ADVERTISEMENT

ಮೈಸೂರಿನ ವಿವಿಸಿಇ: ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ 8ರಿಂದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:44 IST
Last Updated 3 ಡಿಸೆಂಬರ್ 2025, 7:44 IST

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ಕ್ಕೆ ಸಂಯೋಜಿತವಾಗಿರುವ ಸ್ವಾಯತ್ತ ಸಂಸ್ಥೆಯಾದ ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್’ (ಎಸ್‌ಐಎಚ್‌–2025)ಗಾಗಿ ನೋಡಲ್ ಕೇಂದ್ರವಾಗಿ ಆಯ್ಕೆಯಾಗಿದೆ.

ಈ ಕಾರ್ಯಕ್ರಮವು ಡಿ.8 ಮತ್ತು 9ರಂದು ವಿವಿಸಿಇ ಕ್ಯಾಂಪಸ್‌ನಲ್ಲಿರುವ ಎಚ್. ಕೆಂಪೇಗೌಡ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ.

ಯುವಜನರಲ್ಲಿ ಸೃಜನಶೀಲತೆ, ಸಮಸ್ಯೆ-ಪರಿಹಾರ ಮತ್ತು ಉದ್ಯಮಶೀಲತೆಯ ಚಿಂತನೆಯನ್ನು ಪ್ರೋತ್ಸಾಹಿಸುವ ಈ ಕಾರ್ಯಕ್ರಮವು 8ರಂದು ಬೆಳಿಗ್ಗೆ 8.30ಕ್ಕೆ ಉದ್ಘಾಟನೆಗೊಳ್ಳಲಿದೆ. ಅಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಮೂಲಕ ದೇಶದಾದ್ಯಂತ ಯುವ ಸಂಶೋಧಕರನ್ನು ಉದ್ದೇಶಿಸಿ ಮಾತನಾಡುವರು.

ಕೇಂದ್ರ ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್ (ಎಂಐಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ಐ4ಸಿ (ಇಂಟರ್-ಇನ್‌ಸ್ಟಿಟ್ಯೂಷನಲ್ ಇನ್‌ಕ್ಲೂಸಿವ್ ಇನ್ನೋವೇಶನ್ಸ್ ಸೆಂಟರ್) ಜಂಟಿಯಾಗಿ ಆಯೋಜಿಸುತ್ತಿವೆ. ವಿವಿಸಿಇ ಈ ಸಾಲಿನ ಸಾಫ್ಟ್‌ವೇರ್ ಆವೃತ್ತಿಗೆ ಕರ್ನಾಟಕದಿಂದ ಆಯ್ಕೆಯಾದ ಐದು ನೋಡಲ್ ಕೇಂದ್ರಗಳಲ್ಲಿ ಒಂದಾಗಿದೆ. ಇದು ಮೈಸೂರು ಪ್ರದೇಶವನ್ನು ಪ್ರತಿನಿಧಿಸುತ್ತದೆ.

2023 ಮತ್ತು 2024ರಲ್ಲಿ ಯಶಸ್ವಿಯಾಗಿ ಆಯೋಜಿಸಿದ ಕಾರಣ, ವಿವಿಸಿಇಗೆ ಮತ್ತೊಮ್ಮೆ ಜವಾಬ್ದಾರಿ ವಹಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ 60 ನೋಡಲ್ ಕೇಂದ್ರಗಳಲ್ಲಿ ನಡೆಸಲಾಗುವುದು. ಇದರಲ್ಲಿ 42 ಸಾಫ್ಟ್‌ವೇರ್ ಆವೃತ್ತಿ ಕೇಂದ್ರಗಳು ಮತ್ತು 18 ಹಾರ್ಡ್‌ವೇರ್ ಆವೃತ್ತಿ ಕೇಂದ್ರಗಳು ಸೇರಿವೆ.

ವಿವಿಸಿಇ ನೋಡಲ್ ಕೇಂದ್ರದಲ್ಲಿ ದೇಶದ ವಿವಿಧ ಪ್ರಮುಖ ಸಂಸ್ಥೆಗಳಿಂದ 140 ಸ್ಪರ್ಧಿಗಳ 20 ತಂಡಗಳು ಭಾಗವಹಿಸಲಿವೆ. ಇವು ಎಐಸಿಟಿಇ ಒದಗಿಸಿದ ಸಮಸ್ಯೆ ಆಧಾರದ ಮೇಲೆ, ನೈಜ-ಜೀವನದ ಸವಾಲುಗಳಿಗೆ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಪರ್ಧಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.