ಮೈಸೂರು: ವಿಶ್ವವಿದ್ಯಾಲಯಗಳಲ್ಲಿ ಸಾಧಕರು ಹಾಗೂ ಗಣ್ಯರ ಹೆಸರಿನ ಅಧ್ಯಯನ ಪೀಠಗಳಿರುತ್ತವೆ (ಚೇರ್) ಎಂಬುದು ಎಲ್ಲರಿಗೂ ಗೊತ್ತು. ಆದರೆ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಆತ್ಮೀಯರಾದ ಪ್ರೊ.ಪ್ರಧಾನ ಗುರುದತ್ತ ಅವರ ಮನೆಯಲ್ಲಿ ‘ಭೈರಪ್ಪ ಚೇರ್’ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಈ ಚೇರ್ ಭೈರಪ್ಪ ಅವರಿಗೆ ಮೀಸಲಾಗಿತ್ತು. ಪ್ರತಿ ಬಾರಿ ಗುರುದತ್ತ ಅವರ ಮನೆಗೆ ಬಂದಾಗ ಅವರು ಅದರಲ್ಲೇ ಕುಳಿತುಕೊಳ್ಳುತ್ತಿದ್ದರು. ಚೇರ್ ಖಾಲಿ ಇದ್ದರೂ ಬೇರೆಯವರು ಅದನ್ನು ಬಳಸುತ್ತಿರಲಿಲ್ಲ. ಭೈರಪ್ಪ ಅವರಿಗೆ ದೊರೆತಷ್ಟೇ ಗೌರವ ಆ ಚೇರ್‌ಗೂ ಇದೆ. ಇಬ್ಬರ ಆತ್ಮೀಯತೆಗೂ ಇದು ಸಾಕ್ಷಿಯಾಗಿದೆ.
ಈ ಚೇರ್‌ನಲ್ಲಿ ಕುಳಿತ ಭೈರಪ್ಪ ಅವರೊಂದಿಗೆ ಗುರುದತ್ತ ಕುಟುಂಬದವರಷ್ಟೇ ಅಲ್ಲದೆ, ಈ ಇಬ್ಬರ ವಿದ್ಯಾರ್ಥಿಗಳೂ ಅವರಿಂದ ಹಲವು ಪಾಠಗಳನ್ನು ಕೇಳಿದ್ದಾರೆ. ಚರ್ಚೆಗಳಿಗೆ ಸಾಕ್ಷಿಯಾಗಿದ್ದಾರೆ.
‘ಭೈರಪ್ಪ ಅವರ ಚೇರ್ ನೋಡಲೆಂದೇ ನಾವು ಗುರುದತ್ತರ ಮನೆಗೆ ಹೋಗುತ್ತಿದ್ದೆವು. ಭೈರಪ್ಪನವರೂ ಇದ್ದಾಗ ಅಲ್ಲಿಗೆ ಹೋಗುವುದು ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವದ ಭೇಟಿಯಾಗಿರುತ್ತಿತ್ತು’ ಎಂದು ಸ್ಮರಿಸುತ್ತಾರೆ, ಭೈರಪ್ಪನವರ ಕೃತಿಗಳ ಕುರಿತು ಸಂಶೋಧನೆ ಮಾಡಿರುವ ಮೈಸೂರಿನ ಲೇಖಕಿ ಕೆ.ಮಾಲತಿ.
ಅದಷ್ಟೇ ಅಲ್ಲ, ಕುವೆಂಪು ನಗರದಲ್ಲೇ ಮನೆ ಹೊಂದಿದ್ದ ಈ ಇಬ್ಬರೂ ನಿತ್ಯವೂ ಸಮೀಪದ ಲವ–ಕುಶ ಉದ್ಯಾನಕ್ಕೆ ತಪ್ಪದೇ ವಾಕಿಂಗ್ ಹೋಗುತ್ತಿದ್ದರು. ಈ ಇಬ್ಬರನ್ನು ‘ಲವ ಕುಶ’ ಎಂದೇ ಕರೆಯುತ್ತಿದ್ದ ಅಲ್ಲಿನ ನಿವಾಸಿಗಳು, ಅದನ್ನು ನೋಡಲೆಂದೇ ಕಿಟಕಿ, ಬಾಗಿಲುಗಳ ಬಳಿ ನಿಲ್ಲುತ್ತಿದ್ದರು. ಅಂಥ ಸನ್ನಿವೇಶಗಳಿಗೆ ನಾನು ಸಾಕ್ಷಿಯಾಗಿದ್ದೆ’ ಎನ್ನುತ್ತಾರೆ ಮಾಲತಿ.
