ADVERTISEMENT

ಸ.ರ. ಸುದರ್ಶನ: ಕನ್ನಡದ ಗಟ್ಟಿ ಧ್ವನಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:00 IST
Last Updated 18 ಆಗಸ್ಟ್ 2025, 2:00 IST
ಮೈಸೂರಿನ ಕುವೆಂಪುನಗರದ ಗಧಾದರ ವೃತ್ತದಲ್ಲಿ ಟೀ ಅಂಗಡಿ ನಡೆಸುತ್ತಿರುವ ಭಾಗ್ಯಾ ಅವರಿಗೆ ಕನ್ನಡ ಕ್ರಿಯಾ ಸಮಿತಿಯಿಂದ ‘ನುಡಿ ಕನ್ನಡ’ ಘೋಷಣೆಯ ಕೊಡೆಯನ್ನು ನೀಡುವ ಕಾರ್ಯಕ್ರಮವನ್ನು ಸ.ರ. ಸುದರ್ಶನ ನಡೆಸಿಕೊಟ್ಟಿದ್ದರು
ಮೈಸೂರಿನ ಕುವೆಂಪುನಗರದ ಗಧಾದರ ವೃತ್ತದಲ್ಲಿ ಟೀ ಅಂಗಡಿ ನಡೆಸುತ್ತಿರುವ ಭಾಗ್ಯಾ ಅವರಿಗೆ ಕನ್ನಡ ಕ್ರಿಯಾ ಸಮಿತಿಯಿಂದ ‘ನುಡಿ ಕನ್ನಡ’ ಘೋಷಣೆಯ ಕೊಡೆಯನ್ನು ನೀಡುವ ಕಾರ್ಯಕ್ರಮವನ್ನು ಸ.ರ. ಸುದರ್ಶನ ನಡೆಸಿಕೊಟ್ಟಿದ್ದರು    

ಮೈಸೂರು: ಸ.ರ. ಸುದರ್ಶನ ಅವರು ಇಲ್ಲಿನ ಕನ್ನಡಪರವಾದ ಗಟ್ಟಿ ಧ್ವನಿಯಾಗಿದ್ದರು. ನೆಲ–ಜಲ–ಭಾಷೆಗೆ ಕುತ್ತು ಬಂದಾಗ ಹೋರಾಟ ಸಂಘಟಿಸದೇ ಬಿಡುತ್ತಿರಲಿಲ್ಲ. ಕನ್ನಡ ಅನುಷ್ಠಾನದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕನ್ನಡಪ್ರಜ್ಞೆ ಜಾಗೃತವಾಗಿರುವಂತೆ ಮಾಡುವಲ್ಲಿ ಶ್ರಮಿಸುತ್ತಿದ್ದರು.

ಗುರುವಾರವಷ್ಟೆ ನಡೆದಿದ್ದ ಕನ್ನಡ ಹೋರಾಟಗಾರರ ಸಭೆಯಲ್ಲಿ, ದಸರಾ ಪ್ರಚಾರ ಸಾಮಗ್ರಿಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕೆಂದು ಒತ್ತಾಯಿಸಿದ್ದರು.

ಚಾಮರಾಜನಗರ ಜಿಲ್ಲೆಯ ಸರಗೂರಿನ ಅವರು, ಮೈಸೂರನ್ನು ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದರು. ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ಗೆಳೆಯರು ಆರಂಭಿಸಿದ ಚೇತನ ಕನ್ನಡ ಸಂಘದ ಕಾರ್ಯದರ್ಶಿಯಾಗಿದ್ದರು. ಒಂದು ದಶಕಗಳಿಗೂ ಹೆಚ್ಚು ವಿಶಿಷ್ಟವಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಸಂಘವು ಮೈಸೂರಿನಲ್ಲಿ ಹೆಸರು ಮಾಡಿತ್ತು. ನಾಟಕ, ಚಳವಳಿ, ಪುಸ್ತಕ ಯಾತ್ರೆ, ಸಮೀಕ್ಷೆಗಳಂತಹ ಕಾರ್ಯಕ್ರಮಗಳ ಮೂಲಕ ಗಮನಸೆಳೆದಿತ್ತು.

