ADVERTISEMENT

ಕರ್ನಾಟಕ ಮುಕ್ತ ವಿದ್ಯಾಲಯಕ್ಕೆ ರಜತ ‘ಗರಿ’

ಎಂ.ಮಹೇಶ
Published 28 ಡಿಸೆಂಬರ್ 2024, 7:51 IST
Last Updated 28 ಡಿಸೆಂಬರ್ 2024, 7:51 IST
ಮೈಸೂರಿನಲ್ಲಿರುವ ಜೆಎಸ್‌ಎಸ್‌ ಕರ್ನಾಟಕ ಮುಕ್ತ ವಿದ್ಯಾಲಯದ ನೋಟ
ಮೈಸೂರಿನಲ್ಲಿರುವ ಜೆಎಸ್‌ಎಸ್‌ ಕರ್ನಾಟಕ ಮುಕ್ತ ವಿದ್ಯಾಲಯದ ನೋಟ   

ಮೈಸೂರು: ಹಲವು ಕಾರಣಗಳಿಂದ ಶಾಲಾ ಶಿಕ್ಷಣದಿಂದ ವಂಚಿತವಾದವರಿಗೆ ಶಿಕ್ಷಣ ಒದಗಿಸುವ ಪರಿಕಲ್ಪನೆಯಲ್ಲಿ ಆರಂಭವಾಗಿರುವ ಮೈಸೂರಿನ ‘ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ’ (ಕೆಒಎಸ್‌) ರಜತ ಮಹೋತ್ಸವದ ಸಂಭ್ರಮದಲ್ಲಿದೆ.

ನಗರದ ರಾಜ್‌ಕುಮಾರ್‌ ರಸ್ತೆಯ ಶಿಕ್ಷಕರ ಬಡಾವಣೆಯ ರಾಧಾಕೃಷ್ಣನ್ ನಗರದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ರಾಜ್ಯದಾದ್ಯಂತ 106 ಕಲಿಕಾ ಕೇಂದ್ರಗಳಿವೆ. ಇವುಗಳಲ್ಲಿ 95 ಸಕ್ರಿಯವಾಗಿವೆ. 34 ಮಾಹಿತಿ ಕೇಂದ್ರಗಳಿಗೆ ಅನುಮತಿ ನೀಡಲಾಗಿದೆ. ಸಾಂಪ್ರದಾಯಿಕ ಶಿಕ್ಷಣದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇರುವಂತೆ ಇಲ್ಲೂ ‘ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿ’ಗಳಿಗೂ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

1999–2000ನೇ ಸಾಲಿನಿಂದ ಈವರೆಗೆ 10ನೇ ತರಗತಿಗೆ 1,07,344 ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಲ್ಲಿ 71,417 ಮಂದಿ ಉತ್ತೀರ್ಣರಾಗಿದ್ದಾರೆ. ಸರಾಸರಿ ಶೇ 66.53ರಷ್ಟು ಫಲಿತಾಂಶ ಬಂದಿರುವುದು ವಿಶೇಷ.

ADVERTISEMENT

ಶಾಲೆ ಬಿಟ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕರ್ನಾಟಕ ಮುಕ್ತ ವಿದ್ಯಾಲಯ ನಡೆಸಲು ಜೆಎಸ್‌ಎಸ್ ಮಹಾವಿದ್ಯಾಪೀಠಕ್ಕೆ ವಹಿಸಿವೆ.

ಮೊಬೈಲ್‌ ಆ್ಯಪ್:

ರಜತ ಮಹೋತ್ಸವ ಅಂಗವಾಗಿ ಕೆಒಎಸ್ ಮೊಬೈಲ್ ಆ್ಯಪ್, ಪ್ರಶ್ನಾವಳಿ ಬ್ಯಾಂಕ್, ಮಾರ್ಗದರ್ಶಿ ಪುಸ್ತಕ, ಸಿದ್ಧಪಾಠ ಪಠ್ಯ ಬೋಧನೆ–ಸಿ.ಡಿ., ಬೆಳ್ಳಿ ಹೆಜ್ಜೆ ವಿಶೇಷ ಸಂಚಿಕೆ ಬಿಡುಗಡೆಗೆ ಯೋಜಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿಯನ್ನೂ ಆರಂಭಿಸಲಾಗುತ್ತಿದೆ.

