ADVERTISEMENT

ಭದ್ರತಾ ಸಿಬ್ಬಂದಿ ಸಾವು; ತನಿಖೆಗೆ ಆಗ್ರಹ

ಯುನೈಟೆಡ್ ಸೆಕ್ಯೂರಿಟಿ ವರ್ಕರ್ಸ್ ಯೂನಿಯನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:45 IST
Last Updated 13 ನವೆಂಬರ್ 2025, 2:45 IST
ಮೈಸೂರಿನ ಕ್ರಾಫರ್ಡ್‌ ಭವನದ ಮುಂಭಾಗ ಎಐಯುಟಿಯುಸಿ ಸಂಘಟನೆ ಸಂಯೋಜಿತ ಕರ್ನಾಟಕ ಯುನೈಟೆಡ್ ಸೆಕ್ಯೂರಿಟಿ ವರ್ಕರ್ಸ್ ಯೂನಿಯನ್ ಸದಸ್ಯರು ಭದ್ರತಾ ಸಿಬ್ಬಂದಿ ಸಮಸ್ಯೆ ಸರಿಪಡಿಸುವಂತೆ ಕುಲಸಚಿವೆ ಎಂ.ಕೆ.ಸವಿತಾ ಅವರಿಗೆ ಮನವಿ ಸಲ್ಲಿಸಿದರು
ಮೈಸೂರಿನ ಕ್ರಾಫರ್ಡ್‌ ಭವನದ ಮುಂಭಾಗ ಎಐಯುಟಿಯುಸಿ ಸಂಘಟನೆ ಸಂಯೋಜಿತ ಕರ್ನಾಟಕ ಯುನೈಟೆಡ್ ಸೆಕ್ಯೂರಿಟಿ ವರ್ಕರ್ಸ್ ಯೂನಿಯನ್ ಸದಸ್ಯರು ಭದ್ರತಾ ಸಿಬ್ಬಂದಿ ಸಮಸ್ಯೆ ಸರಿಪಡಿಸುವಂತೆ ಕುಲಸಚಿವೆ ಎಂ.ಕೆ.ಸವಿತಾ ಅವರಿಗೆ ಮನವಿ ಸಲ್ಲಿಸಿದರು   

ಮೈಸೂರು: ‘ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಭದ್ರತಾ ಸಿಬ್ಬಂದಿ ಸಂಜಯ್‌ ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪ್ರಕರಣದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಘಟನೆ ಸಂಯೋಜಿತ ಕರ್ನಾಟಕ ಯುನೈಟೆಡ್ ಸೆಕ್ಯೂರಿಟಿ ವರ್ಕರ್ಸ್ ಯೂನಿಯನ್ ಸದಸ್ಯರು ಕ್ರಾಫರ್ಡ್‌ ಭವನದ ಮುಂಭಾಗ ಬುಧವಾರ ಪ್ರತಿಭಟಿಸಿದರು. 

ಎಐಯುಟಿಯುಸಿ ಸಂಚಾಲಕ ಚಂದ್ರಶೇಖರ ಮೆಟಿ ಮಾತನಾಡಿ, ‘ಸಂಜಯ್‌ ಅವರನ್ನು 11 ದಿನಗಳಿಂದ ನಿರಂತರವಾಗಿ ಕೆಲಸಕ್ಕೆ ನಿಯೋಜಿಸಲಾಗಿದೆ. ಅನಾರೋಗ್ಯದ ಕಾರಣಕ್ಕೆ ರಜೆ ಕೇಳಿದರೂ ಕೊಟ್ಟಿಲ್ಲ. ಭದ್ರತಾ ಸಿಬ್ಬಂದಿಗಳ ಏಜೆನ್ಸಿಯ ಒತ್ತಡದಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಬೆಂಗಳೂರು ಮೂಲದ ಎಸ್‌ಆರ್‌ಆರ್ ಭದ್ರತಾ ಏಜೆನ್ಸಿಯನ್ನು ರದ್ದುಪಡಿಸಬೇಕು ಮತ್ತು ಭದ್ರತಾ ಮೇಲ್ವಿಚಾರಕನನ್ನು ಬಂಧಿಸಬೇಕು’ ಎಂದು ಒತ್ತಾಯಿದರು.

