ಭೈರಪ್ಪ
ಓದುಗ ಬಳಗಕ್ಕೆ ತುಂಬಲಾರದ ನಷ್ಟ. ಭಾರತ ದರ್ಶನ, ಪ್ರಾಚೀನ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದ್ದುದು ಅವರ ಚಿಂತನೆಯಲ್ಲಿ, ಕೃತಿಗಳಲ್ಲಿ ಪ್ರತಿಧ್ವನಿಸಿವೆ. ಹಾಗಾಗಿಯೇ ಅವರ ಕೃತಿಗಳು ಸಂಸ್ಕೃತವೂ ಸೇರಿದಂತೆ ಅನೇಕ ದೇಶೀಯ ಭಾಷೆಗಳಿಗೆ ಅನುವಾದವಾಗಿದ್ದು, ಅಪಾರ ಜನಪ್ರಿಯತೆ ಗಳಿಸಿವೆ
ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ
ಭೈರಪ್ಪನವರು 13ನೇ ವಯಸ್ಸಿಗೇ ಗಾಂಧೀಜಿ ಆದರ್ಶಗಳಿಂದ ಆಕರ್ಷಿತರಾಗಿ ಸ್ವಾತಂತ್ರ್ಯ
ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರು. ಹುಟ್ಟೂರಾದ ಸಂತೇಶಿವರದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಕಾರ್ಯಗಳಿಗೆ ನೆರವು ನೀಡಲು ಎಸ್.ಎಲ್.ಭೈರಪ್ಪ ಪ್ರತಿಷ್ಠಾನ ಸ್ಥಾಪಿಸಿದ್ದರು.
ಹುಟ್ಟೂರಿಗೆ ಕುಡಿಯುವ ನೀರಿನ ಕಾಯಂ ಯೋಜನೆ ಕಾರ್ಯಗತಗೊಳಿಸಿದ್ದರು. ಅವರ ಅಗಲುವಿಕೆ ತುಂಬಲಾರದ ನಷ್ಟ
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಠ
ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಮೈಸೂರಿನ ಮುಕುಟಮಣಿಯಾಗಿದ್ದರು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಕಾದಂಬರಿಗಳು ಇಂದಿಗೂ ಜನಮಾನಸದಲ್ಲಿ ಹಸಿರಾಗಿವೆ. ನಿಧನದಿಂದ ತೀವ್ರ ದುಃಖವಾಗಿದೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ
ಕನ್ನಡ ಸಾರಸ್ವತ ಲೋಕದ ಸುದೀರ್ಘ ಸೇವೆ ಮಾಡಿದ್ದಾರೆ. ಪ್ರಚಾರವಿಲ್ಲದ ಕಾಲದಲ್ಲಿಯೇ ಅವರು ಹೆಚ್ಚು ಪ್ರಸ್ತುತ ರಾಗಿದ್ದರು. ಎಲ್ಲ ವಯಸ್ಸಿನವರ ತಲ್ಲಣಗಳನ್ನು ಸಮರ್ಥವಾಗಿ ಕನ್ನಡ ಆಡುಭಾಷೆಯಲ್ಲಿ ಹಿಡಿದಿಟ್ಟರು. ಒಂದು ತಲೆಮಾರಿನ ಚಿಂತನೆಯನ್ನು ಪ್ರಭಾವಿಸಿದರು. ಪ್ರವಾಸ ಮಾಡಿ ಕಾದಂಬರಿ ಬರೆದರು. ಬರವಣಿಗೆಯ ಪರ್ವ ಅಸ್ತಂಗತವಾಗಿದೆ
ಅಡಗೂರು ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ
