ಮೈಸೂರು: ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಬಂದಿದ್ದ ಲೇಖಕರು, ಓದುಗರು, ಸಾಹಿತ್ಯಾಸಕ್ತರು, ಕಲಾವಿದರು ಕಣ್ಣಾಲಿಗಳನ್ನು ತುಂಬಿಕೊಂಡರು.
ಜನಪ್ರತಿನಿಧಿಗಳು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು, ನಾಗರಿಕರು ಅವರ ಕೊಡುಗೆಗಳನ್ನು ಸ್ಮರಿಸಿದರು.
ಗೌರವ ಸಲ್ಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಭೈರಪ್ಪ ಅವರ ಕಾದಂಬರಿಗಳು ಓದುವ ದಿಕ್ಕನ್ನೇ ಬದಲಾಯಿಸಿದವು. ಸಮಾಜದ ನೈಜ ಸಂಗತಿಗಳನ್ನು ಕೂತು ಬರೆಯದೇ ಪ್ರವಾಸ ಮಾಡಿ ದಾಖಲಿಸಿದರು. ಬಡತನದಿಂದ ಬಂದವರು. ಅನುಭವದ ಆಳವಾದ ಚಿಂತನೆಗಳಿಂದ ಸಮಾಜವನ್ನು ಎಚ್ಚರಿಸಿ ಓದುಗರನ್ನು ಸೃಷ್ಟಿಸಿದರು. ಬಾನುಮುಷ್ತಾಕ್ ಅವರನ್ನು ಸೋದರಿ ಎಂದು ಕಾದಂಬರಿಯಲ್ಲಿ ಉಲ್ಲೇಖಿಸಿದ್ದರು. ಉದಾತ್ತ ಧ್ಯೇಯಗಳನ್ನು ಬಿಟ್ಟು ಅವರು ಹೋಗಿದ್ದಾರೆ. ರಾಜಿ ಮಾಡಿಕೊಂಡು ಬರೆಯದ ರಾಷ್ಟ್ರವಾದಿ ಲೇಖಕ ಅವರಾಗಿದ್ದರು’ ಎಂದರು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ‘ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರ ಊರಿನಲ್ಲಿ ಭೈರವೇಶ್ವರ ದೇಗುಲವಿತ್ತು. ಅವರ ತಾಯಿ ಪೂಜಿಸುತ್ತಿದ್ದರೆಂದು, ದೇವರ ಹೆಸರನ್ನೇ ನನಗಿಟ್ಟಿದ್ದರು ಎಂದು ಹೇಳಿಕೊಂಡಿದ್ದರು. ಅವರಿಗೆ ಆದಿಚುಂಚನಗಿರಿ ಮಠದಿಂದ ಚುಂಚಶ್ರೀ ಪ್ರಶಸ್ತಿ ನೀಡಲಾಗಿತ್ತು. ಕನ್ನಡಮ್ಮನ ಕೀರ್ತಿ ಬೆಳೆಸಿದರು’ ಎಂದು ಹೇಳಿದರು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ತಮ್ಮನ್ನು ಒಳಗೊಂಡಂತೆ ಸತ್ಯ ಹುಡುಕುತ್ತಿದ್ದ ಅವರ ಆತ್ಮ ವಿಮರ್ಶೆಯ ಧೈರ್ಯ ಅಪರೂಪ. ಎಷ್ಟೇ ಮೇಲೆ ಹೋದರೂ ಊರ ಬೇರುಗಳನ್ನು ಬಿಟ್ಟಿರಲಿಲ್ಲ. ನಿವೇಶನ ಕೇಳಬಹುದಿತ್ತು. ಆದರವರು ನಮ್ಮ ಊರಿನ ಕೆರೆಗೆ ನೀರು ಕೊಡು ಎಂದರು. ನೀನೇ ಉದ್ಘಾಟನೆ ಮಾಡಬೇಕು ಎಂದಿದ್ದರು. ಅವರ ಹೆಸರಿನ ಟ್ರಸ್ಟ್ ಅನ್ನೂ ನನ್ನ ಕಡೆಯಿಂದಲೇ ಉದ್ಘಾಟಿಸಿದ್ದರು’ ಎಂದು ನೆನೆದರು.