ಇಲ್ಲಿ ದಾಖಲಾಗುವವರು ಕಲಿಕಾ ವೇಳೆ, ಸ್ಥಳ, ವಿಷಯಗಳ ಆಯ್ಕೆ, ಪರೀಕ್ಷೆ ತೆಗೆದುಕೊಳ್ಳುವ ಸಮಯ ಮೊದಲಾದ ವಿಷಯಗಳಲ್ಲಿ ಮುಕ್ತ ಸ್ವಾತಂತ್ರ್ಯ ಇರುತ್ತದೆ. ಮೂರು ವರ್ಷಗಳಲ್ಲಿ ಆರು ಬಾರಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶವಿದೆ. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(ಕೆಎಸ್‌ಇಎಬಿ)ಯು 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಅಂಕಪಟ್ಟಿಗಳನ್ನು ವಿತರಿಸುತ್ತದೆ.

ಎಸ್ಎಸ್‌ಎಲ್‌ಸಿಗೆ ತತ್ಸಮಾನ: ‘ಕರ್ನಾಟಕ ಮುಕ್ತ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನೀಡುವ ಅಂಕಪಟ್ಟಿ ಸಾಂಪ್ರದಾಯಿಕ, ರೆಗ್ಯುಲರ್ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗೆ ತತ್ಸಮಾನ ಅಥವಾ ಸಮಾನ ಎಂದು ಸರ್ಕಾರ ಆದೇಶ ಹೊರಡಿಸಿದೆ. ಇಲ್ಲಿ ಸೇರಿ ಉತ್ತೀರ್ಣರಾದವರು ಪಿಯುಸಿ, ಐಟಿಐ, ಡಿಪ್ಲೊಮಾ ಇತ್ಯಾದಿ ಕೋರ್ಸ್‌ಗಳಲ್ಲಿ ದಾಖಲಾಗಿ ಶಿಕ್ಷಣ ಮುಂದುವರಿಸಬಹುದು. ಉತ್ತೀರ್ಣರಾದವರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಪಡೆಯಲು ಅರ್ಹತೆ ಹೊಂದಿರುತ್ತಾರೆ’ ಎಂದು ವಿದ್ಯಾಲಯದ ಮುಖ್ಯಸ್ಥ ಸಿ.ಎಸ್. ಶಿವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ವರ್ಷದಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ, ಲೆಕ್ಕಶಾಸ್ತ್ರ ವಿಷಯ ಪರಿಚಯಿಸಲಿದ್ದೇವೆ. 10ನೇ ತರಗತಿಗೆ ಸೇರಲು ಕನಿಷ್ಠ 6ನೇ ತರಗತಿ ಪಾಸಾಗಿರಬೇಕು, 15 ವರ್ಷ ವಯಸ್ಸಿನವರಾಗಿರಬೇಕು. 12ನೇ ತರಗತಿಗೆ ಸೇರಲು 10ನೇ ತರಗತಿ ಪಾಸಾಗಿರಬೇಕು. 17 ವರ್ಷ ತುಂಬಿರಬೇಕು. ನೇರವಾಗಿ ದ್ವಿತೀಯ ಪಿಯುಗೆ ಸೇರಬಹುದು’ ಎಂದು ತಿಳಿಸಿದರು.

