ADVERTISEMENT

ಮೈಸೂರು| ಗೂಗಲ್‌, ಫೋನ್‌ ಪೇ ಮೂಲಕ ನೀರಿನ ಶುಲ್ಕ ನೇರ ಪಾವತಿಗೆ ಅವಕಾಶ: ಮೇಯರ್‌

ನೀರಿನ ಶುಲ್ಕ ಪಾವತಿಗೆ ‘ಸಾಫ್ಟ್‌ವೇರ್’

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 9:00 IST
Last Updated 12 ಜುಲೈ 2022, 9:00 IST
ಸುನಂದಾ ಫಾಲನೇತ್ರ
ಸುನಂದಾ ಫಾಲನೇತ್ರ   

ಮೈಸೂರು: ‘ಪಾಲಿಕೆಯು ಗ್ರಾಹಕರಿಗಾಗಿ ನೀರಿನ ಶುಲ್ಕ ಪಾವತಿಗೆ ‘ರೆವೆನ್ಯೂ ಮ್ಯಾನೇಜ್‌ಮೆಂಟ್‌ ಸಾಫ್ಟ್‌ವೇರ್‌’ ಅಭಿವೃದ್ಧಿ ಪಡಿಸಿದ್ದು, ಸಿಬ್ಬಂದಿ ಬಿಲ್‌ ನೀಡಲು ಬಂದಾಗ ಸ್ಥಳದಲ್ಲಿಯೇ ಗೂಗಲ್‌, ಫೋನ್ ಪೇ ಅಥವಾ ಯು‍‍‍ಪಿಐ ಮೂಲಕ ಶುಲ್ಕ ಕಟ್ಟಬಹುದು’ ಎಂದು ಮೇಯರ್‌ ಸುನಂದಾ ಫಾಲನೇತ್ರ ಹೇಳಿದರು.

ಪಾಲಿಕಯಲ್ಲಿಮಂಗಳವಾರನಡೆದಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ‘ಶುಲ್ಕ ಪಾವತಿಗೆ ಪಾಲಿಕೆಯ ವಲಯ ಕಚೇರಿ, ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಮಾತ್ರ ಅವಕಾಶವಿತ್ತು. ಸಾಫ್ಟ್‌ವೇರ್‌ ಮೂಲಕ ಮನೆ ಬಾಗಿಲಿಗೇ ಸೇವೆಯನ್ನು ವಿಸ್ತರಿಸಲಾಗಿದ್ದು, ಗ್ರಾಹಕರು ಅನುಕೂಲ ಪಡೆಯಬೇಕು’ ಎಂದರು.

ಬಡ್ಡಿ ನಿಶ್ಚಲತೆ ಯೋಜನೆ: ‘ಪಾಲಿಕೆಗೆ ₹ 220 ಕೋಟಿ ನೀರಿನ ಶುಲ್ಕವನ್ನು 52 ಸಾವಿರ ಗ್ರಾಹಕರು ಭರಿಸಬೇಕಿದೆ. ₹ 146 ಕೋಟಿ ಅಸಲು ಭರಿಸಿದರೆ ₹ 74 ಕೋಟಿ ಬಡ್ಡಿ ಮನ್ನಾ ಮಾಡಲು ಏಪ್ರಿಲ್‌ 29ರಂದು ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜುಲೈ 15ರಿಂದ ಆರು ತಿಂಗಳವರೆಗೆ ‘ಬಡ್ಡಿ ನಿಶ್ಚಲತೆ’ ಯೋಜನೆ ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಯೋಜನೆಯು ಗೃಹ ಬಳಕೆ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಶುಲ್ಕದ ಸಂಪೂರ್ಣ ಅಸಲನ್ನು ಒಮ್ಮೆಗೇ ಭರಿಸಿದರೇ ಮುಂದಿನ 6 ತಿಂಗಳು ಯಾವುದೇ ಬಡ್ಡಿಯನ್ನು ಪಾಲಿಕೆ ವಿಧಿಸುವುದಿಲ್ಲ. ಬಡ್ಡಿ ಮನ್ನಾ ನಿರ್ಧಾರವನ್ನು ಸರ್ಕಾರ ನಿರ್ಧರಿಸಲಿದೆ’ ಎಂದು ಆಯುಕ್ತ ಲಕ್ಷ್ಮಿಕಾಂತರೆಡ್ಡಿ ವಿವರಿಸಿದರು.

‘ಆದಾಯ ಸಂಗ್ರಹ ಹೆಚ್ಚಳಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಗ್ರಾಹಕರಿಗೂ ಯೋಜನೆಯಿಂದ ಅನುಕೂಲವಾಗಲಿದೆ. ಒಂದೇ ಬಾರಿ ಅಸಲು ಪಾವತಿಸದಿದ್ದರೆ ಬಡ್ಡಿ ನಿಲ್ಲುವುದಿಲ್ಲ’ ಎಂದರು.

