ಮೈಸೂರು: ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಮೃತಪಟ್ಟ ನಿವಾಸಿ ಕನಕರಾಜು ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಒಂದು ವರ್ಷ ಕಳೆದರೂ ಅವರು ನೀಡಿರುವ ಭರವಸೆ ಈಡೇರಿಲ್ಲ ಎಂದು ಅವರ ಕುಟುಂಬ ದೂರಿದೆ.
ಕನಕರಾಜು ಇಡೀ ಮನೆಗೆ ಆಧಾರಸ್ತಂಭವಾಗಿದ್ದರು. ಅವರ ನಿಧನದ ಬಳಿಕ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ₹5 ಲಕ್ಷ ಪರಿಹಾರ ಘೋಷಿಸಿದ್ದರು. ಅದನ್ನು ಅಧಿಕಾರಿಗಳು ಕೆಲ ದಿನಗಳ ನಂತರ ಹಸ್ತಾಂತರಿಸಿದ್ದರು. ‘ಭೇಟಿಯ ಸಮಯದಲ್ಲಿ ಮುಖ್ಯಮಂತ್ರಿಗಳು ನೀವು ಬಡವರಿದ್ದೀರಿ, ಆಶ್ರಯ ಯೋಜನೆಯಡಿ ಮನೆ ಕೊಡಿಸುತ್ತೇವೆ ಹಾಗೂ ಕನಕರಾಜು ಸಹೋದರನಿಗೆ ಉದ್ಯೋಗ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು’ ಎಂದು ಕನಕರಾಜು ತಾಯಿ ರತ್ನಮ್ಮ ತಿಳಿಸಿದರು.
ಮನೆಯು ಬೀಳುವ ಹಂತದಲ್ಲಿದ್ದರಿಂದ, ಕನಕರಾಜು ಮನೆ ಕಟ್ಟಲು ಸಿದ್ಧತೆ ನಡೆಸಿದ್ದರು. ಅವರ ನಿಧನದಿಂದ ಅದು ನನೆಗುದಿಗೆ ಬಿದ್ದಿತ್ತು. ವಾಸವಿದ್ದ ಮನೆಯ ಒಂದು ಭಾಗ ಕುಸಿದು, ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಅವರ ತಾಯಿ ರತ್ನಮ್ಮ ಹಾಗೂ ಅಣ್ಣ ರವಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈಚೆಗೆ ಸುರಿದ ಮಳೆಯಿಂದಾಗಿ ಮನೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿದೆ. ರವಿ ಕೂಲಿ ಕೆಲಸಕ್ಕೆ ತೆರಳಿ, ಮನೆ ನಿರ್ವಹಣೆ ಮಾಡುತ್ತಿದ್ದಾರೆ.
‘ಮನೆ ಹಾಗೂ ಉದ್ಯೋಗದ ಭರವಸೆ ಈಡೇರದೇ ಇರುವ ಬಗ್ಗೆ ವಿಚಾರಿಸಲು ಮುಖ್ಯಮಂತ್ರಿಯವರ ಮನೆ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಹಲವು ಬಾರಿ ಭೇಟಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಯಾರೂ ಸ್ಪಂದಿಸುತ್ತಿಲ್ಲ’ ಎಂದು ಕನಕರಾಜು ಸಹೋದರ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮನೆ ಕುಸಿದಿರುವುದರಿಂದ ನಾನು ಹಾಗೂ ತಾಯಿ ಬೀದಿ ಪಾಲಾಗಿದ್ದೇವೆ. ಸದ್ಯ ಗಾರೆ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯ ಹಣ ಪಾವತಿಸಲೂ ಕಷ್ಟವಾಗುತ್ತಿದೆ. ನಾನು ಐಟಿಐ ಡಿಪ್ಲೊಮಾ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳೂ ಮುಖ್ಯಮಂತ್ರಿಗಳ ಮಾತಿಗೆ ಬೆಲೆ ನೀಡಿ ಕುಟುಂಬಕ್ಕೆ ನೆರವಾಗಲಿ’ ಎಂದು ಅಲವತ್ತುಕೊಂಡರು.
ತಮ್ಮನ ಸಾವಿನ ಬಳಿಕ ತಾಯಿ ಮಾನಸಿಕವಾಗಿ ಕುಗ್ಗಿದ್ದಾರೆ. ಈಗ ಮನೆಗಾಗಿ ಸರ್ಕಾರಿ ಕಚೇರಿ ಅಲೆದಾಡುತ್ತಿರುವುದನ್ನು ಕಂಡು ಮತ್ತಷ್ಟು ಕಂಗಾಲಾಗಿದ್ದಾರೆರವಿ ಮೃತ ಕನಕರಾಜು ಸಹೋದರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.