ಭೈರಪ್ಪ ಅವರ ಕೃತಿಗಳು ಕನ್ನಡ ಗಡಿಯನ್ನು ದಾಟಿ ಗುಜರಾತಿ, ಹಿಂದಿ, ಸಂಸ್ಕೃತ, ಮಲಯಾಳಂ, ತಮಿಳು, ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಿಗೂ ಅನುವಾದಗೊಂಡಿವೆ. 20ಕ್ಕೂ ಹೆಚ್ಚು ಮಹತ್ವಪೂರ್ಣ ಕಾದಂಬರಿ ಬರೆದಿದ್ದಾರೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೇ, ನಾಯಿನೆರಳು , ಮತದಾನ ಕೃತಿಗಳು ಚಲನಚಿತ್ರಗಳಾದಾಗ ನೋಡಿದ್ದೆ. ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ
ಜಿ.ಟಿ. ದೇವೇಗೌಡ, ಶಾಸಕ
ವಿದ್ಯಾರ್ಥಿಯಾಗಿದ್ದ ದಿನದಿಂದಲೂ ಸಾಹಿತಿ ಎಸ್.ಎಲ್.ಭೈರಪ್ಪನವರ ಕುವೆಂಪು ನಗರದ ಮನೆಯನ್ನು ಬಹಳ ಜನರು ಕುತೂಹಲದಿಂದ ಗಮನಿಸಿ ಹೋಗುತ್ತಿದ್ದನ್ನು ನೋಡಿರುವೆ. ಅವರ ಮೇಲೆ ಮೈಸೂರಿಗರಲ್ಲಿ ಅಪಾರ ಗೌರವ. ಅವರ ಅಭಿಪ್ರಾಯಗಳಿಗೆ ವಿರೋಧ ವ್ಯಕ್ತಪಡಿಸಿರಬಹುದು. ಆದರೆ, ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ
ಎಚ್.ಎ.ವೆಂಕಟೇಶ್, ಕೆಪಿಸಿಸಿ ವಕ್ತಾರ
ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು ಮೂಡಿಸಿದವರು. ಅಸಂಖ್ಯಾತ ಓದುಗರನ್ನು ಸೃಷ್ಟಿಸಿಕೊಂಡ ಅತ್ಯಪರೂಪದ ಕಾದಂಬರಿಕಾರ. ರಾಷ್ಟ್ರ ಬದ್ಧತೆ ಮತ್ತು ಕನ್ನಡ ಬದ್ಧತೆ ಅವರ ಎರಡು ಕಣ್ಣುಗಳಾಗಿದ್ದವು. ಶತಾಯುಷಿಗಳಾಗಬೇಕಿತ್ತು. ಕನ್ನಡಿಗರಿಗೆ ಕೊಟ್ಟು ಹೋದ ಕಾದಂಬರಿಗಳು ಧ್ರುವತಾರೆಯಂತೆ ಸದಾ ಮಿಂಚುತ್ತಲೇ ಇರುತ್ತವೆ
ರಘು ಕೌಟಿಲ್ಯ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ
ದೇಶದ ಕಾದಂಬರಿ ಲೋಕಕ್ಕೆ ಎಸ್.ಎಲ್.ಭೈರಪ್ಪ ನೀಡಿದ ದೈತ್ಯ ಕೊಡುಗೆಯನ್ನು ಕರ್ನಾಟಕ ಮರೆಯಲು ಸಾಧ್ಯವಿಲ್ಲ. ಬರವಣಿಗೆ ಮೂಲಕನೇ ಸಮಾಜ ಸುಧಾರಣೆ ಯತ್ನಿಸಿದರು. ಕೆಲವು ಲೇಖನಗಳು, ಕಾದಂಬರಿಗಳು ವಿವಾದಕ್ಕೆ ಎಡೆಯಾದವು. ರಾಜಕಾರಣ ಲೇಪನ ಕೂಡ ಅಂಟಿಕೊಂಡಿತ್ತು. ಆದರವರು ಮೇರು ಬರಹಗಾರ.
ಬಿ.ಜೆ.ವಿಜಯ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ನಿಷ್ಠುರವಾದ ವ್ಯಕ್ತಿತ್ವವದು. ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಆರೋಗ್ಯವನ್ನು ವ್ಯಾಯಾಮ, ಯೋಗ, ಆಹಾರಗಳಿಂದ ಕಾಪಾಡಿಕೊಂಡಿದ್ದರು. ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಚ್ಚೆ ಪಡುತ್ತಿರಲಿಲ್ಲ. ಆದರೂ, ಕದಂಬ ರಂಗವೇದಿಕೆಯ ಎರಡು ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬಂದಿದ್ದರು. ನಾಟಕಗಳೇನು ಮಾಡಿದ್ದಿರಿ ಎಂದು ವಿಚಾರಿಸುತ್ತಿದ್ದರು.
