ADVERTISEMENT

ಕಾಂಗ್ರೆಸ್‌ನ ಭಸ್ಮಾಸುರ ಸಿದ್ದರಾಮಯ್ಯ: ವಿಶ್ವನಾಥ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 13:39 IST
Last Updated 31 ಜನವರಿ 2022, 13:39 IST
ಎಚ್‌.ವಿಶ್ವನಾಥ್‌
ಎಚ್‌.ವಿಶ್ವನಾಥ್‌   

ಮೈಸೂರು: ‘ಆ ಕ್ಷೇತ್ರ, ಈ ಕ್ಷೇತ್ರ ಎನ್ನುತ್ತಿರುವ ಸಿದ್ದರಾಮಯ್ಯ ಒಬ್ಬರೇ ಗಂಡಸಾ? ಬೇರೆ ಕ್ಷೇತ್ರಗಳಲ್ಲಿ ಗಂಡಸರೇ ಇಲ್ಲವೇ? ಚಮಚಗಿರಿ ಮಾಡುವವರು ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಅಷ್ಟೆ. ಅವರಿಗೆ ಗೆಲ್ಲಿಸುವ ತಾಕತ್ತು ಇದೆಯೇ? ಯಾರಾದರೂ ದೊಡ್ಡ ನಾಯಕರು ಕರೆದಿದ್ದಾರೆಯೇ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ಕಾಂಗ್ರೆಸ್‌ ಪಾಲಿನ ಭಸ್ಮಾಸುರ. ಪಕ್ಷ ಮುಗಿಸಿಯೇ ಹೋಗುತ್ತಾರೆ’ ಎಂದರು.

‘ಸಿ.ಎಂ.ಇಬ್ರಾಹಿಂ ಇಲ್ಲದಿದ್ದರೆ ಸಿದ್ದರಾಮಯ್ಯ ಶಾಸಕರೂ ಆಗುತ್ತಿರಲಿಲ್ಲ. ಬಾದಾಮಿಯಲ್ಲಿ ಗೆಲ್ಲಲು ಸಹಾಯ ಮಾಡಿದ ಅವರನ್ನು ಸಾಯುವವರೆಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಎಸ್‌.ಆರ್‌.ಪಾಟೀಲ ಅವರಿಗೆ ಪರಿಷತ್‌ ಚುನಾವಣೆಗೆ ಟಿಕೆಟ್‌ ಕೊಡಲಿಲ್ಲ. ಸಿದ್ದರಾಮಯ್ಯ ಅವರಿಗಾಗಿ ಎಷ್ಟು ಜನರ ಮನೆ ಹಾಳಾಯಿತು? ಯಾರ ಮನೆ ಹಾಳಾದರೇನು; ಅವರು ಮಾತ್ರ ಚೆನ್ನಾಗಿದ್ದಾರೆ’‌ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕಾಂಗ್ರೆಸ್‌ನ ಮುಖ್ಯ ಮತದಾರರಾದ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಏನಾದರು? ಡಾ.ಪರಮೇಶ್ವರ, ಖರ್ಗೆ ಎಲ್ಲಿ ಹೋದರು? ಅಲ್ಪಸಂಖ್ಯಾತ ಸಮುದಾಯದ ಒಬ್ಬೊಬ್ಬರನ್ನೇ ಮುಗಿಸುತ್ತಿದ್ದೀರಿ. ರೋಷನ್‌ ಬೇಗ್‌ ಅವರನ್ನು ಈಗಾಗಲೇ ಮುಗಿಸಿದ್ದೀರಿ. ತನ್ವೀರ್‌ ಸೇಠ್‌ ಕಥೆ ಏನು? ಕುರುಬ ನಾಯಕರನ್ನು ನೀಟಾಗಿ ಮುಗಿಸಿದಿರಿ. ನನ್ನನ್ನು, ಚಿಮ್ಮನಕಟ್ಟಿ, ರೇವಣ್ಣ ಅವರನ್ನು ಮುಗಿಸಿದಿರಿ. ಸ್ವಂತ ಸಮುದಾಯದವರನ್ನೇ ರಾಜಕೀಯದಲ್ಲಿ ಬೆಳೆಯಲು ಬಿಡದ ವ್ಯಕ್ತಿ ನೀವು. ಎಲ್ಲರನ್ನೂ ಮುಗಿಸಿ ನೀವೊಬ್ಬರು ಏನೂ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ತತ್ವ ಸಿದ್ಧಾಂತವೇ ಬೇರೆ, ಸಿದ್ದರಾಮಯ್ಯ ಅವರ ತತ್ವ ಸಿದ್ಧಾಂತವೇ ಬೇರೆ. ಕೃತಜ್ಞತೆ ಇಲ್ಲದ ಜನನಾಯಕ’ ಎಂದು ಕಿಡಿಕಾರಿದರು.

‘ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದೀರಿ. 15 ಶಾಸಕರಿಗೆ ಎಷ್ಟು ಕೋಟಿ ಕೊಟ್ಟು ಖರೀದಿ ಮಾಡುತ್ತಿದ್ದೀರಿ? ನಾವು 17 ಶಾಸಕರು ಹೋದಾಗ ಏನೆಲ್ಲಾ ಮಾತನಾಡಿದಿರಿ? ರಮೇಶ್‌ ಕುಮಾರ್‌ ಕೈಲಿ ಏನೆಲ್ಲಾ ಮಾಡಿಸಿದಿರಿ. ಜನರನ್ನು ದಡ್ಡರು ಎಂದುಕೊಂಡಿದ್ದೀರಾ? ನಿಮ್ಮ ಜೊತೆ ಮಲಗಿದರೆ ಪಾವಿತ್ರ್ಯತೆ, ನಮ್ಮ ಜೊತೆ ಮಲಗಿದ್ರೆ ಪಾಪಿಗಳಾ’ ಎಂದು ಕೇಳಿದರು.

‘ಅಡುಗೆ ಅನಿಲ ಪೈಪ್‌ಲೈನ್‌ ಅಳವಡಿಕೆಗೆ ಮೈಸೂರಿನ ಬಿಜೆಪಿ ಶಾಸಕರು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಹಿಂದೆ ಗುಂಡಿ ಬಿದ್ದಿಲ್ಲವೇ? ಖಾಸಗಿ ಸಂಸ್ಥೆಯವರು ರಸ್ತೆ ಅಗೆದಿಲ್ಲವೇ? ಸ್ವಹಿತಕ್ಕಿಂತ ಜನಹಿತ ಮುಖ್ಯ. ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಇದು ಸಂಸದರ ಕಾರ್ಯಕ್ರಮ ಅಲ್ಲ; ಸರ್ಕಾರದ್ದು. ಕಿತ್ತಾಡಿ ಯೋಜನೆ ನೆಲಕಚ್ಚಿಸಬೇಡಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.