ಸಿ.ಎಸ್. ಶಿವಸ್ವಾಮಿ
ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯದಲ್ಲಿ ಕಲಿತ ಬಹಳಷ್ಟು ಮಂದಿ ಶಿಕ್ಷಕ ಉಪನ್ಯಾಸಕ ಸೇರಿದಂತೆ ಸರ್ಕಾರಿ ನೌಕರಿ ಗಿಟ್ಟಿಸಿದ್ದಾರೆ. ಉನ್ನತ ಶಿಕ್ಷಣ ಪಡೆದಿದ್ದಾರೆ. ಖಾಸಗಿ ನೌಕರಿಗೂ ಸೇರಿದ್ದಾರೆ
ಸಿ.ಎಸ್. ಶಿವಸ್ವಾಮಿ ಮುಖ್ಯಸ್ಥ ಜೆಎಸ್‌ಎಸ್ ಕರ್ನಾಟಕ ಮುಕ್ತ ವಿದ್ಯಾಲಯ

ಆಡಿಯೊ ವಿಡಿಯೊ ಪಾಠ

‘ರಜತ ಮಹೋತ್ಸವದ ನೆನಪಿನಲ್ಲಿ ಸಂಪನ್ಮೂಲ ಶಿಕ್ಷಕರುಗಳಿಂದ ತಯಾರಿಸಿದ ಆಡಿಯೊ ವಿಡಿಯೊ ಸಿದ್ಧಪಾಠಗಳನ್ನು ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಕೆಒಎಸ್ ಮೊಬೈಲ್ ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ಲಿಂಕ್ ನೀಡಿ ಅವರು ವಿರಾಮದ ಅವಧಿಯಲ್ಲಿ ಓದಿಕೊಳ್ಳಲು ಅನುವು ಮಾಡಿಕೊಡಲಾಗುವುದು. ಇಷ್ಟವಾದ ಪ್ರತಿ ವಿಷಯದಲ್ಲಿ ಕನಿಷ್ಠ 30ರಿಂದ 40 ಗಂಟೆಗಳ ಅವಧಿ ಪಠ್ಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ವಿಷಯವಾರು ಮಾರ್ಗದರ್ಶಿ ಪುಸ್ತಕ ಪ್ರಶ್ನಾವಳಿ ಬ್ಯಾಂಕ್‌ ಮಾಡಲಿದ್ದೇವೆ’ ಎಂದು ಶಿವಸ್ವಾಮಿ ಮಾಹಿತಿ ನೀಡಿದರು.

ಕೇಂದ್ರದಿಂದ ಪಠ್ಯಕ್ರಮ, ಕನ್ನಡದಲ್ಲಿ ಬೋಧನೆ

ಪಠ್ಯಕ್ರಮವು ಕೇಂದ್ರದ ರಾಷ್ಟ್ರೀಯ ಮುಕ್ತ ವಿದ್ಯಾಲಯದಿಂದ ಬರುತ್ತದೆ. ಹೊಸ ವಿಷಯ ಬಂದಾಗ ಅದನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ ಪಠ್ಯಪುಸ್ತಕ ನಿರ್ದೇಶನಾಲಯದಿಂದ ಅನುಮೋದನೆ ಪಡೆಯುವ ಕೆಲಸನವನ್ನು ವಿದ್ಯಾಲಯ ಮಾಡುತ್ತದೆ. ಇಲ್ಲಿ ಬೋಧನೆ ಹಾಗೂ ಪರೀಕ್ಷೆ ಕನ್ನಡದಲ್ಲೇ ಇರುತ್ತದೆ. ಸದ್ಯ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದು ಜ.15ರವರೆಗೆ ಅವಕಾಶವಿದೆ. ಕೊಡಗು ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಲಿಕಾ ಕೇಂದ್ರಗಳಿವೆ. ಅಲ್ಲಿ ವೈಯಕ್ತಿಕ ಸಂಪರ್ಕ ತರಗತಿಗಳನ್ನು ನಡೆಸಲಾಗುತ್ತದೆ. ಕೇಂದ್ರ ಕಚೇರಿಯಲ್ಲಿ 12 ಮಂದಿ ಸಿಬ್ಬಂದಿ ಇದ್ದಾರೆ. ಇಲ್ಲಿ 50 ಸಾವಿರದಿಂದ 60 ಸಾವಿರ ಪಠ್ಯಪುಸ್ತಕ ಮುದ್ರಿಸಿ ಕಲಿಕಾ ಕೇಂದ್ರಗಳ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ಸಂಪರ್ಕಕ್ಕೆ ದೂ.ಸಂ. 0821–2548269.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.