
ಸರಗೂರು: ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟದಲ್ಲಿರುವ ತಾಯಿ ಚಿಕ್ಕದೇವಮ್ಮ ದೇವತೆಗೆ ಹೊಸ ವರ್ಷದ ಹಿನ್ನೆಲೆಯಲ್ಲಿ ಗುರುವಾರ ವಿಶೇಷ ಪೂಜೆ ನಡೆಯಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದ ಬಳಿಕ ದೇವತೆಗೆ ವಿಶೇಷ ಅಭಿಷೇಕ ಮಾಡಲಾಯಿತು. ದೇವತೆಯನ್ನು ವಿವಿಧ ಹೂವುಗಳಿಂದ ಮಧುವಣಗಿತ್ತಿಯಂತೆ ಅಲಂಕರಿಸಲಾಯಿತು. ಭಕ್ತರು ದೇವರ ದರ್ಶನ ಪಡೆದರು.
ದೇವಸ್ಥಾನದ ಪಾದದ ಬಳಿಯಲ್ಲಿ ದೇವತೆಗೆ ಮೊದಲಿಗೆ ಪೂಜೆ ಸಲ್ಲಿಸಿದ ಭಕ್ತರು ಮೆಟ್ಟಿಲುಗಳನ್ನು ಏರಿ ದೇವತೆಯ ಬಳಿ ಬಂದು, ಚಿಕ್ಕಮ್ಮ ಚಿಕ್ಕದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದೇವತೆಯನ್ನು ಕಣ್ತುಂಬಿಕೊಂಡರು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಹರಕೆ ತೀರಿಸಿ ದೇವರ ಕೃಪೆಗೆ ಪಾತ್ರರಾದರು.
ವರ್ಷದಿಂದ ವರ್ಷಕ್ಕೆ ಹೊಸ ವರುಷವಂತೂ ಜನದಟ್ಟಣೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಚಿಕ್ಕದೇವಮ್ಮ ಬೆಟ್ಟದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ.
ಹೊಸ ವರ್ಷದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸ್ ಠಾಣೆಯ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರೂ ಟ್ರಾಫಿಕ್ ಜಾಮ್‌ನಿಂದಾಗಿ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.
ದೇವಸ್ಥಾನದ ಪಾರುಪತ್ತೇದಾರ ಶಾಂತಿಪುರ ಮಹದೇವಸ್ವಾಮಿ, ಅರ್ಚಕರಾದ ಮನು, ಪ್ರಸನ್ನ, ಮಣಿ, ಸಂತೋಷ್, ಶಿವಕುಮಾರ್, ಲಿಂಗಪ್ಪ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.