ADVERTISEMENT

ಕೋವಿಡ್ ಭೀತಿ | ಸರಳವಾಗಿ ದಸರಾ ಆಚರಣೆಗೆ ಚಿಂತನೆ: ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 9:16 IST
Last Updated 7 ಆಗಸ್ಟ್ 2021, 9:16 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಮೈಸೂರು: ಕೊರೊನಾ ಸೋಂಕಿನ ಭೀತಿಯಿಂದ ಈ ಬಾರಿ ಸರಳ ದಸರೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಇಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ದಸರೆಯ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ದವಾದ ನಂತರ ಮುಖ್ಯಮಂತ್ರಿ ಗಮನಕ್ಕೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ನ್ನು ಸುರಿಯುತ್ತಿದ್ದ ಮಳೆಯ ನಡುವೆ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಪರಿಶೀಲನೆ ನಡೆಸಿದರು.

ಕೇರಳದಿಂದ ಬರುವವರು 72 ಗಂಟೆಗಳಿಗೆ ಮೀರದ ಕೋವಿಡ್ ಆರ್ ಟಿ ಪಿ ಸಿ ಆರ್ ಪರೀಕ್ಷೆ ನೆಗೆಟೀವ್ ವರದಿ ಕಡ್ಡಾಯವಾಗಿ ಹೊಂದಿರಬೇಕು. ಈ ವರದಿ ಇಲ್ಲದವರನ್ನು ನಿರ್ದಾಕ್ಷಿಣ್ಯವಾಗಿ ವಾಪಸ್ ಕಳುಹಿಸಬೇಕು ಎಂದು ಇಲ್ಲಿನ ಸಿಬ್ಬಂದಿಗೆ ಅವರು ಸೂಚಿಸಿದರು.

ಇಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಅರಣ್ಯ ಇಲಾಖೆ ತಂಡಗಳು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿವೆ. ಸದ್ಯ ಕೇರಳದಿಂದ ಬರುವ ಎಲ್ಲರೂ ಆರ್ ಟಿ ಪಿ ಸಿ ಆರ್ ನೆಗೆಟೀವ್ ವರದಿಯೊಂದಿಗೆ ಬರುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ‌.ರವಿಕುಮಾರ್ ತಿಳಿಸಿದರು.

ವಾರಾಂತ್ಯ ಲಾಕ್ ಡೌನ್ ಇರುವುದರಿಂದ ಸರಕು ಸಾಗಣೆ ವಾಹನಗಳಿಗೆ ಆರ್ ಟಿ ಪಿ ಸಿ ಆರ್ ನೆಗೆಟೀವ್ ವರದಿ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, ಪ್ರಯಾಣಿಕರ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.