ಹುಣಸೂರು: ಹೂಳು ತುಂಬಿ ಎಲ್ಲೆಂದರಲ್ಲಿ ಬೆಳೆದ ಗಿಡಗಳು, ನೀರಿನ ಹರಿವಿಗೆ ಅಡ್ಡಲಾಗಿ ಬೆಳೆದ ಬಳ್ಳಿ ಪೊದೆಗಳು.
ಲಕ್ಷ್ಮಣತೀರ್ಥ ಅಣೆಕಟ್ಟೆಯ ಶಿರಿಯೂರು, ಹುಸೇನಪುರ ನಾಲೆಯ ಸ್ಥಿತಿಯಿದು. ಜುಲೈ ತಿಂಗಳಲ್ಲೂ ನಾಲೆಗಳನ್ನು ಸ್ವಚ್ಛಗೊಳಿಸದಿರುವುದರಿಂದ ಈ ಸ್ಥಿತಿ ತಲೆದೋರಿದೆ. ಹೂಳು ಮತ್ತು ಗಿಡಗಂಟಿ ತೆರವುಗೊಳಿಸಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಬೇಕು ಎಂಬುದು ಈ ಭಾಗದ ರೈತರ ಆಗ್ರಹವಾಗಿದೆ.
ತಾಲ್ಲೂಕಿನಲ್ಲಿ ಗಾವಡಗೆರೆ ಹೋಬಳಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ತಲಾ 16 ಕಿ.ಮಿ ಹಾದು ಹೋಗುವ ಶಿರಿಯೂರು ಮತ್ತು ಹುಸೇನ್‌ಪುರ ನಾಲೆ ಅವಲಂಬಿಸಿ 3,200 ಎಕರೆ ಪ್ರದೇಶದ ರೈತರು ಬದುಕು ಕಟ್ಟಿಕೊಂಡಿದ್ದಾರೆ.
‘ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮಳೆಗೆ ಹಲಸಂದೆ ಮತ್ತು ನೆಲಗಡಲೆ ಬೇಸಾಯ ಮುಗಿಸುವ ರೈತರು, ಜುಲೈ ಅಂತ್ಯದಲ್ಲಿ ಭೂಮಿ ಹದಗೊಳಿಸಿ ನಾಲೆ ನೀರು ನಿರೀಕ್ಷೆಯಲ್ಲಿ ಭತ್ತದ ಬೇಸಾಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವುದು ವಾಡಿಕೆ. ಕಳೆದ ಮೂರು ವರ್ಷಗಳಿಂದ ನಾಲೆ ನಿರ್ವಹಣೆ ಮಾಡದಿರುವುದರಿಂದ ರೈತರು ಭತ್ತದ ಬೇಸಾಯಕ್ಕೆ ಭೂಮಿ ಸಿದ್ಧಪಡಿಸಿಕೊಳ್ಳುವುದು ಕಷ್ಟಸಾಧ್ಯ’ ಎಂದು ಪ್ರಗತಿಪರ ರೈತ ರಾಮೇಗೌಡ ಅಳಲು ತೋಡಿಕೊಳ್ಳುತ್ತಾರೆ.
‘ಪ್ರತಿ ವರ್ಷವೂ ರೈತರು ಕಾವೇರಿ ನೀರಾವರಿ ನಿಗಮ ಮಂಡಳಿ ಅಧಿಕಾರಿಗಳಿಗೆ ವೈಜ್ಞಾನಿಕವಾಗಿ ನಿರ್ವಹಣೆ ಮಾಡುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಅನುದಾನದ ಕೊರತೆ ಎಂದು ಹೇಳಿ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ಶಿರಿಯೂರು ಗ್ರಾಮದ ರೈತ ಮಹೇಶ್ ದೂರಿದರು.
‘ಈ ಸಾಲಿನಲ್ಲಿ ನಾಲೆಗೆ ಜುಲೈ 25 ರಿಂದ ನೀರು ಬಿಡುವುದಾಗಿ ಸಣ್ಣ ನೀರಾವರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ನೀರು ಹರಿಸುವ ಮುನ್ನ ಹೂಳು ಮತ್ತು ಗಿಡಗಳನ್ನು ತೆರವುಗೊಳಿಸಿ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೂ ನೀರು ತಲುಪಿಸುವ ಕೆಲಸವಾಗಬೇಕು. ಅಲ್ಲದೇ ನೀರು ವಿತರಣಾ ನಾಲೆಗಳಲ್ಲಿ ಮೊಡಬಾಯಿಗಳಿಗೆ ಗೇಟ್ ಇಲ್ಲದೆ ರೈತರು ಕಲ್ಲು ಮತ್ತು ಗಿಡಗಂಟಿ ಭರ್ತಿ ಮಾಡಿ ನೀರು ನಿಲ್ಲಿಸುವ ಪರಿಸ್ಥಿತಿ ಇದ್ದು, ಇಲಾಖೆ ತೂಬುಗಳ ದುರಸ್ತಿಗೊಳಿಸಬೇಕು’ ಎಂದು ರೈತರ ಆಗ್ರಹಿಸಿದ್ದಾರೆ.
‘ಶಿರಿಯೂರು, ಹುಸೇನ್‌ಪುರ ನಾಲೆ ನಿರ್ವಹಣೆಗೆ ₹25 ರಿಂದ ₹30 ಲಕ್ಷ ಅನುದಾನ ಬೇಕಿದ್ದು, ಅನುದಾನ ಬಿಡುಗಡೆಯಾಗಿಲ್ಲ. 31 ಕಿ.ಮಿ. ನಾಲೆಯಲ್ಲಿ ಹೂಳು ತೆಗೆಯುವ ಕೆಲಸ ಮೂರು ದಿನದಿಂದ ಆರಂಭವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುತ್ತೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಈಶ್ವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಶಿರಿಯೂರು ಮತ್ತು ಹುಸೇನ್‌ಪುರ ನಾಲೆ ಆಧುನಿಕರಣವಾಗಬೇಕಿದೆ. ಶಿರಿಯೂರು ನಾಲೆಯಲ್ಲಿ 500 ರಿಂದ 600 ಮೀಟರ್ ಲೈನಿಂಗ್ ಕಾಮಗಾರಿ ನಡೆಸಲಾಗಿದ್ದು ಉಳಿದಂತೆ ಮಣ್ಣಿನ ನಾಲೆ, ಹೀಗಾಗಿ ತಗ್ಗು ಪ್ರದೇಶದಲ್ಲಿನ ನಾಲೆಗೆ ಮಳೆ ನೀರು ಹರಿದು ಶಿಥಿಲವಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ನಾಲೆಗಳ ಆಧುನಿಕರಣಕ್ಕೆ ಒತ್ತು ನೀಡಿದರೆ ನೀರು ನಿರ್ವಹಣೆ ಸುಲಭವಾಗಲಿದೆ’ ಎಂದು ಮುಖಂಡ ಸತ್ಯಪ್ಪ ಹೇಳಿದರು.
ನಾಲೆಗಳ ಹೂಳು ಗಿಡ ತೆರವುಗೊಳಿಸುವ ಕೆಲಸ ತ್ವರಿತವಾಗಿ ಮಾಡಬೇಕು. ಭತ್ತ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳಲು ಸಹಕಾರವಾಗಲಿದ್ದು ಜುಲೈ ಅಂತ್ಯದಲ್ಲಿ ನೀರು ಹರಿಸಬೇಕು.ಮಹೇಶ್, ಶಿರಿಯೂರು ನಾಲೆ ಅಚ್ಚುಕಟ್ಟು ಪ್ರದೇಶದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.