ADVERTISEMENT

ಪಿಎಸ್‌ಎಸ್‌ಕೆ ಆರಂಭಕ್ಕೆ ಕೈ ಜೋಡಿಸಲು ಕರೆ

ಕನ್ನಡ ಚಳವಳಿ ಕೇಂದ್ರ ಸಮಿತಿ, ಕನ್ನಡ ಸಾಹಿತ್ಯ ಕಲಾಕೂಟದ ಪದಾಧಿಕಾರಿಗಳಿಂದ ಜಂಟಿ ಸುದ್ದಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 13:44 IST
Last Updated 18 ಜುಲೈ 2020, 13:44 IST
ಎಂ.ಚಂದ್ರಶೇಖರ್
ಎಂ.ಚಂದ್ರಶೇಖರ್   

ಮೈಸೂರು: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಪುನಶ್ಚೇತನಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಒತ್ತಾಯಿಸಿವೆ.

ಈ ಕುರಿತು ಶನಿವಾರ ಇಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ಸಂಘಟನೆಗಳ ಪದಾಧಿಕಾರಿಗಳು ಕಾರ್ಖಾನೆಯ ಆರಂಭವನ್ನು ಸ್ವಾಗತಿಸಿದರು.

‘ಕಾರ್ಖಾನೆಯ ಗುತ್ತಿಗೆ ಪಡೆದಿರುವ ಶಾಸಕ ಮುರುಗೇಶ್‌ ನಿರಾಣಿ ಸಕ್ಕರೆ ತಂತ್ರಜ್ಞಾನದಲ್ಲಿ ಅಪಾರ ಅನುಭವ ಹೊಂದಿದ್ದಾರೆ. 7 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಇವರ ಸುಪರ್ದಿಯಲ್ಲಿ ಕಾರ್ಖಾನೆ ಯಶಸ್ವಿಯಾಗಿ ಮುನ್ನಡೆಯುವ ವಿಶ್ವಾಸ ಇದೆ’ ಎಂದು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.

ADVERTISEMENT

ಸುಮಾರು 60 ವರ್ಷ ಹಳೆಯದಾದ ಈ ಕಾರ್ಖಾನೆಯಲ್ಲಿ 450 ಕಾರ್ಮಿಕರು ಇದ್ದಾರೆ. ಸಾವಿರಾರು ರೈತ ಕುಟುಂಬಗಳಿಗೆ ಇದುವೇ ಆಧಾರ ಎನಿಸಿದೆ. ಸರ್ಕಾರ ಎಷ್ಟೇ ಆರ್ಥಿಕ ಶಕ್ತಿ ತುಂಬಿದರೂ ಇದನ್ನು ನಡೆಸಲಾಗಲಿಲ್ಲ. ಈಗ ನಿರಾಣಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ನಿರಾಣಿ ಅವರಿಗೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿರುವುದು ಸರಿಯಾದ ಕ್ರಮ ಅಲ್ಲ ಎಂದು ಕೆಲವರು ಅನಗತ್ಯವಾಗಿ ವಿವಾದ ಎಬ್ಬಿಸುತ್ತಿದ್ದಾರೆ. ನ್ಯಾಯಾಲಯವೂ ಈ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿಲ್ಲ. ಸಾವಿರಾರು ಮಂದಿ ರೈತರಿಗೆ ಅನುಕೂಲವಾಗುತ್ತದೆ ಎನ್ನುವುದಾದರೆ ನಿರಾಣಿ ಅವರಿಗೆ ಬೆಂಬಲ ಏಕೆ ನೀಡಬಾರದು ಎಂದು ಪ್ರಶ್ನಿಸಿದರು.

ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ‘ಕಬ್ಬು ಅರೆಯಲು ನಿರಾಣಿ ಶುಗರ್ಸ್‌ಗೆ ಯಾರೂ ಅಡಚಣೆ ಉಂಟು ಮಾಡಬಾರದು. ಒಂದು ವೇಳೆ ಇತರೆ ಸಕ್ಕರೆ ಕಾರ್ಖಾನೆಗಳು ತೊಂದರೆ ಕೊಟ್ಟಲ್ಲಿ ಪ್ರತಿ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ಕನ್ನಡ ವೇದಿಕೆಯ ಅಧ್ಯಕ್ಷ ಸುರೇಶ್‌ಬಾಬು, ಸಾಮಾಜಿಕ ಕಾರ್ಯಕರ್ತ ಮಹೇಶ್, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪರಿಸರವಾದಿ ಭಾನು ಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.