ADVERTISEMENT

ಮೈಸೂರು| ಜೆಡಿಎಸ್ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 5:54 IST
Last Updated 26 ಜನವರಿ 2026, 5:54 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಒಂದೊಮ್ಮೆ ಜೆಡಿಎಸ್‌–ಬಿಜೆಪಿ ಮೈತ್ರಿ ಮಾಡಿಕೊಂಡರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ವಿಮಾನನಿಲ್ದಾಣದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು. 

‘ನಮಗೂ ಸಮಯ ಬರುತ್ತದೆ’ ಎಂಬ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿ ಸಿದ ಮುಖ್ಯಮಂತ್ರಿ, ‘ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಅವರು ಯಾವ ಅರ್ಥದಲ್ಲಿ ಹೇಳುತ್ತಾರೆಯೋ ಗೊತ್ತಿಲ್ಲ’ ಎಂದು ಕೇಳಿದರು.

ADVERTISEMENT

‘ಸುಮ್ಮನೆ ರಾಜಕೀಯ ಭಾಷಣ ಮಾಡಿದಾಕ್ಷಣಕ್ಕೆ ಆಗುತ್ತದೆಯೇ? ನಾನು ಅಧ್ಯಕ್ಷನಾಗಿದ್ದಾಗ 2004ರಲ್ಲಿ 59 ಸ್ಥಾನಗಳನ್ನು ಜೆಡಿಎಸ್‌ ಗೆದ್ದಿತ್ತು. ಈಗ ಎಷ್ಟಿದ್ದಾರೆ’ ಎಂದು ಕೇಳಿದರು.

‘ಹಾಗೊಂದು ವೇಳೆ ಬಿಜೆಪಿಯವರು ಹೆಚ್ಚು ಸ್ಥಾನ ಗೆದ್ದರೆ ಸುಮ್ಮನೆ ಬಿಟ್ಟುಬಿಡುತ್ತಾರೆಯೇ? ನೀವೇ ಸಿಎಂ ಆಗಿ ಎಂದು ಜೆಡಿಎಸ್‌ನವರಿಗೆ ಹೇಳುತ್ತಾರೆಯೇ?’ ಎಂದು ಪ್ರಶ್ನಿಸಿದರು.

‘ಕಾನೂನಿನ ಪ್ರಕಾರ ಪ್ರಜ್ವಲ್ ರೇವಣ್ಣ ಬಂಧನವಾಗಿದೆ. ಇದರಲ್ಲಿ ನಾವು ಮಧ್ಯಪ್ರವೇಶಿಸಿಲ್ಲ. ರೇವಣ್ಣ ಅವರದು ಮಾತ್ರವಲ್ಲ, ಯಾವುದೇ ಪ್ರಕರಣದಲ್ಲೂ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ಅಧಿಕಾರಿ ಗಳಿಗೆ ಸರ್ಕಾರ ಬಹುಮಾನ ಕೊಟ್ಟಿಲ್ಲ?’ ಎಂದರು. ‘ಹಾಗೇನಾದರೂ ಅಧಿಕಾರಕ್ಕೆ ಬಂದರೆ ಅವರೂ (ಜೆಡಿಎಸ್‌) ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ’ ಎಂದು ಹೇಳಿದರು. 

‘2028ಕ್ಕೂ ನಿಮ್ಮದೇ ನಾಯಕತ್ವವೇ’ ಎಂಬ ಪ್ರಶ್ನೆಗೆ, ‘ಹೈಕಮಾಂಡ್‌ ತೀರ್ಮಾನ ಮಾಡುತ್ತದೆ’ ಎಂದರು.

ರಾಜ್ಯಪಾಲರು ಭಾಷಣ ಬದಲಾಯಿಸುವ ಸಾಧ್ಯತೆ:

ಸಿದ್ದರಾಮಯ್ಯ ‘ವಿಧಾನಮಂಡಲದ ಅಧಿವೇಶನದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ವರದಿ ಕೊಡಲಿ ಬಿಡಿ. ಬೇಡ ಎಂದವರಾರು? ನಮ್ಮ ಕಡೆಯಿಂದ ವಿವರಣೆ ಏನೂ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು. ‘ಅಧಿವೇಶನದಲ್ಲಿ ಏನು ನಡೆಯಿತೆಂದು ಅವರು ರಾಷ್ಟ್ರಪತಿಯವರಿಗೆ ತಿಳಿಸಿದ್ದಾರಷ್ಟೆ. ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಬೇಕೆಂದು ಸಂವಿಧಾನದ 176 ಮತ್ತು 163 ಪರಿಚ್ಛೇದದಲ್ಲಿ ಸ್ಪಷ್ಟವಾಗಿ ಹೇಳಿದೆ. ಸರ್ಕಾರ ನೀಡಿದ್ದ ಭಾಷಣವನ್ನು ಅವರು ಓದಲೇಬೇಕಾಗಿತ್ತು’ ಎಂದು ಹೇಳಿದರು. ‘ಗಣರಾಜ್ಯೋತ್ಸವಕ್ಕೂ ಭಾಷಣ ಬರೆದುಕೊಡುತ್ತೇವೆ. ಆದರೆ ಓದುವವರು ಅವರೇ ಅಲ್ಲವೇ? ಅವರು ಅದನ್ನು ಬದಲಾಯಿಸಿಕೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು.  ‘ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿಲ್ಲ. ನಾವು ಪತ್ರ ವ್ಯವಹಾರವನ್ನೆಲ್ಲಾ ನಡೆಸಿದ್ದೇವೆ. ಆದರೂ ಆಯ್ಕೆ ಮಾಡದಿದ್ದರೆ ಏನು ಮಾಡುವುದು?’  ಎಂದು ಕೇಳಿದರು.

ಫೆಬ್ರುವರಿಯಿಂದ ಬಜೆಟ್ ಸಭೆ

‘ಬಜೆಟ್‌ ಸಿದ್ಧತಾ ಸಭೆಯನ್ನು ಇನ್ನೂ ಅರಂಭಿಸಿಲ್ಲ. ಹಣಕಾಸು ಇಲಾಖೆಯೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದ್ದೇನೆ. ಫೆ.2ರಿಂದ ಕಟ್ಟುನಿಟ್ಟಾಗಿ ಆರಂಭಿಸಲಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.