
ಮೈಸೂರು: ಇಲ್ಲಿನ ಪ್ರತಿಭೆ ಶ್ರೇಯಾ ಶ್ರೀನಿವಾಸನ್ ಅಮೆರಿಕಾದಲ್ಲಿ ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದಾರೆ.
ಸದ್ಯ ಅಮೆರಿಕಾದ ಕ್ಯಾಲಿಫೋರ್ನಿಯ ರಾಜ್ಯದ ಮಿಲ್ಟಿಟಾಸ್‌ನಲ್ಲಿ ಪೋಷಕರೊಂದಿಗೆ ನೆಲೆಸಿರುವ 10 ವರ್ಷದ ಶ್ರೇಯಾ ಅಮೆರಿಕಾದ 11 ವರ್ಷದ ಒಳಗಿನವರ ಟೇಬಲ್ ಟೆನಿಸ್ ತಂಡದ ಕಿರಿಯ ಸದಸ್ಯೆಯಾಗಿದ್ದಾರೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ವಿಶ್ವ ಟೇಬಲ್ ಟೆನಿಸ್ (ಡಬ್ಲ್ಯುಟಿಟಿ) ಯೂತ್ ಕಂಡೆಂಡರ್ ಸ್ಪರ್ಧೆಯಲ್ಲಿ ಅವರು ಚಾಂಪಿಯನ್ ಆಗಿದ್ದರು.
ಏಪ್ರಿಲ್‌ನಲ್ಲಿ ನಡೆದ ಡಬ್ಲ್ಯುಟಿಎ ಸ್ಯಾನ್‌ಫ್ರಾನ್ಸಿಸ್ಕೋ ಯುವ ಸ್ಪರ್ಧೆ ವಿಭಾಗದಲ್ಲಿ ಸೆಮಿಫೈನಲ್‌ಗೆ ಏರಿದ್ದರು. ಅಮೆರಿಕಾ ರಾಷ್ಟ್ರೀಯ ಸ್ಪರ್ಧೆಯ 11 ವರ್ಷದೊಳಗಿನವರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದರು. ಇದೇ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಿದ್ದರು. ಇಂತಹದ್ದೇ ಇನ್ನೂ ಅನೇಕ ಸ್ಪರ್ಧೆಗಳಲ್ಲಿ ಅವರು ಛಾಪು ಮೂಡಿಸುತ್ತಿದ್ದಾರೆ.
ಮಿಲ್ಪಿಟಾಸ್‌ನಲ್ಲಿರುವ ಇಂಡಿಯನ್ ಕಮ್ಯುನಿಟಿ ಸೆಂಟರ್ (ಐಸಿಸಿ) ಟೇಬಲ್ ಟೆನಿಸ್ ಕ್ಲಬ್‌ನಲ್ಲಿ ಅವರು ಭಾರತೀಯ ರಾಷ್ಟ್ರೀಯ ಆಟಗಾರ್ತಿ ಆಗಿದ್ದ ಕಿರಣ್‌ಜೋಯ್ ಪುಶಿಲಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಿತ್ಯ ನಾಲ್ಕು ತಾಸು ಕಾಲ ಬೆವರು ಹರಿಸುತ್ತಿದ್ದಾರೆ.
ಶ್ರೇಯಾರ ಪೋಷಕರಾದ ಮಾಧುರಿ ಶೇಖರ್ ಹಾಗೂ ಶ್ರೀನಿವಾಸನ್ ರಾಮ್‌ಕುಮಾರ್ ಮೈಸೂರಿನವರು. ಮಾಧುರಿ ಅವರೂ ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, ಹಾಂಕಾಂಗ್‌ನಲ್ಲಿ ನಡೆದಿದ್ದ ಏಷ್ಯನ್ ಜೂನಿಯರ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಮಗಳನ್ನೂ ಕ್ರೀಡಾ ಕ್ಷೇತ್ರದಲ್ಲಿ ಬೆಳೆಸುವ ಹಂಬಲ ಹೊಂದಿದ್ದಾರೆ.
ಮೊಮ್ಮಗಳು ಶ್ರೇಯಾಳ ಸಾಧನೆ ಬಗ್ಗೆ ನಗರದ ವಿದ್ಯಾರಣ್ಯಪುರಂನ ನಿವಾಸಿಗಳಾದ ಕೆ.ಎನ್. ಶೇಖರ್ ಹಾಗೂ ಉಷಾ ಶೇಖರ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.