ADVERTISEMENT

ಚಾಮರಾಜೇಂದ್ರ ಒಡೆಯರ್‌ ಪ್ರತಿಮೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 10:21 IST
Last Updated 16 ಅಕ್ಟೋಬರ್ 2021, 10:21 IST
ಮೈಸೂರಿನ ಚಾಮರಾಜೇಂದ್ರ ವೃತ್ತದ ಪ್ರತಿಮೆ ಹಾನಿಗೀಡಾಗಿದ್ದು, ಕತ್ತಿ ಮುರಿದಿದೆ
ಮೈಸೂರಿನ ಚಾಮರಾಜೇಂದ್ರ ವೃತ್ತದ ಪ್ರತಿಮೆ ಹಾನಿಗೀಡಾಗಿದ್ದು, ಕತ್ತಿ ಮುರಿದಿದೆ   

ಮೈಸೂರು: ಕೋಟೆ ಆಂಜನೇಯಸ್ವಾಮಿ ದೇವಾಲಯದ ಎದುರು ಇರುವ ಚಾಮರಾಜೇಂದ್ರ ವೃತ್ತದ ಅಮೃತಶಿಲೆಯ ಪ್ರತಿಮೆಗೆ ಹಾನಿಯಾಗಿರುವುದು ಶನಿವಾರ ಬೆಳಕಿಗೆ ಬಂದಿದೆ.

ಅರಮನೆಗೆ ಜಂಬೂಸವಾರಿ ಸೀಮಿತವಾಗಿದ್ದರಿಂದ, ಅದನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ಜಮಾಯಿಸಿದ್ದ ಸಾವಿರಾರು ಮಂದಿ ಎತ್ತರದ ಈ ವೃತ್ತದಲ್ಲಿ ಸೇರಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿತ್ತು. ಚಾಮರಾಜೇಂದ್ರ ಒಡೆಯರ್‌ ಪ್ರತಿಮೆಯ ಕತ್ತಿಯನ್ನು ಜನರು ಹಿಡಿದಿದ್ದರಿಂದ ಮುರಿದಿದೆ. ಈ ಹಿಂದೆಯೂ ಮೂರು ಬಾರಿ ಕತ್ತಿ ಮುರಿದಿತ್ತು. ಅದನ್ನು ದುರಸ್ತಿಗೊಳಿಸಲಾಗಿತ್ತು.

ಪಾಲಿಕೆಯ ಸಿಬ್ಬಂದಿ ಮುರಿದ ಕತ್ತಿಯನ್ನು ಶನಿವಾರ ತೆಗೆದುಕೊಂಡು ಹೋದರು. ‘ಕತ್ತಿಯನ್ನು ಶೀಘ್ರವೇ ದುರಸ್ತಿಗೊಳಿಸಿ ಪ್ರತಿಮೆಗೆ ಜೋಡಿಸಲಾಗುವುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪ್ರತಿಮೆಯ ಇಕ್ಕೆಲಗಳಲ್ಲಿದ್ದ ಹೂಕುಂಡಗಳು ಪುಡಿಯಾಗಿದ್ದವು. ಗಿಡಗಳು ಮುರಿದಿದ್ದವು. ವೃತ್ತದ ಮೆಟ್ಟಿಲುಗಳ ಪಕ್ಕ ನಿರ್ಮಿಸಲಾಗಿದ್ದ ರಕ್ಷಣಾ ಗೋಡೆಗಳು ಹಾನಿಗೊಂಡಿದ್ದವಲ್ಲದೆ ಕೆಲವೆಡೆ ಕುಸಿದಿದ್ದವು. ದೀಪಾಲಂಕಾರದ ದೊಡ್ಡ ಬಲ್ಬ್‌ಗಳು ಪುಡಿ ಪುಡಿಯಾಗಿದ್ದವು. ವೃತ್ತದ ದೀಪಾಲಂಕಾರವನ್ನು ಪ್ರಾಯೋಜಿಸಿದ್ದ ಕಂಪನಿಯ ಜಾಹೀರಾತು ಫಲಕ, ಬಲ್ಬ್‌ಗಳೂ ಹಾನಿಗೀಡಾಗಿದ್ದವು. ಬಲ್ಬ್‌ಗಳ ಗಾಜಿನ ಚೂರುಗಳ ರಾಶಿಯೇ ಪ್ರತಿಮೆಯ ಅಂಗಳದಲ್ಲಿ ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.