ರಾಜಶೇಖರ ಕದಂಬ, ರಂಗಕರ್ಮಿ
ನೆಲಮೂಲ ಸಾಹಿತ್ಯದ ಸಿರಿವಂತಿಕೆ ಸಂಶೋಧಿಸಿದ್ದರು. ಭಾರತೀಯ
ಪರಂಪರೆ, ನಾಗರಿಕ ಸಂವಿಧಾನ, ಸಂಸ್ಕೃತದ ಜಾಗತಿಕ ಮಹತ್ವ, ಸೃಜನಶೀಲ ರಾಜಕಾರಣದ ಅಡಿಗಲ್ಲುಗಳು, ಮತಾಂಧತೆಯ ಬೇರುಗಳ ಬಗ್ಗೆ ಸಂಶೋಧನೆ ಕೈಗೊಂಡು ಭಾರತದ ಸಾಹಿತ್ಯ ಕ್ಷೇತ್ರಕ್ಕೆ ಭಿನ್ನ ಮಜಲುಗಳನ್ನು ಕಾದಂಬರಿಗಳ ಮೂಲಕ ನೀಡಿದ್ದರು. ರಾಷ್ಟ್ರಪೂರಕ ಚಿಂತನೆಗಳುಳ್ಳ ಸಾಹಿತ್ಯ ಲೋಕಕ್ಕೆ ನಾವಿಕನ ಅಲಭ್ಯತೆ ಹತ್ತಾರು ವರ್ಷಗಳು ಕಾಡಲಿದೆ. ಅವರು ಈ ನೆಲದ ಕರುಳು ಬಳ್ಳಿಯ ಲೇಖಕ
ಸುಧಾಕರ ಹೊಸಳ್ಳಿ, ಲೇಖಕ
‘ವಂಶವೃಕ್ಷ’, ‘ತಬ್ಬಲಿ ನೀನಾದೆ ಮಗನೆ’, ‘ಸಾರ್ಥ’ ಕೃತಿಗಳನ್ನು ಹವ್ಯಕ ಕನ್ನಡ ಹಾಗೂ
‘ಸಾರ್ಥು’, ಧರ್ಮಶ್ರೀ, ‘ಆವರಣ’ವನ್ನು ಸಂಕೇತಿ ಕನ್ನಡದಲ್ಲಿ ಕೃತಿಗಳನ್ನು ಪ್ರಕಟಿಸಿದ್ದೆ. ಭೈರಪ್ಪನವರ ಸಾಹಿತ್ಯ ಓದಿದ 85 ಮಂದಿಯ ಲೇಖನಗಳನ್ನು ಕೃತಿಯಾಗಿ ಪ್ರಕಟಿಸಿದ್ದೆ. ಅನಾಥಾಲಯದಲ್ಲಿ ಓದಿದವ. ಹಿರಿಯ ವಿದ್ಯಾರ್ಥಿಯಾದ ಅವರನ್ನು ಸನ್ಮಾನಿಸಿದ್ದೆ. ಸಜ್ಜನಿಕೆ, ನಿರ್ಲಿಪ್ತತೆ ಇತ್ತು. ಬರೆದಂತೆ ಬದುಕಿದ ವ್ಯಕ್ತಿತ್ವವದು.
‘ಸಂಸ್ಕೃತಿ’ ಸುಬ್ರಹ್ಮಣ್ಯ, ಪ್ರಕಾಶಕ
‘ಪರ್ವ’ ಪ್ರಯೋಗಕ್ಕೆ ಖುಷಿ ಪಟ್ಟಿದ್ದರು’
‘ರಂಗಾಯಣಕ್ಕೆ ಬಿ.ವಿ.ಕಾರಂತರು ಇದ್ದಾಗ ಬಂದಿದ್ದ ಎಸ್.ಎಲ್.ಭೈರಪ್ಪ ಅವರು 32 ವರ್ಷದ ನಂತರ ಅವರದೇ ಕಾದಂಬರಿ ‘ಪರ್ವ’ ಮಹಾ ರಂಗ ಪ್ರಯೋಗ ಕಂಡಾಗ ನೋಡಿ ಬೆನ್ನು ತಟ್ಟಿದ್ದರು’ ಎಂದು ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸ್ಮರಿಸಿದರು.
‘ಎಡಪಂಥೀಯ ಹೃದಯ ಶೂನ್ಯ ನಿರ್ದೇಶಕರು ರಂಗಾಯಣದಿಂದ ಅವರನ್ನು ದೂರವಿಟ್ಟಿದ್ದರು. ನನ್ನ ಅವಧಿಯಲ್ಲಿ ‘ಕುಸುಮಬಾಲೆ’ ನಾಟಕ ಮಾಡಿಸಿದ್ದೆ, ಪರ್ವವನ್ನೂ ಪ್ರಯೋಗವಾಗಿಸಿದ್ದೆ. ರಂಗಾಯಣ ಎಲ್ಲರ ತಾಣವಾಗಿಸಿದ್ದೆ’ ಎಂದರು.
