ADVERTISEMENT

ಮೈಸೂರಿನಲ್ಲಿ ‘ಸ್ನೇಕ್‌ ಸಿಟಿ’ ಖ್ಯಾತಿಯ ಸೈಮನ್‌

ಸ್ನೇಕ್‌ ಶ್ಯಾಮ್‌, ಸೂರ್ಯಕೀರ್ತಿ ಸಾಥ್‌: ನಗರದ ಸುತ್ತಮುತ್ತ ಚಿತ್ರೀಕರಣ

ಮೋಹನ್ ಕುಮಾರ ಸಿ.
Published 7 ಜುಲೈ 2022, 19:29 IST
Last Updated 7 ಜುಲೈ 2022, 19:29 IST
ಮೈಸೂರಿನ ಮನೆಯೊಂದರಲ್ಲಿ ಸಂರಕ್ಷಿಸಿದ ಕೇರೆ ಹಾವಿನೊಂದಿಗೆ ಸೈಮನ್ ಕೀಸ್ ಮತ್ತು ಸೂಝಿ ಗಿಲೆಟ್‌
ಮೈಸೂರಿನ ಮನೆಯೊಂದರಲ್ಲಿ ಸಂರಕ್ಷಿಸಿದ ಕೇರೆ ಹಾವಿನೊಂದಿಗೆ ಸೈಮನ್ ಕೀಸ್ ಮತ್ತು ಸೂಝಿ ಗಿಲೆಟ್‌   

ಮೈಸೂರು: ‘ನ್ಯಾಟ್ ಜಿಯೊ’ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ‘ಸ್ನೇಕ್‌ ಸಿಟಿ’ ಖ್ಯಾತಿಯ ಸೈಮನ್‌ ಕೀಸ್, ಸೂಝಿ ಗಿಲೆಟ್‌ ಮೈಸೂರಿನಲ್ಲಿ ಬೀಡು ಬಿಟ್ಟು, ಕಳೆದ ಎರಡು ತಿಂಗಳಿಂದ ಚಿತ್ರೀಕರಣ ನಡೆಸಿದ್ದಾರೆ.

ದಕ್ಷಿಣ ಆಫ್ರಿಕಾ, ಅಮೆರಿಕ, ಯುರೋಪ್‌ನ ನಗರಗಳ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಗಳಿಗೆ ಬಿಡುವ, ಹಾವುಗಳ ಬಗ್ಗೆ ಅರಿವು ಮೂಡಿ ಸುತ್ತಿರುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಕೀಸ್‌–ಗಿಲೆಟ್‌ ಜೋಡಿ ಜನಪ್ರಿಯತೆಯನ್ನು ಪಡೆದಿದ್ದು, ಏಷ್ಯಾದ ಮೊದಲ ನಗರವಾಗಿ ಮೈಸೂರನ್ನು ಆಯ್ಕೆ ಮಾಡಿಕೊಂಡಿದೆ.

ಅವರೊಂದಿಗೆ ಮೈಸೂರಿನ ಉರಗ ಸಂರಕ್ಷಕ ಸ್ನೇಕ್‌ ಶ್ಯಾಮ್‌, ಸ್ನೇಕ್‌ ಸೂರ್ಯಕೀರ್ತಿ ತೆರೆಯಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಮೈಸೂರು ಸುತ್ತಮುತ್ತ 100ಕ್ಕೂ ಹೆಚ್ಚು ಹಾವುಗಳನ್ನು ಅವರು ಸಂರಕ್ಷಿಸಿದ್ದಾರೆ.

