ADVERTISEMENT

ಮೈಸೂರು ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾ ವಿಜ್ಞಾನ ಕೇಂದ್ರ ಸಜ್ಜು

ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಎಂ.ಮಹೇಶ
Published 17 ಜುಲೈ 2025, 4:50 IST
Last Updated 17 ಜುಲೈ 2025, 4:50 IST
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಣಗಂದಲ್ಲಿ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿರುವುದು
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಣಗಂದಲ್ಲಿ ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿರುವುದು   

ಮೈಸೂರು: ಇಲ್ಲಿನ ನಜರ್‌ಬಾದ್‌ನಲ್ಲಿರುವ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ‘ಕ್ರೀಡಾ ವಿಜ್ಞಾನ ಕೇಂದ್ರ’ ಸ್ಥಾಪಿಸಲಾಗಿದ್ದು, ಇದೇ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.

ಈ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ 2025–26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಘೋಷಿಸಿದ್ದರು. ಕೆಲವೇ ತಿಂಗಳುಗಳಲ್ಲಿ ಅನುಷ್ಠಾನದ ಹಂತಕ್ಕೆ ಬಂದಿದೆ. ಕೇಂದ್ರದಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಶನಿವಾರದ ವೇಳೆಗೆ ಎಲ್ಲವೂ ಸಜ್ಜುಗೊಳ್ಳಲಿದೆ.

ಕ್ರೀಡಾ ವಿಜ್ಞಾನ ಕೇಂದ್ರ (ಸ್ಪೋರ್ಟ್ಸ್‌ ಸೈನ್ಸ್‌ ಸೆಂಟರ್‌) ಈವರೆಗೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ, ಸಾಂಸ್ಕೃತಿಕ ನಗರಿಗೂ ಈ ಸೇವೆ ದೊರೆತಂತಾಗಿದೆ. ಇದರಿಂದ ಇಲ್ಲಿನ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಅವರ ಗಾಯ ನಿವಾರಣೆಗೆ ವೈಜ್ಞಾನಿಕವಾದ ಉಪಶಮನವನ್ನು ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶವಾಗಿದೆ.

ADVERTISEMENT

ಬಜೆಟ್‌ನಲ್ಲಿ ಘೋಷಿಸಲಾಗಿತ್ತು: ₹ 3.50 ಕೋಟಿ ವೆಚ್ಚದಲ್ಲಿ ಕೇಂದ್ರವನ್ನು ಚಾಮುಂಡಿವಿಹಾರ ಕ್ರೀಡಾಂಗಣದ ಒಳಾಂಗಣದಲ್ಲಿ ಆರಂಭಿಸಲಾಗುತ್ತಿದೆ. ಕ್ರೀಡಾಪಟುಗಳಿಗೆ ಆಟೋಟಗಳ ಸಂದರ್ಭದಲ್ಲಿ ಆಗುವ ಗಾಯಗಳಿಗೆ ವೈಜ್ಞಾನಿಕವಾಗಿ ಚಿಕಿತ್ಸೆ ದೊರೆಯಲಿದೆ. ಫಿಸಿಯೋಥೆರಪಿ (ಭೌತಚಿಕಿತ್ಸೆ)ಯನ್ನೂ ನೀಡಲಾಗುವುದು. ಆಮ್ಲಜನಕ ಘಟಕವೂ ಕಾರ್ಯನಿರ್ವಹಿಸಲಿದೆ. ಒಳಾಂಗಣ ವಿನ್ಯಾಸ, ಉಪಕರಣಗಳ ಅಳವಡಿಕೆ ನಡೆಯುತ್ತಿದೆ. ವಿನ್ಯಾಸ ಮುಗಿದಿದೆ.

