ADVERTISEMENT

ಮೈಸೂರು: ಸಾಂಬಾರ ಪದಾರ್ಥಗಳು ತುಟ್ಟಿ

ಹಣ್ಣು–ತರಕಾರಿ ಅಗ್ಗ; ಈರುಳ್ಳಿ ದರದಲ್ಲಿ ಅಲ್ಪ ಜಿಗಿತ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 7:13 IST
Last Updated 13 ಸೆಪ್ಟೆಂಬರ್ 2023, 7:13 IST
ಸಾಂಬಾರ ಪದಾರ್ಥಗಳು
ಸಾಂಬಾರ ಪದಾರ್ಥಗಳು   

ಮೈಸೂರು: ಕಳೆದೊಂದು ತಿಂಗಳಿಂದ ತರಕಾರಿ–ಹಣ್ಣುಗಳ ಬೆಲೆಯಲ್ಲಿ ಇಳಿಕೆ ಆಗುತ್ತಿದ್ದರೂ ಸಾಂಬಾರ ಪದಾರ್ಥಗಳು ಮಾತ್ರ ತುಟ್ಟಿ ಆಗತೊಡಗಿವೆ.

ಕಳೆದ ಎರಡು ವರ್ಷದಿಂದಲೂ ಇಳಿಕೆಯ ಹಾದಿಯಲ್ಲಿಯೇ ಇದ್ದ ಕಾಳುಮೆಣಸಿನ ದರವು 2–3 ತಿಂಗಳಿಂದ ಏರಿಕೆ ಆಗುತ್ತಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹750–800ರಂತೆ ಮಾರಾಟ ನಡೆದಿದೆ. ಜೀರಿಗೆ ಸಹ ಪ್ರತಿ ಕೆ.ಜಿ.ಗೆ ₹80–100ರಷ್ಟು ಏರಿಕೆ ಆಗಿದ್ದು, ಸದ್ಯ ಕೆ.ಜಿ.ಗೆ ₹700ರ ದರದಲ್ಲಿ ಮಾರಾಟ ನಡೆದಿದೆ. ಅರಿಶಿನದ ಬೆಲೆ ಸಹ ಗಗನಮುಖಿ ಆಗಿದೆ.

‘ಕಳೆದ ಕೆಲವು ತಿಂಗಳ ಹಿಂದಷ್ಟೇ ಜೀರಿಗೆ ಕೆ.ಜಿ.ಗೆ ₹300–350 ದರ ಇತ್ತು. ಈಗ ದುಪ್ಪಟ್ಟಾಗಿದ್ದು, ಗ್ರಾಹಕರಿಗೆ ಇದರ ಬಿಸಿ ತಟ್ಟುತ್ತಿದೆ. ಮಸಾಲೆ ಪದಾರ್ಥಗಳ ಬೆಲೆ ಏರಿಕೆಯು ಸಾಮಾನ್ಯ ಗ್ರಾಹಕರ ಜೊತೆಗೆ ಹೋಟೆಲ್‌ ಉದ್ಯಮದ ಮೇಲೂ ಪರಿಣಾಮ ಬೀರಲಿದೆ’ ಎಂದು ವರ್ತಕರು ಹೇಳುತ್ತಾರೆ.

ADVERTISEMENT

ಬ್ಯಾಡಗಿ ಮೆಣಸಿನಕಾಯಿ ದರವು ಅಲ್ಪ ಇಳಿಕೆ ಆಗಿದ್ದು, ಸದ್ಯ ₹500–600 ದರದಲ್ಲಿ ಮಾರಾಟ ನಡೆದಿದೆ. ಖಾರದ ಮೆಣಸಿನಕಾಯಿ ₹250–300, ಒಣ ಕೊತ್ತಂಬರಿ (ಧನಿಯಾ) ₹120–150, ಗಸಗಸೆ ₹1350–1400 ರಂತೆ ಮಾರಾಟ ನಡೆದಿದೆ. ಟೊಮೆಟೊ ಬೆಲೆ ಏರಿಕೆಯಿಂದಾಗಿ ತಾನೂ ಬೆಲೆ ಏರಿಸಿಕೊಂಡಿದ್ದ ಹುಣಸೆಹಣ್ಣು ಅಗ್ಗವಾಗುತ್ತಿದ್ದು, ಸದ್ಯ ₹120–150ಕ್ಕೆ ಬೆಲೆ ಇಳಿಸಿಕೊಂಡಿದೆ.

ತರಕಾರಿ ದರ ಸ್ಥಿರ: ಈ ವಾರ ತರಕಾರಿಗಳು ಅಗ್ಗದ ದರದಲ್ಲಿ ಮುಂದುವರಿದಿವೆ. ಬೀನ್ಸ್‌ ಕೆ.ಜಿ.ಗೆ ₹10ರಷ್ಟು ಬೆಲೆ ಏರಿಸಿಕೊಂಡಿದ್ದರೆ, ದಪ್ಪ ಮೆಣಸಿನಕಾಯಿ ಬೆಲೆ ಇಳಿಸಿಕೊಳ್ಳುತ್ತಿದೆ. ಟೊಮೆಟೊ ಕನಿಷ್ಠ ದರಕ್ಕೆ ಕುಸಿದಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣು ಕೆ.ಜಿ.ಗೆ ₹10ರಂತೆ ಮಾರಾಟ ನಡೆದಿದೆ. ಸಗಟು ದರ ಪ್ರತಿ ಕೆ.ಜಿ.ಗೆ ₹5–6ಕ್ಕೆ ಕುಸಿದಿದ್ದು, ಬೆಳೆಗಾರರಿಗೆ ಉತ್ಪನ್ನದ ಖರ್ಚು ಸಹ ಸಿಗದಂತೆ ಆಗಿದೆ. ಈರುಳ್ಳಿ ದರ ಕೆ.ಜಿ.ಗೆ ಸರಾಸರಿ ₹5ರಷ್ಟು ಏರಿಕೆ ಆಗಿದೆ. ಶುಂಠಿ, ಬೆಳ್ಳುಳ್ಳಿ ಮಾತ್ರ ದುಬಾರಿಯಾಗಿಯೇ ಇವೆ.

ಸೊಪ್ಪಿನ ದರದಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ತರಕಾರಿ–ಸೊಪ್ಪಿನ ಮಾರುಕಟ್ಟೆಯಲ್ಲಿ ಮಂಗಳವಾರ ನಾಟಿ ಕೊತ್ತಂಬರಿ ಪ್ರತಿ ಕಂತೆಗೆ (ಸಣ್ಣ)₹5, ಮೆಂತ್ಯ ₹5, ಸಬ್ಬಸ್ಸಿಗೆ ₹10ಕ್ಕೆ 3, ಪಾಲಕ್‌ ₹4, ಕೀರೆ–ಕಿಲ್‌ಕೀರೆ ₹10ಕ್ಕೆ 4ರಂತೆ ಮಾರಾಟ ನಡೆದಿತ್ತು.

ಮಾರುಕಟ್ಟೆಯಲ್ಲಿ ದಾಳಿಂಬೆ ದರ ಕೊಂಚ ತಗ್ಗಿದೆ. ಬಾಳೆಹಣ್ಣು ದುಬಾರಿಯಾಗಿಯೇ ಮುಂದುವರಿದಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.