
ಹುಣಸೂರು: ‘ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ನಾಗರಿಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಕಂದಾಯ, ಸರ್ವೆ ಮತ್ತು ಪಂಚಾಯಿತಿ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದ್ದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಮತ್ತು ಸರ್ವೆಯರ್‌ಗಳ ಸಭೆಯಲ್ಲಿ ಮಾತನಾಡಿದರು.
‘ಗ್ರಾಮಗಳಲ್ಲಿ ಜಮೀನುಗಳಿಗೆ ಹೋಗುವ ರಸ್ತೆ, ಕೆರೆ ಒತ್ತುವರಿ, ಸ್ಮಶಾನ ಮತ್ತು ಸರ್ಕಾರಿ ನಿವೇಶನ ಒತ್ತುವರಿಗಳಿಂದ, ಸಹಕಾರ ಮನೋಭಾವ ಇಲ್ಲದೇ ಅಶಾಂತಿ ಉಂಟಾಗಿದ್ದು, ಈ ಸಮಸ್ಯೆಗೆ ಕಂದಾಯ ಇಲಾಖೆ ಬಗೆಹರಿಸುವ ದಿಕ್ಕಿನಲ್ಲಿ ಸೂತ್ರ ಕಂಡುಕೊಳ್ಳಬೇಕು’ ಎಂದರು.
‘ಪಂಚಾಯಿತಿ ಹಂತದಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅದಕ್ಕೆ ತಕ್ಕಂತೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಭಿವೃದ್ಧಿ ಅಧಿಕಾರಿಗಳು ಗಮನಿಸಬೇಕು. ಕಳೆದ ಸಭೆಯಲ್ಲಿ ಸರ್ಕಾರಿ ನಿವೇಶನ ಗುರುತಿಸಿ ಕಾದಿಡುವಂತೆ ಸೂಚಿಸಿತ್ತು. ಸರ್ಕಾರಿ ಯೋಜನೆ ಅನುಷ್ಠಾನಕ್ಕೆ ನಿವೇಶನ ಕಲ್ಪಿಸಲು ಈವರೆಗೂ ಪಿಡಿಒ ಕ್ರಮವಹಿಸಿಲ್ಲ’ ಎಂದು ಗುಡುಗಿದರು.
‘ಗ್ರಾಮೀಣ ಭಾಗಗಳಲ್ಲಿ ಪ್ರವಾಸದ ವೇಳೆ ಸ್ಮಶಾನ ಸಮಸ್ಯೆ ಕುರಿತು ಹೆಚ್ಚಿನ ಅಹವಾಲು ಬರುತ್ತಿದ್ದು, ಪಂಚಾಯಿತಿ ಎಷ್ಟು ಸ್ಮಶಾನ ಅಭಿವೃದ್ಧಿಪಡಿಸಿದೆ’ ಎಂದು ಪ್ರಶ್ನಿಸಿದರು.
ತಹಶೀಲ್ದಾರ್ ಮಂಜುನಾಥ್ ಉತ್ತರಿಸಿ, ‘ತಾಲ್ಲೂಕಿನ 211 ಗ್ರಾಮಗಳಲ್ಲಿ 248 ಸ್ಮಶಾನಗಳಿದೆ. ಹೆಚ್ಚುವರಿ ಸ್ಮಶಾನ ಅಭಿವೃದ್ಧಿಗೆ ಪ್ರಸ್ತಾವ ನಿರೀಕ್ಷೆಯಲ್ಲಿದ್ದೇವೆ’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಹೊಂಗಯ್ಯ ಉತ್ತರಿಸಿ, ‘ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಗುರುತಿಸಿ ಸ್ಮಶಾನ ಅಭಿವೃದ್ಧಿಗೆ ನರೇಗಾ ಯೋಜನೆ ಬಳಸಿಕೊಳ್ಳಲು ಸೂಚಿಸಿದೆ’ ಎಂದರು.
ಉದ್ದೂರುಕಾವಲ್ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಮಾತನಾಡಿ, ‘ನಂಜಾಪುರ, ಗೌರಿಪುರ ಗ್ರಾಮದಲ್ಲಿ ಸರ್ಕಾರಿ ನಿವೇಶನದ ಕೊರತೆ ಇದೆ’ ಎಂದರು.
‘ಸರ್ಕಾರಿ ನಿವೇಶನ ಗುರುತಿಸಿ ಸರ್ವೆ ಇಲಾಖೆಗೆ ಸರ್ವೆ ನಡೆಸುವಂತೆ ಎರಡು ವರ್ಷಗಳ ಹಿಂದೆ ಪ್ರಸ್ತಾವ ಸಲ್ಲಿಸಿದ್ದರೂ ಈವರೆಗೂ ಕ್ರಮವಹಿಸಿಲ್ಲ’ ಎಂದು ಗಾಗೇನಹಳ್ಳಿ ಅಧಿಕಾರಿ ನಾಗೇಶ್ ಉತ್ತರಿಸಿದರು.
ಗೆರೆಸನಹಳ್ಳಿ ಮತ್ತು ಹುಸೇನಪುರ ಗ್ರಾಮ ಲೆಕ್ಕಾಧಿಕಾರಿ ಪ್ರಗತಿ ಮಾತನಾಡಿ, ‘ಗೆರಸನಹಳ್ಳಿಯಲ್ಲಿ ನೀರಿನ ಕಟ್ಟೆ ಖಾಸಗಿ ವ್ಯಕ್ತಿ ಒಡೆದ ಪ್ರಕರಣಕ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಭೂಮಿಯಲ್ಲಿ ಕಟ್ಟೆ ಇದ್ದು, ವ್ಯಕ್ತಿಯೊಬ್ಬ ತನ್ನ ಭೂಮಿಗೆ ನೀರು ಹರಿಯುತ್ತದೆ ಎಂದು ನೀರು ನಿಲ್ಲುವ ಕಟ್ಟೆ ಒಡೆದಿದ್ದಾರೆ. ಈ ಸಂಬಂಧ ಸರ್ವೆ ಇಲಾಖೆ ಸರ್ವೆ ನಡೆಸಿ ಸರ್ಕಾರಿ ಭೂಮಿ ಗುರುತಿಸಿದೆ. ಸ್ಥಳಿಯರು ನೀರಿನ ಕಟ್ಟೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಸಭೆಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡಿ ತಹಶೀಲ್ದಾರ್ ಮುಂದಿನ ಕ್ರಮ ಕೈಗೊಳ್ಳುವಂತೆ ಶಾಸಕರು ಸರ್ವೆ ಇಲಾಖೆಯ ಜಯಕುಮಾರ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಕಂದಾಯ ಇಲಾಖೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.