ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 7:36 IST
Last Updated 21 ಫೆಬ್ರುವರಿ 2021, 7:36 IST
ಮೈಸೂರಿನಲ್ಲಿ ಶನಿವಾರ ನಡೆದ ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನ ಉದ್ಘಾಟನಾ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಮಾತನಾಡಿದರು
ಮೈಸೂರಿನಲ್ಲಿ ಶನಿವಾರ ನಡೆದ ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನ ಉದ್ಘಾಟನಾ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಮಾತನಾಡಿದರು   

ಮೈಸೂರು: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮೈಸೂರು ಫೋಟೋ ಜರ್ನಲಿಸ್ಟ್ ಅಸೋಸಿಯೇಷನ್‌ನ್ನು ಶನಿವಾರ ಇಲ್ಲಿನ ಪತ್ರಿಕಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನನ್ನು ಟೀಕಿಸದಿದ್ದರೆ ಮಾಧ್ಯಮದವರಿಗೆ ನಿದ್ದೆ ಬರಲ್ಲ. ನನಗೆ ಬೇರೆ ಬೇರೆ ಬಣ್ಣ ಕೊಡುತ್ತಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಏಕೆಂದರೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು. ಅದು ಇದ್ದಾಗಲೇ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ. ಇಲ್ಲದಿದ್ದರೆ, ಚೀನಾ ರೀತಿಯ ಸರ್ವಾಧಿಕಾರತ್ವ ಬರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ನಾವಿಲ್ಲಿ ಸಂವಿಧಾನ ಮತ್ತು ಸಂಸದೀಯ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಅದಕ್ಕೆ ಅನುಗುಣವಾಗಿ ದೇಶ ನಡೆಯಬೇಕು. ಒಮ್ಮೆಮ್ಮೆ ಇವೆಲ್ಲ ಮರೆತು ಪ್ರಜಾಪ್ರಭುತ್ವದ ವಿರೋಧಿಯಾಗಿ ನಡೆದುಕೊಳ್ಳುವುದು ಸರಿಯಲ್ಲ’ ಎಂದರು.

ಟಿ.ವಿ ನೋಡುವುದಕ್ಕಿಂತ ಹೆಚ್ಚು ದಿನ ಪತ್ರಿಕೆ ಓದುತ್ತೇನೆ. ದಿನ ಪತ್ರಿಕೆಯಷ್ಟು ವಿಶ್ವಾಸಾರ್ಹತೆ ಟಿ.ವಿಗಳಿಗೆ ಬರುವುದಿಲ್ಲ. ವರದಿಗಾರರು ಸರಿಯಾಗಿ ಸುದ್ದಿ ಕೊಟ್ಟಿದ್ದರೂ ಸಂಪಾದಕರು, ಮಾಲೀಕರು ಅದನ್ನು ತಿರುಚುತ್ತಾರೆ ಎಂದು ಹೇಳಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಸಿದ್ದರಾಮಯ್ಯ ಇದೇ ವೇಳೆ ವೇದಿಕೆ ಹಂಚಿಕೊಂಡರು.

ಹಾಸ್ಯ ಚಟಾಕಿ ಹಾರಿಸಿದ ಜಿ.ಟಿ.ದೇವೇಗೌಡ

ಸಿದ್ದರಾಮಯ್ಯ ಮಾತನಾಡಲು ಆರಂಭಿಸುತ್ತಿದ್ದಂತೆ ಶಾಸಕ ಜಿ.ಟಿ.ದೇವೇಗೌಡ ‘ಮಾತನಾಡಲು ಏನು ಇಲ್ಲ ಬಿಡಿ’ ಎಂದು ಹೇಳುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮಾತನಾಡುವುದಕ್ಕೆ ವಿಷಯವೇ ಇರಬೇಕೇಂದೇನೂ ಇಲ್ಲ. ಬೇಕಾದರೆ ಒಂದು ಗಂಟೆ ಮಾತನಾಡಬಲ್ಲೆ. ಪತ್ರಿಕೋದ್ಯಮದ ಬಗ್ಗೆನೇ ಮಾತನಾಡುತ್ತೇನೆ’ ಎಂದು ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.