ADVERTISEMENT

ರಾಜ್ಯದಲ್ಲಿ ‘ಸೂಪರ್ ಸಿಎಂ’ ಇಲ್ಲ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 23:49 IST
Last Updated 16 ಜುಲೈ 2025, 23:49 IST
ಡಾ.ಎಚ್.ಸಿ. ಮಹದೇವಪ್ಪ
ಡಾ.ಎಚ್.ಸಿ. ಮಹದೇವಪ್ಪ   

ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಸೂಪರ್ ಸಿ.ಎಂ. ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂವಿಧಾನದ ಪ್ರಕಾರ ಸಿ.ಎಂ. ಹುದ್ದೆ ಒಂದೇ ಇರುತ್ತದೆ. ಈಗ ಸಿದ್ದರಾಮಯ್ಯ ಅಲ್ಲಿ ಕುಳಿತಿದ್ದಾರೆ, ಆಡಳಿತ ನಡೆಸುತ್ತಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಸೂಪರ್ ಸಿ.ಎಂ. ಆಗಿ ನಡೆದುಕೊಂಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಉಸ್ತುವಾರಿಯು ಶಾಸಕರ ಅಭಿಪ್ರಾಯ ಕೇಳಿದ್ದಾರೆ. ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ನಾನೂ ಭೇಟಿಯಾಗಿದ್ದೆ. ಪಕ್ಷದ ನಾಯಕರು ಕರೆದಾಗ ಹೋಗಿ ಚರ್ಚಿಸುವುದು ಸಾಮಾನ್ಯ. ಶಾಸಕರಲ್ಲಿ ಸಚಿವರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಸುರ್ಜೇವಾಲ ಭೇಟಿಯಾದಾಗ ಅಪಸ್ವರ ತೆಗೆದಿಲ್ಲ’ ಎಂದರು.

ADVERTISEMENT

‘ಮೈಸೂರಿನಲ್ಲಿ ಜುಲೈ 19ರಂದು ₹2,569 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಮಾತ್ರ ಆಹ್ವಾನಿಸಲಾಗಿದೆ’ ಎಂದು ತಿಳಿಸಿದರು.

ಶಕ್ತಿ ಪ್ರದರ್ಶನದ ವೇದಿಕೆಯಲ್ಲ:

‘ಮೈಸೂರಿನ ಈ ಸಮಾವೇಶ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ವೇದಿಕೆಯಲ್ಲ. ಐದು ವರ್ಷಗಳವರೆಗೆ ಆಡಳಿತ ನಡೆಸಲು ಜನರು ಆಶೀರ್ವದಿಸಿದ್ದಾರೆ. ಅವರ ಬೆಂಬಲ, ಶಕ್ತಿಯಿಂದ ಕೆಲಸ ಮಾಡುತ್ತಿದ್ಧೇವೆಯೇ ಹೊರತು ಬೇರೆ ಯಾವ ಶಕ್ತಿಯೂ ಇಲ್ಲ. ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ನಾಯಕತ್ವ ಬದಲಾವಣೆ, ಅದಲು-ಬದಲು ಮೊದಲಾದ ವಿಚಾರಗಳು ಈಗ ಅನಗತ್ಯವಾಗಿದೆ. ನಮಗೆ ಅಭಿವೃದ್ಧಿಯಷ್ಟೇ ಮುಖ್ಯ’ ಎಂದು ಪ್ರತಿಕ್ರಿಯಿಸಿದರು.

‘ಸಿಗಂದೂರು ಸೇತುವೆಗೆ ಡಿಪಿಆರ್ ಸಿದ್ಧವಾಗಿದ್ದೇ ನಾನು ಲೋಕೋಪಯೋಗಿ ಸಚಿವನಾಗಿದ್ದಾಗ. ಇದರಲ್ಲಿ ನನ್ನ ಪಾಲೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.