ADVERTISEMENT

ಪಂಜಿನ ಕವಾಯತು; ಆಸನ ಹೆಚ್ಚಳ

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:34 IST
Last Updated 20 ಸೆಪ್ಟೆಂಬರ್ 2019, 5:34 IST
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗುರುವಾರ ಬನ್ನಿಮಂಟಪದಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಿಸಿಪಿ ಮುತ್ತುರಾಜ್, ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್‌ ಇದ್ದಾರೆಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗುರುವಾರ ಬನ್ನಿಮಂಟಪದಲ್ಲಿ ನಡೆದಿರುವ ಕಾಮಗಾರಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಿಸಿಪಿ ಮುತ್ತುರಾಜ್, ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್‌ ಇದ್ದಾರೆಪ್ರಜಾವಾಣಿ ಚಿತ್ರ : ಅನೂಪ್ ಆರ್. ತಿಪ್ಪೇಸ್ವಾಮಿ   

ಮೈಸೂರು: ’ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಪಂಜಿನ ಕವಾಯತು ಪ್ರದರ್ಶನವನ್ನು ಹೆಚ್ಚಿನ ಜನರು ವೀಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಗುರುವಾರ ಇಲ್ಲಿ ತಿಳಿಸಿದರು.

ಬನ್ನಿಮಂಟಪದಲ್ಲಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಚಿವರು, ‘ಹಿಂದಿನ ಬಾರಿಯವರೆಗೂ 22ಸಾವಿರ ಜನರಿಗೆ ವೀಕ್ಷಿಸಲು ಅವಕಾಶವಿತ್ತು. ಈ ಬಾರಿ 32,400 ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಅ.2ರಂದು ಇದೇ ಮೈದಾನದಲ್ಲಿ ಏರ್ ಶೋ ನಡೆಸಲು ಯೋಜಿಸಲಾಗಿದೆ. ವೈಮಾನಿಕ ಪ್ರದರ್ಶನವನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನಾಕರ್ಷಣೀಯವಾಗಿ ರೂಪಿಸಲಾಗುವುದು’ ಎಂದರು.

ADVERTISEMENT

‘ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದು, ತೊಂದರೆಯಾದ ಸ್ಥಳಗಳಿಗೆ ಆಯಾ ಜಿಲ್ಲಾಧಿಕಾರಿಗಳೇ ಜವಾಬ್ದಾರಿ ವಹಿಸಿ ಮನೆ ಕಟ್ಟಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. 103 ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಹಾನಿಗೊಳಗಾಗಿವೆ. ಒಂದು ಲಕ್ಷ ಮನೆಗಳನ್ನು ಕಟ್ಟಿಸಲಾಗುವುದು’ ಎಂದು ಹೇಳಿದರು.

ಮಡಿಕೇರಿಗೆ ಭೇಟಿ: ಸೆ.23ರಂದು ಮಡಿಕೇರಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇದೇ ಸಂದರ್ಭ ಚರ್ಚಿಸಲಾಗುವುದು ಎಂದು ಸೋಮಣ್ಣ ತಿಳಿಸಿದರು.

ಗೃಹ ಸಚಿವರ ಸಭೆ 25ಕ್ಕೆ: ದಸರಾ ಮಹೋತ್ಸವದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿಕ್ಕಾಗಿಯೇ ನಗರದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು.

ಮೇಯರ್‌ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್, ಡಿಸಿಪಿ ಮುತ್ತುರಾಜ್, ಮುಡಾ ಆಯುಕ್ತ ಕಾಂತರಾಜ್, ಉಪವಿಭಾಗಾಧಿಕಾರಿ ವೆಂಕಟರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.