ADVERTISEMENT

ಇಂಗ್ಲಿಷ್‌ನಲ್ಲಿ ಓದಿದರೂ: ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ಕನ್ನಡತನವನ್ನು ಬಿಟ್ಟುಕೊಡದ ಮಾತೃಭಾಷಾ ಪ್ರೇಮಿ. ಸರಳತೆಯನ್ನೂ ಮೈಗೂಡಿಸಿಕೊಂಡಿದ್ದರು. ಅವರು ಸ್ವತಃ ಪ್ರಕಟಿಸಿದ ‘ಶಾಲಾ ವಿದ್ಯಾರ್ಥಿಗಳಿಗಾಗಿ ಇಂಗ್ಲಿಷ್– ಕನ್ನಡ ನಿಘಂಟು’ ನಂತರ ವಿವಿಧ ಪ್ರಕಾಶಕರಿಂದ 15ನೇ ಮುದ್ರಣವನ್ನು ಕಂಡಿದೆ.

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್ ಕನ್ನಡ ನಿಘಂಟಿನ ಸಹಾಯಕ ಸಂಪಾದಕರಾಗಿ ಮೊದಲ ನೇಮಕ ಅವರದು. 14 ವರ್ಷಗಳ ಅನುಭವ. ನಂತರ ಅದೇ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಬಡ್ತಿ. ಉಪನಿರ್ದೇಶಕನಾಗಿ 2014ರಲ್ಲಿ ನಿವೃತ್ತಿ ಹೊಂದಿದ್ದರು.

ಮೈಸೂರಿನ ಅರಸರು ಸ್ಥಾಪಿಸಿದ, ಕನ್ನಡ ನಾಡಿನ ಮೊಟ್ಟ ಮೊದಲ ಬಾಲಕಿಯರ ಸರ್ಕಾರಿ ಶಾಲೆಯಾದ ಮಹಾರಾಣಿ ಮಾದರಿ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮದವರು ವಿವೇಕಾನಂದ ಸ್ಮಾರಕಕ್ಕಾಗಿ ಸರ್ಕಾರದಿಂದ ಪಡೆದುಕೊಂಡಾಗ ಶಾಲೆಯನ್ನು ಉಳಿಸಲು ದಶಕಗಳವರೆಗೆ ನಡೆದ ಹೋರಾಟದ ಮುಂಚೂಣಿಯಲ್ಲಿ ಭಾಗಿಯಾಗಿದ್ದರು.

ನೃಪತುಂಗ ಶಾಲೆ ಮೂಲಕ: ಗೋಕಾಕ್‌ ಚಳವಳಿ ನಂತರ ಕನ್ನಡಕ್ಕಾಗಿ ಒಂದು ಸೃಜನಾತ್ಮಕ ಕಾರ್ಯ ಕೈಗೊಳ್ಳಬೇಕೆಂಬ ಹಿರಿಯರು ಮತ್ತು ಗೆಳೆಯರ ಆಶಯದಂತೆ ಸ್ಥಾಪಿತವಾದ ನೃಪತುಂಗ ಕನ್ನಡ ಶಾಲೆಯ ಸ್ಥಾಪಕ ಧರ್ಮದರ್ಶಿಗಳಲ್ಲೊಬ್ಬರಾಗಿದ್ದರು. ನೃಪತುಂಗ ಕನ್ನಡ ಶಾಲೆ ಮೈಸೂರಿನ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 1991ರಲ್ಲಿ ಪ್ರಾರಂಭವಾಯಿತು. ಸಂಪೂರ್ಣ ಕನ್ನಡ ಮಾಧ್ಯಮದ ಶಾಲೆ ಇದು. ಈ ಶಾಲೆಯಲ್ಲಿ ಪ್ರತಿ ವರ್ಷ ದಾಖಲಾತಿ ಹೆಚ್ಚಳವಾಗುತ್ತಿರುವುದು ವಿಶೇಷ. ಸ್ವಂತ ಕಟ್ಟಡ ಹಾಗೂ ರಂಗಮಂದಿರವನ್ನು ಹೊಂದಿದೆ. ಸುದರ್ಶನ ಅವರು ಎರಡು ದಶಕಗಳಿಂದ ಈ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು. ಬಳಿಕ ಉಪಾಧ್ಯಕ್ಷರಾಗಿದ್ದರು. ನವಸಾಕ್ಷರರು ಹಾಗೂ ಮಕ್ಕಳಿಗಾಗಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ವಿಜ್ಞಾನವನ್ನು ಪ್ರಯೋಗಗಳ ಮೂಲಕ ಕಲಿಯಬೇಕೆಂಬುದು ಅವರ ಪ್ರತಿಪಾದನೆಯಾಗಿತ್ತು. ಇದಕ್ಕಾಗಿ ಬೇಕಾದ ವ್ಯವಸ್ಥೆಯನ್ನು ನೃ‍ಪತುಂಗ ಶಾಲೆಯಲ್ಲಿ ಮಾಡಿದ್ದರು.