ADVERTISEMENT

‘9ನೇ ಸೀಸನ್‌ನಲ್ಲಿ ಮೈಸೂರು ಸುತ್ತಮುತ್ತ ಸಂರಕ್ಷಿಸಿದ ಹಾವುಗಳ ಚಿತ್ರೀಕರಣ ನಡೆದಿದೆ. ಕೈಗಾರಿಕೆಗಳು, ಮಳಿಗೆಗಳು ಹಾಗೂ ಮನೆಗಳೊಳಗೆ ಕಾಣಿಸಿಕೊಂಡ ಹಾವುಗಳನ್ನು ಕೀಸ್– ಗಿಲೆಟ್‌ ಜೋಡಿ ರಕ್ಷಿಸಿ ಸುರಕ್ಷಿತ ಜಾಗಗಳಿಗೆ ಬಿಡುವುದನ್ನು ಚಿತ್ರೀಕರಿಸಿದ್ದು, ಆಫ್ರಿಕಾ– ಭಾರತದ ಹಾವುಗಳ ಸಾಮ್ಯತೆ ಹಾಗೂ ವ್ಯತ್ಯಾಸಗಳ ಬಗ್ಗೆ ಸರಣಿಯಲ್ಲಿ ಮಾತನಾಡಿದ್ದಾರೆ’ ಎಂದು ನಿರ್ದೇಶಕ ಬೆನ್‌ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪೂರ್ವ, ಪಶ್ಚಿಮ ಘಟ್ಟಗಳು ಹಾಗೂ ಬಯಲು ‍ಪ್ರದೇಶ ಸಂಧಿಸುವ ಸ್ಥಳದಲ್ಲಿರುವ ಮೈಸೂರು ಜಿಲ್ಲೆಯಲ್ಲಿ ವೈವಿಧ್ಯಮಯ ಹಾವುಗಳಿವೆ. ನಾಗರ ಹಾವು, ಮಂಡಲ, ಕೊಳಕು ಮಂಡಲ, ಕೇರೆ, ಹಸಿರು, ಕಟ್ಟು ಹಾವು ಸೇರಿದಂತೆ ಹಲವು ಹಾವುಗಳ ವರ್ತನೆ, ಜೀವನ ಕ್ರಮಗಳನ್ನು ಅಧ್ಯಯನ ನಡೆದಿದೆ. ಎರಡು ದಶಕದಲ್ಲಿ ಹಾವುಗಳ ಜೊತೆ ಗಿನ ಒಡನಾಟ ತೆರೆಯಲ್ಲಿ ಹಂಚಿಕೊಂಡಿ ದ್ದೇನೆ’ ಎಂದು ಸೈಮನ್‌ ಹೇಳಿದರು.

‘ಭಾರತದಲ್ಲಿ ಹಾವುಗಳ ಬಗ್ಗೆ ಇರುವ ಪೂಜನೀಯ ಸ್ಥಾನದ ಬಗ್ಗೆ ಹೆಮ್ಮೆಯಿದೆ. ಆದರೆ, 12 ವರ್ಷ ದ್ವೇಷ ಸಾಧಿಸುತ್ತದೆ ಎಂಬೆಲ್ಲ ಮೂಢನಂಬಿಕೆಗಳೂ ಇಲ್ಲಿವೆ. ವೈಜ್ಞಾನಿಕ ಶಿಕ್ಷಣವನ್ನು ನೀಡುವುದೇ ಕಾರ್ಯಕ್ರಮದ ವಿಶೇಷ. ಆಗುಂಬೆ ಕಾಡಿನಲ್ಲಿ ಕಾಳಿಂಗ ಸರ್ಪದ ಬಗ್ಗೆಯೂ ಚಿತ್ರೀಕರಣ ನಡೆಸಲಾಗುವುದು. ಆಫ್ರಿಕಾದ ಬ್ಲ್ಯಾಕ್‌ ಮಾಂಬಾ ಹಾಗೂ ಭಾರತದ ಕಾಳಿಂಗ ಅತಿ ವಿಷಪೂರಿತ. ಕಾಳಿಂಗ ಸರ್ಪ ಸುಂದರವಾಗಿದ್ದರೂ ಅತಿ ಭಯಾನಕ’ ಎಂದರು.

ಸೂಝಿ ಗಿಲೆಟ್‌ ಮಾತನಾಡಿ, ‘ಹಾವಿನ ವಿಷವನ್ನು ಕ್ಯಾನ್ಸರ್‌, ಪಾರ್ಕಿನ್‌ಸನ್ಸ್‌, ಹೃದಯ ಸಂಬಂಧಿ ರೋಗಗಳ ಔಷಧಕ್ಕೆ ಬಳಸಲಾಗುತ್ತದೆ. ಅವುಗಳ ಸಂರಕ್ಷಣೆಯಲ್ಲೇ ಮಾನವ ಸಂಕುಲದ ಉಳಿವೂ ಇದೆ. ಮಾನವ– ವನ್ಯಜೀವಿಗಳ ಸಂಘರ್ಷವನ್ನು ತಡೆಗಟ್ಟುವುದಕ್ಕಾಗಿ ಸ್ನೇಕ್ ಸಿಟಿ ಕಾರ್ಯಕ್ರಮ ನೀಡುತ್ತಿದ್ದೇವೆ’ ಎಂದರು.

ಜುಲೈ 18ರಿಂದ ಪ್ರಸಾರ: ದಕ್ಷಿಣ ಆಫ್ರಿ ಕಾದ ಹಾವುಗಳ ಕುರಿತು ‘ಸ್ನೇಕ್‌ ಸಿಟಿ’ ಸೀಸನ್‌ 8ರ ಆವೃತ್ತಿ ಜುಲೈ 18ರಿಂದ ನಿತ್ಯ ರಾತ್ರಿ 9ರಿಂದ 6 ಕಂತುಗಳಲ್ಲಿ ಪ್ರಸಾರವಾಗಲಿದೆ. ಇದಾದ ಬಳಿಕ ಮೈಸೂರಿನ ಹಾವುಗಳ ಕುರಿತ ಆವೃತ್ತಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.