ADVERTISEMENT

ಮೈಸೂರು: ಜೆಡಿಎಸ್‌ಗೆ ಎಲ್ಲ ಸ್ಥಾನ: ಬಿಜೆಪಿ ಅಸ್ತು!

ಮಾರ್ಚ್‌ 13ರಂದು ನಗರಪಾಲಿಕೆ ಸ್ಥಾಮಿ ಸಮಿತಿಗಳ ಅಧ್ಯಕ್ಷರ ಚುನಾವಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 9:05 IST
Last Updated 7 ಮಾರ್ಚ್ 2023, 9:05 IST
ಮೈಸೂರು ಮಹಾನಗರಪಾಲಿಕೆಯ ನೋಟ
ಮೈಸೂರು ಮಹಾನಗರಪಾಲಿಕೆಯ ನೋಟ   

ಮೈಸೂರು: ನಗರ‍ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಮಾರ್ಚ್‌ 13ರಂದು ಬೆಳಿಗ್ಗೆ 11ಕ್ಕೆ ಚುನಾವಣೆ ನಡೆಯಲಿದೆ. ಇದರೊಂದಿಗೆ, ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಮುಹೂರ್ತ ನಿಗದಿಯಾದಂತಾಗಿದೆ.

ಚುನಾವಣೆ ನಡೆಸದ ಮೇಯರ್ ಶಿವಕುಮಾರ್‌ ಧೋರಣೆ ವಿರುದ್ಧ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸದಸ್ಯರು ಕೂಡ ಕೌನ್ಸಿಲ್‌ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಪಾಲಿಕೆಯಲ್ಲಿ ಇದೇ ಮೊದಲಿಗೆ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಗಳು ಬಿಜೆಪಿ ಪಾಲಾಗಿವೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೂ ಜೆಡಿಎಸ್‌ಗೆ ಉಪ ಮೇಯರ್‌ ಸೇರಿದಂತೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ, ನಾಲ್ಕೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನಾದರೂ ಬಿಟ್ಟುಕೊಡಬೇಕು ಎನ್ನುವುದು ಜೆಡಿಎಸ್‌ನವರ ವಾದವಾಗಿದೆ. ಇದಕ್ಕೆ ಬಿಜೆಪಿ ಒಪ್ಪಿರಲಿಲ್ಲ. ಇದರಿಂದಾಗಿ ಚುನಾವಣೆಯು ನನೆಗುದಿಗೆ ಬಿದ್ದಿತ್ತು.

ADVERTISEMENT

ಇದೀಗ, ಬಿಜೆಪಿ–ಜೆಡಿಎಸ್‌ ಮಾತುಕತೆ ಫಲಪ್ರದವಾಗಿದ್ದು, ಜೆಡಿಎಸ್‌ಗೆ ಗಾದಿಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿದೆ. ಹೀಗಾಗಿ, ಚುನಾವಣೆಯ ಹಾದಿ ಸುಗಮವಾದಂತಾಗಿದೆ ಎಂದು ಮೂಲಗಳು ತಿಳಿಸಿದೆ.

ಸೆಪ್ಟೆಂಬರ್‌ನಿಂದ:

ಹೋದ ವರ್ಷ ಸೆ.6ರಂದು ಮೇಯರ್‌ ಹಾಗೂ ಉಪ ಮೇಯರ್ ಚುನಾವಣೆ ನಡೆದಿತ್ತು. ಅದರೊಂದಿಗೆ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆಯೂ ಮುಗಿದಿತ್ತು. ಇದಾಗಿ ಬರೋಬ್ಬರಿ ಆರು ತಿಂಗಳ ನಂತರ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.

ಬಿಜೆಪಿ–ಜೆಡಿಎಸ್‌ ನಡುವೆ ಅಧಿಕಾರ ಹಂಚಿಕೆ ಸೂತ್ರದಲ್ಲಿ ವ್ಯತ್ಯಾಸ ಉಂಟಾಗಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಹೋದ ತಿಂಗಳು ನಿಗದಿಯಾಗಿತ್ತಾದರೂ, ಜೆಡಿಎಸ್‌ ಸದಸ್ಯರಿಗೆ ಅನಾರೋಗ್ಯ ಎಂಬ ಕಾರಣ ನೀಡಿದ್ದ ಮೇಯರ್‌ ಕೊನೆ ಕ್ಷಣದಲ್ಲಿ ಚುನಾವಣೆಯನ್ನು ಮುಂದೂಡಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್‌ನವರು ಪ್ರತಿಭಟಿಸಿದ್ದರು. ಪ್ರಾದೇಶಿಕ ಆಯುಕ್ತರಿಗೆ ದೂರನ್ನೂ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರಿಂದ ಬಂದ ನಿರ್ದೇಶನ ಆಧರಿಸಿ ಚುನಾವಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತಪ್ಪು ಸಂದೇಶ ಹೋಗದಿರಲೆಂದು:

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಹಾಗೂ ಜನರಿಗೆ ತಪ್ಪು ಸಂದೇಶ ರವಾನೆಯಾಗಲು ಅವಕಾಶ ಕೊಡಬಾರದು ಎಂದು ಬಿಜೆಪಿಯ ನಾಯಕರ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ನಾಲ್ಕು ಸ್ಥಾನಗಳೂ ಜೆಡಿಎಸ್‌ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ.

ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಸಮ್ಮುಖದಲ್ಲಿ ಜೆಡಿಎಸ್ ಸದಸ್ಯರ ಸಭೆ ನಡೆದಿದೆ. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಆರ್.ನಾಗರಾಜು, ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿಗೆ ಕೆ.ವಿ.ಶ್ರೀಧರ್‌ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗೆ ವಿ.ರಮೇಶ್‌ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ಅಂತಿಮಗೊಂಡಿಲ್ಲ ಎಂದು ಗೊತ್ತಾಗಿದೆ.

ಪ್ರತಿ ಸಮಿತಿಯಲ್ಲೂ ಏಳು ಮಂದಿ ಸದಸ್ಯರಿದ್ದಾರೆ. ನಾಲ್ಕು ಮತಗಳನ್ನು ಪಡೆಯುವವರು ಅಧ್ಯಕ್ಷ ಸ್ಥಾನ ಗಳಿಸಲಿದ್ದಾರೆ. ಜೆಡಿಎಸ್‌–ಬಿಜೆಪಿ ದೋಸ್ತಿ ಮಾಡಿಕೊಂಡಿರುವುದರಿಂದ ಆ ಬಣದವರೇ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ನಿಗದಿ

ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಮಾರ್ಚ್‌ 13ರಂದು ಚುನಾವಣೆ ನಿಗದಿಪಡಿಸಲಾಗಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ಕೊಡಬೇಕು ಎನ್ನುವುದು ಇನ್ನೂ ‌ಸ್ಪಷ್ಟವಾಗಿಲ್ಲ.

–ಶಿವಕುಮಾರ್, ಮೇಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.