ADVERTISEMENT

ಮೊಟ್ಟೆ ಪ್ರಕರಣ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಲಿ:ಎಚ್‌.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2022, 13:04 IST
Last Updated 20 ಆಗಸ್ಟ್ 2022, 13:04 IST
ಎಚ್‌.ಸಿ.ಮಹದೇವಪ್ಪ
ಎಚ್‌.ಸಿ.ಮಹದೇವಪ್ಪ   

ಮೈಸೂರು: ‘ಕೊಡಗು ಜಿಲ್ಲೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರ್‌ಗೆ ಮೊಟ್ಟೆ ಎಸೆದಿರುವ ಪ್ರಕರಣದ ತನಿಖೆಯನ್ನು ನ್ಯಾಯಾಧೀಶರ ನೇತೃತ್ವದ ಸಮಿತಿಗೆ ವಹಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಒತ್ತಾಯಿಸಿದರು.

‘ಸರ್ಕಾರವೇ ವಿನ್ಯಾಸಗೊಳಿಸಿರುವ ವ್ಯವಸ್ಥಿತಿ ಪಿತೂರಿ ಇದಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ದೂರಿದರು.

‘ಇಂತಹ ದಾಳಿಗಳಿಂದ ಕಾಂಗ್ರೆಸ್‌ ಪಕ್ಷವಾಗಲಿ, ಸಿದ್ದರಾಮಯ್ಯ ಅವರಾಗಲಿ ಬಗ್ಗುವುದಿಲ್ಲ–ಜಗ್ಗುವುದಿಲ್ಲ’ ಎಂದು ಗುಡುಗಿದರು.

ADVERTISEMENT

‘ಅವರು ಕೊಡಗು ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಲಾಗಿರುತ್ತದೆ. ಆದರೆ, ಭದ್ರತೆ ಒದಗಿಸಲಾಗಿಲ್ಲ. ಇಲ್ಲಿ ವ್ಯಕ್ತಿ ಪ್ರಶ್ನೆಯಲ್ಲ; ಸಂವಿಧಾನದ ಪ್ರಕಾರ ಮಾಡಿರುವ ಹುದ್ದೆಗೆ ಸಲ್ಲಬೇಕಾದ ಗೌರವ ಸಿಗಬೇಕಾಗುತ್ತದೆ’ ಎಂದರು.

‘ಈ‌ ಸರ್ಕಾರದ ಆಡಳಿತದ ವರ್ಚಸ್ಸು ದಿನೇ ದಿನೇ ಕುಗ್ಗುತ್ತಿದೆ. ಅಭಿವೃದ್ಧಿ ಮರೀಚಿಕೆ ಆಗುತ್ತಿದೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮ ದಿನಾಚರಣೆಯ ಯಶಸ್ಸು ಬಿಜೆಪಿಯವರಿಗೆ ‌ಗಾಬರಿ‌ ಹುಟ್ಟಿಸಿದೆ. ಅವರ ರಾಜಕೀಯ ನೆಲ ಅಲುಗಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಭಿವೃದ್ಧಿ ನಡೆಯುತ್ತಿಲ್ಲ. ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಇದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಸಿದ್ದರಾಮಯ್ಯ ಅವರ ಮೇಲೆ ದಾಳಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಸಚಿವರೇ ಹೇಳಿದ್ದಾರೆ. ಇದೆಲ್ಲ ಕಾರಣದಿಂದಾಗಿ, ಸಿದ್ದರಾಮಯ್ಯ ಸರ್ಕಾರದ ಸಾಧನೆಯನ್ನು ಜನರು ಮೆಲುಕು ಹಾಕುತ್ತಿದ್ದಾರೆ. ಹೀಗಾಗಿ, ಜನಪರ ಧ್ವನಿ ಅಡಗಿಸುವ ಹುನ್ನಾರವನ್ನು ಬಿಜೆಪಿಯು ತನ್ನ ಅಂಗಸಂಸ್ಥೆಗಳ ಮೂಲಕ ಮಾಡಿಸುತ್ತಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕರೊಬ್ಬರಿಗೆ ಮೊಟ್ಟೆ ಎಸೆಯುತ್ತಾರೆ ಎಂದರೆ ಎಂತಹ ಪರಿಸ್ಥಿತಿಗೆ‌ ಬಿಜೆಪಿಯವರು ಕರ್ನಾಟಕವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ? ಆ ಪಕ್ಷದವರ ಸಂಸ್ಕೃತಿ ಎಂಥದ್ದು?’ ಎಂದು ಆಕ್ರೋಶದಿಂದ ಕೇಳಿದರು.

‘ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ವ್ಯವಸ್ಥೆಯು ಕಣ್ಮುಚ್ಚಿ ಕುಳಿತಿದೆ. ಪಟ್ಟಭದ್ರರ, ಕೋಮುವಾದಿಗಳ ಕೈಗೊಂಬೆಯಾಗಿ ಕೆಲಸ ಮಾಡಿದೆ. ಇದೆಲ್ಲವನ್ನೂ ಗಮನಿಸಿದರೆ ಸರ್ಕಾರದ ಕುಮ್ಮಕ್ಕು ಎದ್ದು ಕಾಣುತ್ತಿದೆ. ಇದೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಶಿವಣ್ಣ, ಅಶೋಕಪುರಂ ಭಾಸ್ಕರ್, ಭಾಸ್ಕರ್, ಮಂಜುನಾಥ್, ಹುಣಸೂರು ಬಸವಣ್ಣ ಹಾಗೂ ಗ್ರಾಮಾಂತರ ಜಿಲ್ಲಾ ಘಟಕದ ವಕ್ತಾರ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.