರು ಆರ್‌.ಎನ್.ರವಿ) ಹಾಗೂ ‘ಟುಮಾರೋಸ್ ಇಂಡಿಯಾ ಬಿಗಿನ್ಸ್‌ ಟುಡೆ’ (ಅನೂಪ್ ಎನ್.ಮೆಹ್ತಾ) ಕೃತಿಗಳನ್ನು ವಿಶ್ರಾಂತ ಕುಲಪತಿ ಪ್ರೊ.ಜೆ.ಶಶಿಧರ ಪ್ರಸಾದ್ ಬಿಡುಗಡೆ ಮಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.