‌‘24 ಸಾವಿರ ಮಂದಿ ನಿಯಮಬಾಹಿರವಾಗಿ ನಲ್ಲಿ ಸಂಪರ್ಕ ಪಡೆದಿದ್ದಾರೆ. ಸಂಪರ್ಕ ಕಡಿತದಿಂದ ತಿಂಗಳಿಗೆ ಎರಡೂವರೆ ಸಾವಿರ ಹೊಸ ಸಂಪರ್ಕದ ಅರ್ಜಿಗಳು ಬರುತ್ತಿವೆ. ಇದುವರೆಗ 34 ಸಾವಿರ ಹೊಸ ಮೀಟರ್‌ ಅಳವಡಿಸಲಾಗಿದೆ’ ಎಂದರು.

‘ನಲ್ಲಿ ಮೀಟರ್‌ ಕೆಲಸ ಮಾಡದಿದ್ದಲ್ಲಿ ಬದಲಿಸಿಕೊಳ್ಳಬೇಕು. ಇಲ್ಲದಿದ್ದರೆ ಮೂರು ತಿಂಗಳಿಗೊಮ್ಮೆ ಬಿಲ್‌ ಎರಡು ಪಟ್ಟು ಹೆಚ್ಚಾಗುತ್ತದೆ. ಇಲ್ಲದಿದ್ದರೆ ಶುಲ್ಕ ದುಪ್ಪಟ್ಟಾಗುತ್ತಲೇ ಇರುತ್ತದೆ. ಟ್ಯಾಂಪರಿಂಗ್‌ ಮಾಡದಂತಹಮೀಟರ್‌ ಅಳವಡಿಕೆಗೆ ನಿಯಮಗಳನ್ನು ರೂಪಿಸಲಾಗಿದ್ದು, ಆ ಮೀಟರ್‌ಗಳನ್ನೇ ಗ್ರಾಹಕರು ಕೊಳ್ಳಬೇಕು’ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

‘ಎಲ್ಲ ವಾರ್ಡ್‌ಗಳಿಗೆ ₹ 50 ಲಕ್ಷ’: ‘ಪಾಲಿಕೆ ವ್ಯಾಪ್ತಿಯ ಎಲ್ಲ 65 ವಾರ್ಡ್‌ಗಳ ಕೆಲಸಗಳಿಗೆ ಮೇಯರ್‌ ಅನುದಾನದಿಂದ ₹ 50 ಲಕ್ಷ ನೀಡಲು ತೀರ್ಮಾನ ಕೈಗೊಲ್ಳಲಾಗಿದೆ. ಪಾಲಿಕೆ ಸದಸ್ಯರು ಅಗತ್ಯ ಕೆಲಸಗಳಿಗೆ ಹಣ ಬಳಸಬೇಕು’ ಎಂದು ಮೇಯರ್‌ ಸುನಂದಾ ಫಾಲನೇತ್ರ ಹೇಳಿದರು.

‘ಮೀಸಲಾತಿ ಪ್ರಕಟಿಸಿದ ನಂತರ ಮೇಯರ್‌ ಚುನಾವಣೆ ನಡೆಯಲಿದೆ. ಸರ್ಕಾರವು ಸಿದ್ಧತೆಯಲ್ಲಿ ತೊಡಗಿದೆ’ ಎಂದು ತಿಳಿಸಿದರು.

ದೇವರಾಜ ಮಾರುಕಟ್ಟೆ; ಹೈಕೋರ್ಟ್‌ ತೀರ್ಮಾನ: ‘ದೇವರಾಜ ಮಾರುಕಟ್ಟೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಮಾನಿಸಲಿದೆ. ನಿರ್ಣಯದಂತೆ ಕ್ರಮವಹಿಸಲಾಗುವುದು’ ಎಂದು ಲಕ್ಷ್ಮಿಕಾಂತ ರೆಡ್ಡಿ ತಿಳಿಸಿದರು.

‘ದೊಡ್ಡ ಗಡಿಯಾರ ದುರಸ್ತಿಗೆ ಪುರಾತತ್ವ ಇಲಾಖೆಗೆ ಪಾಲಿಕೆಯಿಂದ ₹ 34 ಲಕ್ಷ ಬಿಡುಗಡೆ ಮಾಡಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ. ಮಳೆ ಹಾನಿ ತಡೆ ಹಾಗೂ ಪರಿಹಾರ ಕ್ರಮಕ್ಕೆ ನಗರಾಭಿವೃದ್ಧಿ ಸಚಿವರ ಸೂಚನೆಯಂತೆ ಟಾಸ್ಕ್‌ಫೋರ್ಸ್‌ ರಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.