‘ಭದ್ರತಾ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸಲು ಮಂಗಳವಾರ ಪ್ರತಿಭಟನೆ ಮಾಡಿದ್ದು, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಏಜೆನ್ಸಿಯವರು ನಿರಾಕರಿಸಿದ್ದಾರೆ. ಈ ಧೋರಣೆ ಸಲ್ಲ. ಇಲ್ಲಿರುವ ಕಾರ್ಮಿಕರನ್ನು ವರ್ಗಾಯಿಸದೆ ಇಲ್ಲೇ ಕೆಲಸ ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಹಿರಿಯ ಹೋರಾಟಗಾರ ಉಗ್ರನರಸಿಂಹೇಗೌಡ ಮಾತನಾಡಿ, ‘152 ಜನರಿಗೆ ಸಂಬಳ ನೀಡಲಾಗುತ್ತಿತ್ತು. ಆದರೆ ಕೆಲಸ ಮಾಡುತ್ತಿದ್ದವರು 120 ಜನರಷ್ಟೇ. ಇನ್ನುಳಿದ ನೌಕರರ ಹಣ ಯಾರಿಗೆ ಹೋಗುತ್ತಿತ್ತು? ಇಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಪ್ರತಿಷ್ಠಿತ ಮೈಸೂರು ವಿವಿ ಹೀನ ಸ್ಥಿತಿಗೆ ತಲುಪಿರುವುದು ವಿಷಾದನೀಯ’ ಎಂದರು.

ಕುಲಸಚಿವೆ ಎಂ.ಕೆ. ಸವಿತಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನೌಕರರ ಸಮಸ್ಯೆಗಳನ್ನು ಆಲಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್ ಮೃತರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.

‘ನ.1 ರಿಂದ ಹೊಸ ಏಜೆನ್ಸಿ ಅಸ್ತಿತ್ವಕ್ಕೆ ಬಂದಿದೆ. ಕಾರ್ಯಾದೇಶ ನೀಡಿ 7 ದಿನಗಳಾಗಿವೆ. ವಿವಿ ವ್ಯಾಪ್ತಿಯಲ್ಲಿ 750 ಸಿಸಿಟಿವಿ ಹಾಕಿದ್ದು, ಹೀಗಾಗಿ 50 ಸಿಬ್ಬಂದಿ ಸಾಕಾಗುತ್ತದೆ. ಆದರೂ 90 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತೀ ವಾರ ಕಾರ್ಮಿಕರನ್ನು ಭೇಟಿ ಮಾಡಿ ಸಮಸ್ಯೆಗಳಿದ್ದರೆ ಬಗೆಹರಿಸುತ್ತೇವೆ’ ಎಂದರು.

ಅಧಿಕಾರಿಗಳು ಶಾಂತ ರೀತಿಯಲ್ಲಿ ನೌಕರರ ಸಮಸ್ಯೆಗಳನ್ನು ಆಲಿಸಬೇಕು. ತಾಳ್ಮೆಯಿಂದ ಸಮಸ್ಯೆ ಕೇಳಬೇಕು ಎಂದು ಸಂಶೋಧಕರ ಸಂಘದ ವಿದ್ಯಾರ್ಥಿಗಳು ಒತ್ತಾಯಿಸಿದರು. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಎಐಯುಟಿಯುಸಿ ಜಿಲ್ಲಾ ಸದಸ್ಯ ಹರೀಶ್, ಯಶೋಧರ ವಿ, ಸಂಧ್ಯಾ ಪಿ.ಎಸ್, ಮುದ್ದುಕೃಷ್ಣ, ಹರೀಶ್ ಎಚ್.ಎಸ್, ಶಿವಾನಂದ್, ನಾರಾಯಣ, ಪ್ರೊ.ಶಬೀರ್ ಮುಸ್ತಾಫ, ಗೌರವಾಧ್ಯಕ್ಷ ನಿಂಗರಾಜು, ಚೆನ್ನಕೇಶವ ಮೂರ್ತಿ, ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್, ಗೌರವಾಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಕೆ. ಮಲ್ಲೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸಂಜಯ್ ಭಾಗವಹಿಸಿದ್ದರು. 

ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಸಾವು

ಮೈಸೂರು: ನಗರದ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕರ್ತವ್ಯದಲ್ಲಿದ್ದಾಗಲೇ ಭದ್ರತಾ ಸಿಬ್ಬಂದಿ ಸಂಜಯ್ ಬುಧವಾರ ಬೆಳಿಗ್ಗೆ ಮೃತಪ‍ಟ್ಟರು. ‘ಜಯನಗರದ ನಿವಾಸಿಯಾಗಿದ್ದ ಅವರು ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಸಂಸ್ಥೆಯ ಹೊರಭಾಗದ ಮೆಟ್ಟಿಲುಗಳ ಮೇಲೆ ಅವರ ಮೃತದೇಹ ಬಿದ್ದಿತ್ತು. ಅನಾರೋಗ್ಯದಿಂದ ಸಾವು ಸಂಭವಿಸಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಿಪುರಂ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.