ಅಗತ್ಯ ಭದ್ರತೆ: ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್ ಕುಮಾರ್ ನೇತೃತ್ವದಲ್ಲಿ 80 ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ವಿಧಾನಪರಿಷತ್ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, ಕೆ.ಶಿವಕುಮಾರ್, ಶಾಸಕ ಟಿ.ಎಸ್.ಶ್ರೀವತ್ಸ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿ ಬಿಂದುಮಣಿ, ರಾಮಕೃಷ್ಣ ಆಶ್ರಮದ ಯುಕ್ತೇಶಾನಂದ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಶಿವಕುಮಾರ್, ರಂಗಕರ್ಮಿಗಳಾದ ರಾಜಶೇಖರ ಕದಂಬ, ಎಚ್.ಜನಾರ್ಧನ, ವಿಶ್ರಾಂತ ಕುಲಪತಿ ಪದ್ಮಾ ಶೇಖರ್, ಮಾಜಿ ಮೇಯರ್ ಶಿವಕುಮಾರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಶುಭಾ ಸಂಜಯ್ ಅರಸ್, ರಘುರಾಮ್ ವಾಜಪೇಯಿ, ಭೈರಪ್ಪ ಪ್ರತಿಷ್ಠಾನದ ಅಧ್ಯಕ್ಷ ಶೇಖರ್ ಪಾಲ್ಗೊಂಡಿದ್ದರು.
‘ಕಾದಂಬರಿ ಪ್ರಕಾರಕ್ಕೆ ಗಾಂಭೀರ್ಯ’
‘ಭೈರಪ್ಪ ಕಾದಂಬರಿಯಲ್ಲಿ ಸಾಹಿತ್ಯ ಕೃಷಿ ಮಾಡಿದ ನಂತರವೇ ಆ ಪ್ರಕಾರಕ್ಕೆ ಗಾಂಭೀರ್ಯ ಬಂತು. ಅದುವರೆಗೂ ರಂಜನೆಯ ಮಾಧ್ಯಮವಾಗಿತ್ತು. ಸಂದೇಶ ತತ್ವ ಅದಕ್ಕೆ ತಂದುಕೊಟ್ಟರು. ಪ್ರಾಮಾಣಿಕರಾಗಿ ಶುದ್ಧರಾಗಿ ದಿಟ್ಟವಾಗಿ ಬದುಕಿದರು. ಗೌರವಧನವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಸಿದರು’ ಎಂದು ವಿದ್ವಾಂಸ ಪ್ರೊ.ಟಿ.ವಿ.ವೆಂಕಟಾಚಲಶಾಸ್ತ್ರಿ ಸ್ಮರಿಸಿದರು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ‘ಆಧುನಿಕ ಕನ್ನಡ ಸಾಹಿತ್ಯದ ವಿದ್ವತ್ ಪ್ರಭೆ ಪ್ರತಿಭಾ ಕೋಶ ನಂದಿ ಹೋಗಿದೆ. ನಮ್ಮ ಸಂವೇದನೆ ತಿದ್ದಿದರು. ಗದ್ಯಕಲೆಯ ಸಾಧ್ಯತೆ ತೋರಿದವರು. ಅವರಿಂದ ನಮ್ಮ ಮನಸ್ಸು ಪ್ರಬುದ್ಧವಾಗಿದೆ. ಪರ್ವ ಬರೆಯಲು 20 ವರ್ಷ ಕೆಲಸ ಮಾಡಿದ್ದರು. ಯಾವುದೇ ಕಾದಂಬರಿ ಓದಿದರೂ ಅವರ ಸಂಶೋಧಕ ವಿಶ್ಲೇಷಣೆ ಮನಸ್ಸು ಕೆಲಸ ಮಾಡಿದೆ. ನನ್ನ ಭಾವಕೋಶವನ್ನು ಶ್ರೀಮಂತಗೊಳಿಸಿದರು. ವಿಶ್ವದ ತುಂಬಾ ಕನ್ನಡವನ್ನು ಓದಿಸಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.