‘ಪ್ರಕಾಶ್ ಬೆಳವಾಡಿ ನಿರ್ದೇಶನದಲ್ಲಿ 62 ಪ್ರದರ್ಶನವನ್ನು ಪರ್ವ ಕಂಡಿದೆ. 2020ರಲ್ಲಿ ರಾಜ್ಯ ಸರ್ಕಾರವೇ ಈ 9 ಗಂಟೆಗಳ ನಾಟಕಕ್ಕೆ ₹ 1 ಕೋಟಿ ಅನುದಾನ ನೀಡಿತ್ತು. ನಾಲ್ಕೈದು ಬಾರಿ ರಂಗಾಯಣಕ್ಕೆ ಬಂದಿದ್ದ ಅವರು, ಕೃತಿಕಾರರಾಗಲ್ಲದೇ ನಾಟಕ ನೋಡಿ ಮೆಚ್ಚಿಕೊಂಡಿದ್ದರು. ನೇರ, ನಿಷ್ಠುರವಾಗಿ ವಿಮರ್ಶಿಸಿದ್ದರು. ಪ್ರತಿ ಪಾತ್ರಧಾರಿಯನ್ನೂ ಕರೆದು ಮಾತನಾಡಿಸಿದ್ದರು’ ಎಂದರು.
‘ನನ್ನ ‘ಟಿಪ್ಪು ನಿಜಕನಸುಗಳು’, ‘ಕರಿನೀರ ವೀರ’ ನಾಟಕ ಕೃತಿಗಳಿಗೆ ಮುನ್ನುಡಿ ಬರೆದಿದ್ದರು. ತಂದೆಯಂತೆ ವಾತ್ಸಲ್ಯ ತೋರಿದ್ದರು. ವ್ಯಕ್ತಿತ್ವ ಮತ್ತು ಬರಹ ಒಂದೇ ಆಗಿತ್ತು. ತಮ್ಮ ಚಾರಿತ್ರಿಕ ನೋವುಗಳನ್ನು ಹೇಳಿಕೊಂಡಿದ್ದರು’ ಎಂದು ಭಾವುಕರಾದರು.
‘ಸಂಘಕ್ಕೆ ಕೊಡುಗೆ ಅಪಾರ’
‘ನಾರಾಯಣ ಶಾಸ್ತ್ರೀ ರಸ್ತೆಯ ಹೊಯ್ಸಳ ಕರ್ನಾಟಕ ಸಂಘಕ್ಕೆ ಶತಮಾನದ ಇತಿಹಾಸವಿದೆ. ಎಸ್.ಎಲ್.ಭೈರಪ್ಪ ಪ್ರೌಢಶಾಲೆ ಹಾಗೂ ಪದವಿ ಓದುವಾಗ ಸಂಘದ ವಿದ್ಯಾರ್ಥಿ ನಿಲಯದಲ್ಲಿದ್ದರು. ಸಮುದಾಯದವರೊಬ್ಬರು ವಿಶ್ವ ಪ್ರಸಿದ್ಧಿ ಪಡೆದದ್ದು, ಇಲ್ಲಿದ್ದುಕೊಂಡು ಶಿಕ್ಷಣ ಪಡೆದದ್ದು ಸಂಘದ ಹೆಮ್ಮೆ’ ಎಂದು ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ ಹೇಳಿದರು.
‘ಸಂಘದ ಬೆಳವಣಿಗೆಗೆ ಶ್ರಮಿಸಿದ ಅವರು, ಧರ್ಮದರ್ಶಿಯಾಗಿ ಮಾರ್ಗದರ್ಶನವನ್ನೂ ನೀಡುತ್ತಿದ್ದರು. ಪ್ರೀತಿಯ ಹಳೆಯ ವಿದ್ಯಾರ್ಥಿಯಾಗಿ, ಮಕ್ಕಳ ಶಿಕ್ಷಣಕ್ಕೆ ನೆರವದರು. ಅವರನ್ನು ನೆನೆಯದ ದಿನವಿಲ್ಲ. ಅವರ ಸಾಹಿತ್ಯ ಎಂದಿಗೂ ಜೀವಂತ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.