‘ಉದ್ಘಾಟನೆಯ ವೇಳೆಗೆ ಎಲ್ಲವೂ ಸಿದ್ಧಗೊಳ್ಳಲಿದೆ. ಸದ್ಯಕ್ಕೆ ಫಿಸಿಯೋಥೆರಪಿಸ್ಟ್‌ ಹಾಗೂ ಇತರ ತಾಂತ್ರಿಕ ಸಿಬ್ಬಂದಿಯನ್ನು ಬೆಂಗಳೂರು ಕೇಂದ್ರದಿಂದಲೇ ಬಳಸಿಕೊಳ್ಳಲಾಗುವುದು. ಕೇಂದ್ರದಿಂದ ನಮ್ಮಲ್ಲಿ ಅಭ್ಯಾಸ ಮಾಡುವವರು ಹಾಗೂ ಕ್ರೀಡಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ’ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌ ನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಗಾಯಗಳನ್ನು ತಡೆಯಲು ವಿಜ್ಞಾನದ ವಿಧಾನಗಳನ್ನು ಬಳಸುವ ಸಂಸ್ಥೆಯಾಗಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಇದು ವ್ಯಾಯಾಮ ಶರೀರಶಾಸ್ತ್ರ, ಕ್ರೀಡಾ ಮನೋವಿಜ್ಞಾನ, ಬಯೋಮೆಕಾನಿಕ್ಸ್ ಮುಂತಾದ ವಿವಿಧ ವಿಜ್ಞಾನ ಕ್ಷೇತ್ರಗಳನ್ನು ಒಳಗೊಂಡಿರಲಿದೆ.

ಏನೇನಿರಲಿದೆ?

ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ವೈಜ್ಞಾನಿಕ ತರಬೇತಿ ವಿಧಾನಗಳನ್ನು ಬಳಸುತ್ತವೆ. ಗಾಯಗಳನ್ನು ತಡೆಯಲು ಮತ್ತು ಚಿಕಿತ್ಸೆ ನೀಡಲು ವೈಜ್ಞಾನಿಕ ತಂತ್ರಗಳನ್ನು ಅನುಸರಿಸಲಾಗುವುದು. ಕ್ರೀಡಾ ವಿಜ್ಞಾನ ಮತ್ತು ತರಬೇತಿಯಲ್ಲಿ ಸಂಶೋಧನೆಯೂ ನಡೆಯಲಿದೆ. ಇದಕ್ಕಾಗಿ ಅಗತ್ಯವಾದ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತದೆ. ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಲು ತಜ್ಞರನ್ನು ನಿಯೋಜಿಸಲಾಗುತ್ತದೆ. ಈ ಕೇಂದ್ರವು ಕ್ರೀಡಾಪಟುಗಳಿಗೆ ಮಾತ್ರವಲ್ಲದೆ, ಫಿಟ್‌ನೆಸ್ ಬಯಸುವ ಉತ್ಸಾಹಿಗಳು, ಕ್ರೀಡಾಂಗಣಕ್ಕೆ ನಿತ್ಯವೂ ಅಭ್ಯಾಸಕ್ಕೆಂದು ಬರುವವರು ಮತ್ತು ಸಾಮಾನ್ಯ ಜನರಿಗೂ ಪ್ರಯೋಜನ ಆಗಲಿದೆ. ಇದರೊಂದಿಗೆ ಚಿಕಿತ್ಸೆ ಪಡೆಯುವುದಕ್ಕೆ ಇದ್ದ ಕೊರತೆ ನಿವಾರಣೆ ಆದಂತಾಗಲಿದೆ.

ಮೈಸೂರು ಜೊತೆಗೆ ಈ ಭಾಗದ ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮೊದಲಾದ ಜಿಲ್ಲೆಗಳ ಕ್ರೀಡಾಪಟುಗಳಿಗೂ ಅನುಕೂಲ ಆಗಲಿದೆ ಎಂದು ಆಶಿಸಲಾಗಿದೆ. ಫಿಟ್‌ನೆಸ್‌ ಕಾಯ್ದುಕೊಳ್ಳುವ ವಿಧಾನ ಮೊದಲಾದ ಮಾರ್ಗದರ್ಶನ ಹಾಗೂ ತರಬೇತಿಯೂ ಕ್ರೀಡಾಪಟುಗಳಿಗೆ ದೊರೆಯಲಿದೆ. 

ಈ ಕ್ರೀಡಾ ವಿಜ್ಞಾನ ಕೇಂದ್ರದಲ್ಲಿ ನಮ್ಮ ಕ್ರೀಡಾಪಟುಗಳೊಂದಿಗೆ ಇತರರಿಗೆ ಆಗುವ ಕ್ರೀಡಾ ಗಾಯಗಳಿಗೂ ಚಿಕಿತ್ಸೆ ನೀಡಲಾಗುವುದು

–ಭಾಸ್ಕರ್‌ ನಾಯಕ್‌ ಸಹಾಯಕ ನಿರ್ದೇಶಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.