ADVERTISEMENT

ಮೈಸೂರು: ಪಾಸ್‌ ಉಳ್ಳವರಿಗೆ ಸರ್‌ ಚಾರ್ಜ್‌ ಮುಕ್ತಿ

ಮೈಸೂರು– ಬೆಂಗಳೂರು ನಡುವೆ ಪ್ರಯಾಣಿಸುವ ಸೂಪರ್‌ ಫಾಸ್ಟ್ ರೈಲುಗಳಿಗೆ ₹ 15 ಹೆಚ್ಚು ದರ

ನೇಸರ ಕಾಡನಕುಪ್ಪೆ
Published 31 ಆಗಸ್ಟ್ 2018, 17:43 IST
Last Updated 31 ಆಗಸ್ಟ್ 2018, 17:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರು– ಬೆಂಗಳೂರು ನಡುವೆ ಸಂಚರಿಸುವ ಸೂಪರ್ ಫಾಸ್ಟ್‌ ರೈಲುಗಳ ಮೇಲೆ ವಿಧಿಸಿದ್ದ ₹ 15 ಸರ್‌ ಚಾರ್ಜನ್ನು ತಿಂಗಳ ಪಾಸ್ ಹೊಂದಿರುವ ಪ್ರಯಾಣಿಕರಿಗೆ ರದ್ದುಪಡಿಸಲಾಗಿದೆ.

ಆ.15ರಿಂದ ವೇಗ ಹೆಚ್ಚಿಸಿಕೊಂಡಿದ್ದ ಒಟ್ಟು 8 ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲುಗಳು ಸಂಚರಿಸುತ್ತಿವೆ.

ಟಿಕೆಟ್ ತೆಗೆದುಕೊಂಡು ಪ್ರಯಾಣಿಸುವ ಪ್ರಯಾಣಿಕರು ಹೆಚ್ಚುವರಿ ₹ 15 ನೀಡಿ ಪ್ರಯಾಣಿಸಬೇಕಿದೆ. ಅಂದರೆ, ಸಾಧಾರಣ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್ ದರ ₹ 60 ಇದ್ದರೆ, ಅಧಿಕ ವೇಗಕ್ಕಾಗಿ ಒಟ್ಟು ₹ 75 ನೀಡಿ ಟಿಕೆಟ್ ಕೊಳ್ಳಬೇಕಿದೆ.

ADVERTISEMENT

ಆದರೆ, ತಿಂಗಳ ಎಕ್ಸ್‌ಪ್ರೆಸ್ ಪಾಸ್ ಹೊಂದಿರುವ ಪ್ರಯಾಣಿಕರಿಗೆ ಇದು ಅನ್ವಯಿಸುವುದಿಲ್ಲ. ರೈಲ್ವೆ ನಿಯಮಗಳ ಪ್ರಕಾರ (2006ರ ಆ. 9ರಂದು ರೈಲ್ವೆ ಮಂಡಳಿ ದೇಶದ ಎಲ್ಲ ರೈಲ್ವೆ ವಿಭಾಗಗಳ ವ್ಯವಸ್ಥಾಪಕರಿಗೆ ನೀಡಿದ್ದ ಸುತ್ತೋಲೆಯ ಪ್ರಕಾರ) 325 ಕಿಲೋಮೀಟರ್‌ ಒಳಗೆ ಪ್ರಯಾಣಿಸುವ ರೈಲುಗಳಿಗೆ ಸರ್‌ ಜಾರ್ಜ್‌ ಹಾಕುವಂತಿಲ್ಲ.

ಆದರೂ ವಿಧಿಸಲಾಗಿತ್ತು. ಮೈಸೂರು ಮತ್ತು ಬೆಂಗಳೂರು ನಡುವಿನ ಅಂತರ ಕಡಿಮೆ ಇರುವ ಕಾರಣ, ವಿಧಿಸಿರುವ ಸರ್‌ ಚಾರ್ಜನ್ನು ತೆಗೆಯಬೇಕು ಎಂದು ಪ್ರಯಾಣಿಕರು ರೈಲ್ವೆ ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್‌ ಅವರ ಬಳಿ ಮನವಿ ಮಾಡಿಕೊಂಡಿದ್ದರು.

20 ಸಾವಿರ ಮಂದಿಗೆ ನಿರಾಳ:ಪಾಸ್‌ದಾರರ ಮನವಿಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ಇದೀಗ ಸರ್‌ ಚಾರ್ಜನ್ನು ವಾಪಸು ಪಡೆದಿದೆ. ಇದರಿಂದ ಮೈಸೂರು ಭಾಗದ ಸುಮಾರು 20 ಸಾವಿರ ಪ್ರಯಾಣಿಕರಿಗೆ ನಿರಾಳವಾಗಿದೆ.

ರೈಲುಗಳಾದ ಮೈಲಾಡುತುರೈ– ಮೈಸೂರು (16231), ಮೈಸೂರು– ಮೈಲಾಡುತುರೈ (16232), ಮೈಸೂರು– ಯಶವಂತಪುರ (16023), ಯಶವಂತಪುರ– ಮೈಸೂರು (16024), ಬೆಂಗಳೂರು–ಕಣ್ಣೂರು–ಕಾರವಾರ (16517/16523), ಕಣ್ಣೂರು–ಕಾರವಾರ– ಬೆಂಗಳೂರು (16518/16524),ಮೈಸೂರು– ಸಾಯಿನಗರ ಶಿರಡಿ (16217) ಹಾಗೂ ಸಾಯಿನಗರ ಶಿರಡಿ– ಮೈಸೂರು (16218) ಸೂಪರ್‌ ಫಾಸ್ಟ್‌ ರೈಲುಗಳಲ್ಲಿ ಸಂಚರಿಸಲು ಪಾಸ್ ಇದ್ದಲ್ಲಿ ಸರ್‌ ಚಾರ್ಜ್ ನೀಡುವ ಅಗತ್ಯವಿಲ್ಲ.

ಮೈಸೂರು– ಜಯಪುರ, ಭಾಗಮತಿ ಹಾಗೂ ಚೆನ್ನೈ ಎಕ್ಸ್‌ಪ್ರೆಸ್ ರೈಲುಗಳಿಗೆ ಮಾತ್ರ ಸರ್ ಚಾರ್ಜ್‌ ನೀಡಬೇಕಾಗುತ್ತದೆ.
ಈ ರೈಲುಗಳು 325 ಕಿಲೋಮೀಟರಿಗೂ ಹೆಚ್ಚು ದೂರ ಕ್ರಮಿಸುವ ಕಾರಣ ಹೆಚ್ಚುವರಿ ಹಣ ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.