ಮೂರು ವರ್ಷಗಳವರೆಗೆ ಕರ್ನಾಟಕ ವಿಜ್ಞಾನ ಅಕಾಡೆಮಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅಕಾಡೆಮಿಯಿಂದ ಪ್ರತಿ ವರ್ಷ ಕನ್ನಡ ವಿಜ್ಞಾನ ಸಮ್ಮೇಳನ ಮತ್ತು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬದುಕಾಗಿ ಅಳವಡಿಸಿಕೊಂಡು ಲೇಖನ ಕೃಷಿ ಮಾಡಿದ ಲೇಖಕರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಇಂಗ್ಲಿಷ್– ಕನ್ನಡ– ವಿಜ್ಞಾನ ನಿಘಂಟು ಮೊದಲಾದವುಗಳ ಪ್ರಸ್ತಾವನೆ ಮಂಡಿಸಿ, ಪ್ರೇರಕನ ಪಾತ್ರವನ್ನು ಅವರು ನಿರ್ವಹಿಸಿದ್ದರು. ಗೋಕಾಕ್‌ ಚಳವಳಿ ಕುರಿತು ಬರೆದಿರುವ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆಯಾಗಿದೆ. 

ಶಾಸ್ತೀಯ ಭಾಷೆ ಸ್ಥಾನಮಾನಕ್ಕಾಗಿ...

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡಬೇಕೆಂಬ ಹೋರಾಟದಲ್ಲಿ ಸುದರ್ಶನ ಭಾಗವಹಿಸಿದ್ದರು. ಈ ಕೇಂದ್ರವು ಮೈಸೂರಿನಲ್ಲೇ ಉಳಿಯಬೇಕೆಂಬ ಆಂದೋಲನದಲ್ಲಿ ಮುಂದಾಳತ್ವ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ರಚಿತವಾಗಿದ್ದ ಜಿಲ್ಲಾ ಕನ್ನಡ ಕಾವಲು ಸಮಿತಿ ಸದಸ್ಯರಾಗಿದ್ದರು. ಸಮಿತಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು. ಅಧಿಕಾರಿಗಳ ಮನವಿಯ ಮೇರೆಗೆ ರಾಜೀನಾಮೆ ವಾಪಸ್ ಪಡೆದುಕೊಂಡಿದ್ದರು.

ಮೈಸೂರಿನಲ್ಲಿ ದಶಕಗಳಿಂದ ನಡೆಯುತ್ತಿರುವ ಕನ್ನಡ ನಾಮಫಲಕ ಚಳವಳಿಯ ನೇತೃತ್ವ ವಹಿಸಿದ್ದರು. ದಶಕದ ಹಿಂದೆ ರಾಜ್ಯದಲ್ಲಿ 1ರಿಂದ 7ನೇ ತರಗತಿವರೆಗೆ ಮಾತೃಭಾಷೆ ಶಿಕ್ಷಣ ಮಾಧ್ಯಮ ಆಗಬೇಕೆಂದು ಹೈಕೋರ್ಟ್‌ನಲ್ಲಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಅರ್ಜಿದಾರನಾಗಿ ಅರ್ಜಿ (ರಿಟ್ ಆಫ್ ಮ್ಯಾಂಡಮಸ್) ಸಲ್ಲಿಸಿದ್ದರು.‌ ಶಿಕ್ಷಣ ಮಾಧ್ಯಮದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಹೂಡಲಾಗಿದ್ದ ದಾವೆಯಲ್ಲಿ ಮಧ್ಯಪ್ರವೇಶ ಅರ್ಜಿದಾರರಲ್ಲಿ ಒಬ್ಬರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.