‘ಅತಿ ಸಾಧಾರಣ ದಿರಿಸಿನಲ್ಲಿ ವಾಕಿಂಗ್ ಬರುತ್ತಿದ್ದ ಭೈರಪ್ಪ, ಕೆಲವೊಮ್ಮೆ ದೇಹಕ್ಕೆ ಉಷ್ಣ ಹೆಚ್ಚಾದ ಸನ್ನಿವೇಶಗಳಲ್ಲಿ ತಲೆಗೆ ರಾಗಿ ಹಿಟ್ಟಿನ ಪೇಸ್ಟ್ ಹಚ್ಚಿಕೊಂಡೂ ಬರುತ್ತಿದ್ದರು. ನಿವಾಸಿಗಳಿಗೆ ಅವರು ಕುತೂಹಲದ ಹಾಗೆಯೇ ಅಭಿಮಾನದ ವ್ಯಕ್ತಿಯಾಗಿದ್ದರು’ ಎಂದು ಸ್ಮರಿಸಿದರು.
‘ಯೋಧನಂತಿರಲು ಬಯಸಿದ್ದ ಭೈರಪ್ಪ’
‘ನಾನು ನೂರು ವರ್ಷ ಬದುಕಬೇಕು. ಅದಕ್ಕಾಗಿ ವೈದ್ಯರಾಗಿ ನೀವು ಔಷಧಿ ಕೊಡಬೇಕು. ವರ್ಷಕ್ಕೊಮ್ಮೆ ನೀವು ಬೆಳೆಸಿದ ಮಾವಿನ ಹಣ್ಣನ್ನು ತಂದುಕೊಡಬೇಕು’ –ಇದು ನಮ್ಮಿಬ್ಬರ ನಡುವೆ ಆಗಿದ್ದ ಒಪ್ಪಂದ. ಆದರೆ ಅವರ ಸಾವಿನಿಂದ ಈ ಒಪ್ಪಂದ ಮುರಿದು ಬಿದ್ದಿದೆ. ಸದಾ ಯೋಧನ ಫಿಟ್‌ನೆಟ್ ಹೊಂದಿರಲು ಬಯಸುತ್ತಿದ್ದ ಅವರು ಸುಮಾರು 25 ವರ್ಷ ನನ್ನಿಂದಲೇ ಚಿಕಿತ್ಸೆ ಪಡೆದಿದ್ದಾರೆ. ಕೊನೆಗಾಲದಲ್ಲಿ ಅದು ಆಗಲಿಲ್ಲ’ ಎಂದು ಮೈಸೂರಿನ ಮಧುಮೇಹ ತಜ್ಞ ಡಾ.ವಿ.ಲಕ್ಷ್ಮಿನಾರಾಯಣ ಮೌನಕ್ಕೆ ಜಾರಿದರು. ‘ಯಾವುದೇ ಪ್ರವಾಸಕ್ಕೆ ತೆರಳುವ ಮುನ್ನ ಬಂದು ‘ನನ್ನನ್ನು ಯೋಧನಂತೆ ಸಜ್ಜುಗೊಳಿಸಿ’ ಎಂದೇ ಹೇಳುತ್ತಿದ್ದರು. ಪ್ರತಿ ನಿತ್ಯ ಎಷ್ಟು ಸಾಧ್ಯವೋ ಅಷ್ಟು ನಡಿಗೆ ಮಾಡುತ್ತಿದ್ದರು. ತಮ್ಮ ಕೃತಿಗಳನ್ನು ತಂದು ಕೊಡುತ್ತಿದ್ದ ಅವರು ಸಾಹಿತ್ಯದ ಓದಿನಿಂದ ವೈದ್ಯರ ತಿಳಿವಳಿಕೆ ವಿಸ್ತಾರಗೊಳ್ಳುತ್ತದೆ ಎನ್ನುತ್ತಿದ್ದರು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.